ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರವೀಂದ್ರ ಕಲಾಕ್ಷೇತ್ರ ಮಾದರಿಯಲ್ಲಿ ಜಿಲ್ಲಾ ರಂಗಮಂದಿರ ನಿರ್ಮಾಣ ಮಾಡಲು ಇಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಎಸ್.ರಂಗಪ್ಪ ಹಾಗೂ ಅಧಿಕಾರಿಗಳ ತಂಡದೊಂದಿಗೆ ದೇವನಹಳ್ಳಿಯ ನಂದಿಕ್ರಾಸ್ ಬಳಿ ಇರುವ ಪಾರಿವಾಟ ಗುಟ ಸ್ಥಳ ಪರಿಶೀಲನೆ ನಡೆಸಿದರು.
ರಾಜ್ಯ ಸರ್ಕಾರವು 2020-21ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ, ರೂ.60 ಕೋಟಿ ವೆಚ್ಚದಲ್ಲಿ ಬೆಂಗಳೂರಿನ ನಾಲ್ಕು ದಿಕ್ಕುಗಳಲ್ಲಿ ರವೀಂದ್ರ ಕಲಾಕ್ಷೇತ್ರ ಮಾದರಿಯಲ್ಲಿ ರಂಗಮಂದಿರ ನಿರ್ಮಾಣ ಮಾಡಲಾಗುವುದು. ಅದರಂತೆ ಬೆಂಗಳೂರು ಉತ್ತರ ಭಾಗದಲ್ಲಿ ದೇವನಹಳ್ಳಿ ತಾಲ್ಲೂಕು ಇರುವುದರಿಂದ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜಿಲ್ಲಾ ರಂಗಮಂದಿರ ಇಲ್ಲದಿರುವುದರಿಂದ 2020ರ ಸೆಪ್ಟೆಂಬರ್ 09 ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 5 ಎಕರೆ ಭೂ ಪ್ರದೇಶದಲ್ಲಿ, ರೂ.15 ಕೋಟಿ ವೆಚ್ಚದಲ್ಲಿ ರಂಗಮಂದಿರ ನಿರ್ಮಾಣ ಮಾಡಲು ನಿರ್ಧಾರ ಕೈಗೊಳ್ಳಲಾಗಿತ್ತು.
ದೇವನಹಳ್ಳಿ-ಚಿಕ್ಕಬಳ್ಳಾಪುರ ಜಿಲ್ಲೆ ಮುಖ್ಯರಸ್ತೆಯ ನಂದಿಕ್ರಾಸ್ ಬಳಿ ಇರುವ ಪಾರಿವಾಟ ಗುಟ ಸ್ಥಳದಲ್ಲಿ 4 ಎಕರೆ ಭೂ ಪ್ರದೇಶವನ್ನು ಇಂದು ಪರಿಶೀಲಿಸಲಾಗಿದ್ದು, ಈ ಸ್ಥಳವು ರಂಗಮಂದಿರ ನಿರ್ಮಾಣಕ್ಕೆ ಉತ್ತಮ ಹಾಗೂ ಪೂರಕ ವಾತಾವರಣವನ್ನು ಹೊಂದಿದೆ ಮತ್ತು ಕಲಾವಿದರಿಗೆ ಅನೂಕೂಲವಾದ ಸ್ಥಳವಾಗಿದೆ ಎಂದು ತಿಳಿಸಿದ ಅಧ್ಯಕ್ಷರು, ಸ್ಥಳ ಪರಿಶೀಲನೆ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.
ಸ್ಥಳದಲ್ಲಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಹಾಯಕ ನಿರ್ದೇಶಕ ಮಂಜುನಾಥ್.ಪಿ.ಆರಾಧ್ಯ, ನಿರ್ಮಿತಿ ಕೇಂದ್ರದ ಜಿಲ್ಲಾ ಯೋಜನಾ ನಿರ್ದೇಶಕ ವಾಸುದೇವ್, ದೇವನಹಳ್ಳಿ ತಾಲ್ಲೂಕು ತಹಶೀಲ್ದಾರ್ ಅಜಿತ್ಕುಮಾರ್ ಸೇರಿದಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

