ದೊಡ್ಡಬಳ್ಳಾಪುರ; ಬೆಸ್ಕಾಂನಿಂದ ಹೊಸ ಘಟಕಕ್ಕೆ ವಿದ್ಯುತ್ ಸಂಪರ್ಕ ಪಡೆದ ನೇಕಾರರಿಗೆ ಸರ್ಕಾರದಿಂದ ನೀಡಲಾಗುವ ರಿಯಾಯಿತಿ ವಿದ್ಯುತ್ ಸಹಾಯಧನವನ್ನು ನಿಲ್ಲಿಸಿದ್ದು, ನೇಕಾರರ ಸವಲತ್ತುಗಳನ್ನು ಕಸಿದುಕೊಳ್ಳುತ್ತಿರುವ ಹುನ್ನಾರದ ವಿರುದ್ದ ರಾಜ್ಯ ಮಟ್ಟದ ಹೋರಾಟ ರೂಪಿಸಲಾಗುವುದು ಎಂದು ನೇಕಾರರ ಹೋರಾಟ ಸಮಿತಿಯ ಅಧ್ಯಕ್ಷ ಬಿ.ಜಿ.ಹೇಮಂತರಾಜು ಹೇಳಿದ್ದಾರೆ.
ನಗರದ ಡಿಪಿವಿ ಕಲ್ಯಾಣ ಮಂದಿರದಲ್ಲಿ ನೇಕಾರರ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ನೇಕಾರರ ಸಭೆಯಲ್ಲಿ ಅವರು ಮಾತನಾಡಿದರು.
ಇತ್ತೀಚೆಗೆ ನೇಕಾರರು ಸ್ಥಾಪಿಸಿರುವ ಹೊಸ ವಿದ್ಯುತ್ ಘಟಕಗಳಿಗೆ ಸರ್ಕಾರದಿಂದ ಬರಬೇಕಾದ ಸಹಾಯಧನ ಬರುತ್ತಿಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ ವಿದ್ಯುತ್ ರಿಯಾಯಿತಿ ಕುರಿತಂತೆ ಜವಳಿ ಇಲಾಖೆಯ ಪತ್ರಕ್ಕೆ ಉತ್ತರ ನೀಡಿರುವ ಬೆಸ್ಕಾಂ ಕಂಪನಿಯ ಪ್ರಧಾನ ವ್ಯವಸ್ಥಾಪಕರು, ಸರ್ಕಾರದಿಂದ ಜೂನ್2020ರ ಅಂತ್ಯಕ್ಕೆ ರಿಯಾಯಿತಿ ವಿದ್ಯುತ್‌ನ ಬಾಕಿ 195.05 ಕೋಟಿ ಇದೆ. ಆರ್ಥಿಕ ವರ್ಷ 2020-21 ರಲ್ಲಿ ಯಾವುದೇ ಸಹಾಯಧನ ಬಿಡುಗಡೆ ಮಾಡಿಲ್ಲ. ಸಹಾಯಧನ ಬಾಕಿಯು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕಂಪನಿಯ ನಿರ್ವಹಣಾ ವೆಚ್ಚವನ್ನು ಭರಿಸಲು ನೇಕಾರರ ವಿದ್ಯುತ್ ಸಹಾಯಧನದ ಬಾಕಿ ಮೊತ್ತವನ್ನು ಪೂರ್ಣವಾಗಿ ಬಿಡುಗಡೆ ಮಾಡುವವರೆಗೂ ಹೊಸ ನೇಕಾರ ಫಲಾನುಭವಿಗಳಿಗೆ ವಿದ್ಯುತ್ ರಿಯಾಯಿತಿಯನ್ನು ವಿಸ್ತರಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಈಗಾಗಲೇ ವಿದ್ಯುತ್ ಖಾಸಗೀಕರಣ ಮಾಡುವ ವ್ಯವಸ್ಥೆಗಳು ನಡೆಯುತ್ತಿದ್ದು, ನೇಕಾರರಿಗೆ ಹೆಚ್ಚಿನ ಹೊರೆಯಾಗಲಿದೆ ಇದಲ್ಲದೇ ನೇಕಾರರು ಈ ಹಿಂದೆ ಗುಂಪು ವಿಮಾ ಯೋಜನೆಯಡಿ ಪಡೆದಿದ್ದ ವಿಮಾ ಸೌಲಭ್ಯಗಳು ಫಲಾನುಭವಿಗಳಿಗೆ ತಲುಪಿಲ್ಲಎಂದರು.
