ದೊಡ್ಡಬಳ್ಳಾಪುರ: ಬಿಜೆಪಿ ಯುವ ಮೋರ್ಚಾದ ವತಿಯಿಂದ ತಾಲೂಕಿನ ಕೊನಘಟ್ಟ ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ 113ನೇ ಜನ್ಮ ದಿನಾಚರಣೆ ಹಾಗೂ ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ವಿಶ್ವಾಸ್ ಗೌಡ, ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಅಜಯ್ ಗೌಡ, ಕೊನಘಟ್ಟ ಗ್ರಾಪಂ ಮಾಜಿ ಸದಸ್ಯ ರಾಮಾಂಜಿನಪ್ಪ ಮಾತನಾಡಿ, ಬ್ರಿಟೀಷರ ಕಪಿ ಮುಷ್ಟಿಯಿಂದ ದೇಶವನ್ನು ಮುಕ್ತಗೊಳಿಸಲು ಕ್ರಾಂತಿಕಾರಿ ಮಾರ್ಗ ಅನುಸರಿಸಿದ ಭಗತ್ ಸಿಂಗ್ ಯುವಜನತೆಗೆ ಪ್ರೇರಣೆಯಾಗಿದ್ದಾರೆ. ತಮ್ಮ ಇಬ್ಬರು ಸಂಗಾತಿಗಳಾದ ರಾಜಗುರು ಮತ್ತು ಸುಖದೇವ್ ಅವರ ಜೊತೆ ಭಗತ್ ಸಿಂಗ್ ಅವರನ್ನು ಗಲ್ಲಿಗೇರಿಸಲ್ಪಟ್ಡಾಗ ಅವರಿಗೆ ಕೇವಲ 23 ವರ್ಷವಾಗಿತ್ತು. ಮದುವೆಯಾಗಲು ನಿರಾಕರಿಸಿ, ದೇಶಕ್ಕೆ ತನ್ನ ಜೀವವನ್ನು ಮುಡುಪಾಗಿಟ್ಟ ಇಂತಹ ದೇಶಭಕ್ತರನ್ನು ನಾವು ಸದಾ ಸ್ಮರಿಸಬೇಕಿದೆ. ಯುವ ಜನತೆ ಮಾದಕ ವಸ್ತು ಮೊದಲಾದ ದುಶ್ಚಟಗಳಿಗೆ ದಾಸರಾಗದೇ ಒಳ್ಳೆಯ ಮಾರ್ಗದಲ್ಲಿ ನಡೆಯಬೇಕಿದೆ ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ರಾಮಾಂಜಿನಪ್ಪ ಮಾತನಾಡಿ, ಯುವ ಜನತೆ ಹೆಚ್ಚಾಗಿ ಮಾದಕ ವಸ್ತುಗಳ ವ್ಯಸನಕ್ಕೆ ತುತ್ತಾಗುತ್ತಿರುವುದು ದೇಶಕ್ಕೆ ಮಾರಕವಾಗಿದೆ. ಈ ನಿಟ್ಟಿನಲ್ಲಿ ಜನಜಾಗೃತಿ ಮೂಡಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಯುವ ಮೋರ್ಚಾ ಅಧ್ಯಕ್ಷರಾದ ಕಿರಣ್ ಗೌಡ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಲೋಕೇಶ್, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಜನಪರ ಮಂಜು, ತಾಲೂಕು ಯುವ ಮೋರ್ಚಾದ ಕಾರ್ಯದರ್ಶಿ ಯಶವಂತ್, ಚಂದ್ರು, ರಮೇಶ್, ಮಹೇಶ್, ವಿನಯ್ ಗೌಡ ಹಾಗೂ ಯುವ ಮೋರ್ಚಾ ಕಾರ್ಯಕರ್ತರು ಭಾಗವಹಿಸಿದ್ದರು.

