ಬೆಂಗಳೂರು: ಚುನಾವಣೆಯ ಲಾಭಕ್ಕಾಗಿ ಗೊಲ್ಲ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆ ಸೂಚನೆಯನ್ನು, ಕಾಡುಗೊಲ್ಲ ಅಭಿವೃದ್ಧಿ ನಿಗಮವನ್ನಾಗಿಸಿರುವುದು ಖಂಡನೀಯ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ ಯುವ ಅಧ್ಯಕ್ಷ ಕಣಿವೇಪುರ ಸುನೀಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಮಂಗಳವಾರ ಸಂಜೆ ರಾಜ್ಯ ಸರ್ಕಾರ ಕಾಡುಗೊಲ್ಲ ಅಭಿವೃದ್ದಿ ನಿಗಮ ಸ್ಥಾಪನೆ ಆದೇಶದ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಅವರು, ಶಿರಾ ಉಪಚುನಾವಣೆಯಲ್ಲಿ ರಾಜಕೀಯ ಲಾಭಕ್ಕಾಗಿ ಗೊಲ್ಲ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆ ಸೂಚನೆಯನ್ನು ಕಾಡುಗೊಲ್ಲ ಅಭಿವೃದ್ಧಿ ನಿಗಮ ಮಂಡಳಿ ಎಂದು ಬದಲಿಸುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಇಡೀ ಗೊಲ್ಲ ಸಮುದಾಯಕ್ಕೆ ಅನ್ಯಾಯ ಮಾಡಿದೆ.
ರಾಜ್ಯದಲ್ಲಿ ಗೊಲ್ಲ ಜನಾಂಗ ಎಲ್ಲಾ ಉಪ ಪಂಗಡಗಳನ್ನು ಸೇರಿ 36 ಲಕ್ಷ ಜನಸಂಖ್ಯೆಯನ್ನು ಹೊಂದಿದೆ. ಈ ಸಮುದಾಯದ ಜನ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ವಂಚಿತರಾಗಿದ್ದು ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸುವುದು ಅಗತ್ಯವಾಗಿತ್ತು.
ಅಲ್ಲದೆ ಬಿ.ಎಸ್.ಯಡಿಯೂರಪ್ಪನವರು ಮಂಗಳವಾರ ಬೆಳಗ್ಗೆ ತಾನೆ ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆದೇಶಿಸಿದ್ದರು. ಆದರೆ, ಶಿರಾ ಉಪ ಚುನಾವಣೆಯ ಕಾರಣ ಅ ವ್ಯಾಪ್ತಿಯಲ್ಲಿ ಕಾಡುಗೊಲ್ಲ ಜನಾಂಗದವರು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಾಜಕೀಯ ಸ್ವಾರ್ಥಕ್ಕೆ ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪನೆ ಆದೇಶವನ್ನು ಪರಿಷ್ಕರಿಸಿ, ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆದೇಶಿಸಿರುವುದು ಖಂಡನೀಯ ಎಂದರು.
ಕಾಡುಗೊಲ್ಲ ಜನಾಂಗ ಸಹ ಗೊಲ್ಲ ಜನಾಂಗದ ಉಪಪಂಗಡವಾಗಿದ್ದು, ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪನೆಯಾಗಿದ್ದರೆ ಇದರಲ್ಲಿ ಆ ಪಂಗಡಕ್ಕು ಸೌಲಭ್ಯ ದೊರಕುತಿತ್ತು. ಆದರೆ ಕೇವಲ ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆದೇಶಿಸಿರುವುರಿಂದ ಉಳಿದ ಗೊಲ್ಲ ಸಮುದಾಯ ಜನರಿಗೆ ಅನ್ಯಾಯವಾಗುತ್ತಿದೆ.ಸರ್ಕಾರ ಕೂಡಲೇ ಹೆಚ್ಚೆತ್ತು.ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪನೆಗೆ ಕ್ರಮಕೈಗೊಳ್ಳಬೇಕಿದೆ ಇಲ್ಲವಾದಲ್ಲಿ ಗೊಲ್ಲ ಜನಾಂಗ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