ಜವಳಿ ಸಚಿವರಿಗೆ ಮನವಿ:
ನೇಕಾರರು ಕೊವಿಡ್-19ನಿಂದಾಗಿ ಸಂಕಷ್ಟಕ್ಕೀಡಾಗಿದ್ದು, ಸರ್ಕಾರ ನೇಕಾರರಿಂದ ನೇರವಾಗಿ ಬಟ್ಟೆ ಖರೀದಿಸಬೇಕು. ನೇಕಾರರನ್ನು ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರಿಸಬೇಕು. ನೇಕಾರರಿಗೆ ಆರ್ಥಿಕ ನೆರವು ನೀಡಲು ಕ್ರಮ ಕೈಗೊಳ್ಳಬೇಕು ಎನ್ನುವ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ನೇಕಾರರ ಹೋರಾಟ ಸಮಿತಿ ನಿಯೋಗ ಜವಳಿ ಸಚಿವ ಶ್ರೀಮಂತ ಪಾಟೀಲ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿದ್ದ ಜವಳಿ ಸಚಿವರು, ಸೀರೆ ನೇಕಾರರ ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡುವುದಾಗಿ ಹಾಗೂ ಶೀಘ್ರವೇ ದೊಡ್ಡಬಳ್ಳಾಪುರಕ್ಕೆ ಭೇಟಿ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಯಾವುದೇ ಭರವಸೆ ಈಡೇರಿಲ್ಲ ಎಂದರು.
ಹೋರಾಟಕ್ಕೆ ನೇಕಾರರು ಸಜ್ಜು:
ಆಂಧ್ರ ಮತ್ತು ತಮಿಳುನಾಡಿನಲ್ಲಿ ನೇಕಾರರಿಗೆ, ವಿದ್ಯುತ್ ಸಹಾಯಧನ ಸೇರಿದಂತೆ ವಿವಿಧ ಸೌಲಭ್ಯಗಳಿವೆ. ಕೊವಿಡ್ ಸಮಯದಲ್ಲಿಯೂ ಸಹ ಹೆಚ್ಚಿನ ಸಹಾಯ ಸರ್ಕಾರದಿಂದ ದೊರೆತಿದೆ. ಆದರೆ ನಮ್ಮ ರಾಜ್ಯದಲ್ಲಿ ನೇಕಾರರನ್ನು ನಿರ್ಲಕ್ಷಿಸಲಾಗುತ್ತಿದೆ. ನೇಕಾರರಿಗೆ ಹೊಸ ಸೌಲಭ್ಯ ನೀಡುವುದಿರಲಿ ವಿದ್ಯುತ್ ರಿಯಾಯಿತಿ, ನೇಕಾರರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಗುಂಪು ವಿಮೆ ಮೊದಲಾದ ಯೋಜನೆಗಳನ್ನು ನಿಲ್ಲಿಸುತ್ತಿರುವುದು ದುರಂತವಾಗಿದೆ. ಈ ದಿಸೆಯಲ್ಲಿ ನೇಕಾರರು ಸರ್ಕಾರದ ಗಮನ ಸೆಳೆಯುವುದು ಅಗತ್ಯವಾಗಿದೆ ಎಂದು ಸಭೆಯಲ್ಲಿದ್ದ ನೇಕಾರರು ಅಭಿಪ್ರಾಯ ಪಟ್ಟರು.
ರಾಜ್ಯ ಮಟ್ಟದ ನೇಕಾರರ ಮುಖಂಡರೊಡನೆ ಸಭೆ ನಡೆಸುವುದು. ನೇಕಾರರ ಸಂಕಷ್ಟ ಆಲಿಸಲು ಜವಳಿ ಸಚಿವರನ್ನು ದೊಡ್ಡಬಳ್ಳಾಪುರಕ್ಕೆ ಕರೆಸುವುದು. ಹಂತ ಹಂತವಾಗಿ ಹೋರಾಟ ನಡೆಸಲು ಸಜ್ಜಾಗುವ ಕುರಿತು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಯ ನೇಕಾರರ ಉತ್ಪಾದನಾ ಮತ್ತು ಮಾರಾಟ ಸಹಕಾರ ಮಂಡಳಿ ಅಧ್ಯಕ್ಷ ಪಿ.ಸಿ.ವೆಂಕಟೇಶ್ ಸೇರಿದಂತೆ ನೇಕಾರರು ಭಾಗವಹಿಸಿದ್ದರು.

