ದೊಡ್ಡಬಳ್ಳಾಪುರ: ಕ್ಷಯ ರೋಗವನ್ನು ಆರಂಭದ ಹಂತದಲ್ಲೇ ಪತ್ತೆ ಹಚ್ಚಿ, ಸೂಕ್ತ ಚಿಕಿತ್ಸೆ ಪಡೆಯುವುದರಿಂದ ರೋಗವನ್ನು ನಿಯಂತ್ರಿಸಬಹುದು ಎಂದು ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿಂದು ನಡೆದ ಜಿಲ್ಲಾ ಕ್ಷಯ ರೋಗ ನಿಯಂತ್ರಣ ಕ್ರಿಯಾಯೋಜನೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ಮಾತನಾಡಿದರು.
ಕ್ಷಯ ರೋಗದ ಪರೀಕ್ಷೆಯನ್ನು ಅಧಿಕಗೊಳಿಸಿ, ರೋಗ ಹೊಂದಿರುವ ವ್ಯಕ್ತಿಗಳಿಗೆ ಸೂಕ್ತ ಸಮಯದಲ್ಲಿ ವೈದ್ಯಕೀಯ ಚಿಕಿತ್ಸೆ ದೊರಕಿಸಬೇಕು. ಕ್ಷಯ ರೋಗದ ಕುರಿತು ಸಾರ್ವಜನಿಕರಿಗೆ ಆರೋಗ್ಯ ಶಿಕ್ಷಣ ನೀಡಬೇಕು. ಈ ಸಂಬಂಧ ವೈದ್ಯಕೀಯ ಸಿಬ್ಬಂದಿ ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಬೇಕು ಹಾಗೂ ಕ್ಷಯ ರೋಗ ಪತ್ತೆಯಾದ ಎಲ್ಲಾ ರೋಗಿಗಳಿಗೆ ಪ್ರಧಾನಮಂತ್ರಿ ಬಿಮಾ ಯೋಜನೆಯಡಿ ವಿಮೆಗೆ ಒಳಪಡಿಸಬೇಕು ಎಂದು ತಿಳಿಸಿದರು.ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿರುವುದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಸಂಚಾರ ಮಾಡುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಸಾರ್ವಜನಿಕ ಸ್ಥಳದಲ್ಲಿ ಜನರು ಉಗುಳದಂತೆ ಎಚ್ಚರವಹಿಸಬೇಕು. ಒಂದು ವೇಳೆ ಯಾರಾದರೂ ಉಗುಳಿದರೆ ಅಂತಹವರಿಗೆ ದಂಡ ವಿಧಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾ ಕ್ಷಯ ರೋಗ ನಿಯಂತ್ರಣ ಅಧಿಕಾರಿ ಡಾ.ಶಕೀಲಾ ಅವರು ಮಾತನಾಡಿ, ಯಾವುದೇ ವ್ಯಕ್ತಿಯಲ್ಲಿ ಎರಡು ವಾರಕ್ಕಿಂತಲೂ ಹೆಚ್ಚು ಕಾಲ ಕೆಮ್ಮು ಇರುವುದು, ಅನಿರೀಕ್ಷಿತವಾಗಿ ದೇಹದ ತೂಕ ಕಡಿಮೆ ಆಗುವುದು, ಸಂಜೆ ಸಮಯದಲ್ಲಿ ಮಾತ್ರ ಜ್ವರ ಬರುವುದು, ಆಯಾಸ ಆಗುವುದು, ಉಸಿರಾಟದಲ್ಲಿ ತೊಂದರೆ ಕಾಣುವುದು, ಹಸಿವು ಆಗದಿರುವಂತಹ ಲಕ್ಷಣಗಳು ಕ್ಷಯ ರೋಗದ ಸೂಚನೆಯಾಗಿರುತ್ತದೆ. ಈ ಲಕ್ಷಣಗಳು ಕಂಡುಬಂದವರು ಕೂಡಲೇ ಹತ್ತಿರದ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಸೂಕ್ತ ಸಲಹೆ ಮತ್ತು ಚಿಕಿತ್ಸೆ ಪಡೆದುಕೊಳ್ಳಲು ಮುಂದಾಗಬೇಕು ಎಂದರು.
ಜಿಲ್ಲೆಯಲ್ಲಿ ಕಳೆದ ವರ್ಷ 13,005 ಮಂದಿ ಕ್ಷಯ ರೋಗ ಶಂಕೆ ಇರುವವರನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಈ ಪೈಕಿ 1075 ಮಂದಿಗೆ ಕ್ಷಯ ರೋಗ ಇರುವುದು ಧೃಡಪಟ್ಟಿದ್ದು, ಶೇಕಡಾ 74 ಕ್ಕಿಂತಲೂ ಹೆಚ್ಚು ಮಂದಿ ಗುಣಮುಖರಾಗಿದ್ದಾರೆ ಎಂದರು.
ಪ್ರಸ್ತುತ ವರ್ಷದಲ್ಲಿ 3938 ಕ್ಷಯ ರೋಗ ಶಂಕೆ ಇರುವವರನ್ನು ಪರೀಕ್ಷೆಗೊಳಪಡಿಸಿದ್ದು, 398 ಮಂದಿಗೆ ಕ್ಷಯ ರೋಗ ದೃಢಪಟ್ಟಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ನಿಕ್ಷಯ್ ಪೋಷಣ್ ಅಭಿಯಾನದಲ್ಲಿ ಕ್ಷಯ ರೋಗ ಪತ್ತೆಯಾದ 308 ಮಂದಿಗೆ ರೂ.5,83,500 ಹಣ ಸಂದಾಯವಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಆಕಾಶ್ ಮೆಡಿಕಲ್ ಕಾಲೇಜಿನ ಸೂಪರಿಡೆಂಟ್ ಡಾ.ಕೈಲಾಶ್, ಡಾ.ಸುನಿಲ್, ಅಸಿಸ್ಟೆಂಟ್ ಡ್ರಗ್ ಕಂಟ್ರೋಲರ್ ಓಂಕಾರೇಶ್ವರ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.

