ದೊಡ್ಡಬಳ್ಳಾಪುರ: ಕರ್ನಾಟಕ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ನಡೆಯಲಿರುವ ದ್ವೈವಾರ್ಷಿಕ ಚುನಾವಣೆ-2020ರ ಸಂಬಂಧ ಚುನಾವಣಾ ವೇಳಾಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದ್ದು, ವೇಳಾಪಟ್ಟಿಯ ಪ್ರಕಾರ ಅಕ್ಟೋಬರ್ 01.2020ರಿಂದ ನಾಮಪತ್ರಗಳನ್ನು ಸ್ವೀಕರಿಸುವ ಪ್ರಕ್ರಿಯೆ ಪ್ರಾರಂಭವಾಗಿದ್ದು, ಈ ಸಂಬಂಧ ನಮೂನೆ-1ರಲ್ಲಿ ಚುನಾವಣಾ ತಿಳುವಳಿಕೆ ಪತ್ರವನ್ನು ಅಕ್ಟೋಬರ್ 1ರಂದು ಹೊರಡಿಸಲಾಗಿದೆ.
ಚುನಾವಣೆಯ ತಿಳುವಳಿಕೆ ಪತ್ರದನ್ವಯ, ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ಒಬ್ಬ ಸದಸ್ಯನನ್ನು ಚುನಾಯಿಸಲು ಚುನಾವಣೆ ನಡೆಸಬೇಕಾಗಿದೆ.ನಾಮಪತ್ರಗಳನ್ನು ಉಮೇದುದಾರರು ಅಥವಾ ಅವರ ಸೂಚಕರು ಚುನಾವಣಾಧಿಕಾರಿಗಳಾದ ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗ, ಬೆಂಗಳೂರು ಅಥವಾ ಸಹಾಯಕ ಚುನಾವಣಾಧಿಕಾರಿಗಳು ಇವರಿಗೆ ಪ್ರಾದೇಶಿಕ ಆಯುಕ್ತರ ಕಚೇರಿ, ಬೆಂಗಳೂರು ವಿಭಾಗ, 2ನೇ ಮಹಡಿ, ಬಿ.ಎಂ.ಟಿ.ಸಿ. ಕಟ್ಟಡ, ಕೆ.ಹೆಚ್.ರಸ್ತೆ, ಶಾಂತಿನಗರ, ಬೆಂಗಳೂರು-560027 ಇಲ್ಲಿ ಯಾವುದೇ ದಿನದಂದು ಬೆಳಿಗ್ಗೆ 11.00 ಗಂಟೆಯಿಂದ ಮಧ್ಯಾಹ್ನ 3.00 ಗಂಟೆಯ ನಡುವೆ ಅಕ್ಟೋಬರ್ 08.2020(ಗುರುವಾರ) ದಿನಾಂಕಕ್ಕೆ ಮೀರದಂತೆ (ಸಾರ್ವತ್ರಿಕ ರಜಾ ದಿನ ಹೊರತುಪಡಿಸಿ) ಸಲ್ಲಿಸಬಹುದು. ನಾಮಪತ್ರದ ನಮೂನೆಗಳನ್ನು ಮೇಲ್ಕಂಡ ಸ್ಥಳ ಮತ್ತು ವೇಳೆಯಲ್ಲಿ ಪಡೆದುಕೊಳ್ಳಬಹುದು. ನಾಮಪತ್ರಗಳನ್ನು ಚುನಾವಣಾಧಿಕಾರಿಗಳ(ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗ, ಬೆಂಗಳೂರು ರವರ) ಕಾರ್ಯಾಲಯದಲ್ಲಿ ಅಕ್ಟೋಬರ್ 09.2020(ಶುಕ್ರವಾರ) ರಂದು ಬೆಳಿಗ್ಗೆ 11.00 ಗಂಟೆಗೆ ಪರಿಶೀಲನೆಗೆ ತೆಗೆದುಕೊಳ್ಳಲಾಗುವುದು. ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳುವ ತಿಳುವಳಿಕೆ ಪತ್ರವನ್ನು ಉಮೇದುದಾರನು ಅಥವಾ ಅವರ ಯಾರೇ ಸೂಚಕರು ಅಥವಾ ಅದನ್ನು ಸಲ್ಲಿಸಲು ಉಮೇದುದಾರನಿಂದ ಲಿಖಿತದಲ್ಲಿ ಅಧಿಕೃತನಾದ ಅವರ ಚುನಾವಣಾ ಏಜೆಂಟರು ಚುನಾವಣಾಧಿಕಾರಿಗೆ ಅವರ ಕಚೇರಿಯಲ್ಲಿ ಅಕ್ಟೋಬರ್ 12.2020 (ಸೋಮವಾರ)ದಂದು ಮಧ್ಯಾಹ್ನ 3.00 ಗಂಟೆಗೆ ಮುಂಚೆ ಸಲ್ಲಿಸಬಹುದು.
ಚುನಾವಣೆಗೆ ಸ್ಪರ್ಧೆ ನಡೆದ ಸಂದರ್ಭದಲ್ಲಿ ಅಕ್ಟೋಬರ್ 28.2020 (ಬುಧವಾರ)ದಂದು ಬೆಳಿಗ್ಗೆ 8.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ಮತದಾನ ನಡೆಯುವುದೆಂದು ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಾದ ನವೀನ್ ರಾಜ್ ಸಿಂಗ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

