ದೊಡ್ಡಬಳ್ಳಾಪುರ: ಕರೊನಾ ಸೋಂಕಿನಿಂದ ತಾಲೂಕಿನ ಜನತೆಯನ್ನು ರಕ್ಷಿಸಲು ಶ್ರಮಿಸುತ್ತಿದ್ದ, ಕರೊನಾ ವಾರಿಯರ್ಸ್‌ಗಳಾದ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ತೀವ್ರ ರೀತಿಯಲ್ಲಿ ಕರೊನಾ ಸೋಂಕು ಧೃಡಪಟ್ಟಿದ್ದು, ತಾಲೂಕಿನ ಜನತೆಯನ್ನು ಸಂಕಷ್ಟಕ್ಕೆ ದೂಡಿದೆ.
ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 3000 ಸಾವಿರ ಮೀರಿದ್ದು, ಪ್ರತಿ ನಿತ್ಯ 100ಕ್ಕು ಹೆಚ್ಚು ಜನರಿಗೆ ಸೋಂಕು ಧೃಡ ಪಡುತ್ತಿದೆ. ಅಲ್ಲದೆ, ಸಾವಿನ ಸಂಖ್ಯೆ 100ರ ಗಡಿಗೆ ತಲುಪಿದೆ. ಇಂತಹ ಸಂದರ್ಭದಲ್ಲಿ ಮೊದಲೇ ಸಿಬ್ಬಂದಿಗಳ ಕೊರತೆಯಿಂದ ಬಳಲುತ್ತಿರುವ ಆರೋಗ್ಯ ಮತ್ತು ಪೊಲೀಸ್ ಇಲಾಖೆಗಳಿಗೆ ಇರುವ ಸಿಬ್ಬಂದಿಗಳನ್ನು ಒತ್ತಡ ನಡುವೆಯೇ, ಮಹಾಮಾರಿ ಕರೊನಾ ಸೋಂಕು ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಪದೇ ಪದೇ ಧೃಡಪಡುತ್ತಿರುವುದು ತೀವ್ರ ಸಂಕಷ್ಟಕ್ಕೆ ತಂದೊಡ್ಡಿದೆ.
ಪ್ರಸ್ತುತ ತಾಲೂಕಿನ ಹೊಸಹಳ್ಳಿ, ಘಾಟಿ, ಸರ್ಕಾರಿ ಆಸ್ಪತ್ರೆ ದೊಡ್ಡಬಳ್ಳಾಪುರ, ಕೊನಘಟ್ಟ, ದೊಡ್ಡತುಮಕೂರು, ಕಾಡನೂರು, ದೊಡ್ಡಹೆಜ್ಜಾಜಿ, ಮರಳೇನಹಳ್ಳಿ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗಳಿಗೆ ಕರೊನಾ ಸೋಂಕು ಧೃಡ ಪಟ್ಟಿದ್ದು, ತಾಲೂಕಿನ ಕಾಡನೂರು, ಮರಳೇನಹಳ್ಳಿ, ಹೊಸಹಳ್ಳಿ ಸರಕಾರಿ ಆಸ್ಪತ್ರೆಗಳು ಸೀಲ್ ಡೌನ್ ಮಾಡಲಾಗಿದೆ. ಉಳಿದ 24 ಗಂಟೆ ತುರ್ತು ಚಿಕಿತ್ಸೆಗೆ ಸಾರ್ವಜನಿಕರು ಅನಿರ್ವಾರ್ಯವಾಗಿ ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ತೆರಳಬೇಕಿದೆ.
ಉಳಿದಂತೆ ಪೊಲೀಸ್ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಸಹ ಕರೊನಾ ಸೊಂಕು ಧೃಡ ಪಟ್ಟ ಕಾರಣ ಚಿಕಿತ್ಸೆಗೆ ಒಳಗಾಗಿದ್ದಾರೆ. ಸೋಂಕು ತಡೆಗಟ್ಟಲು ಕ್ರಮ, ಮಾಸ್ಕ್ ಹಾಕದವರಿಗೆ ದಂಡ ವಿಧಿಸುವುದು ಸೇರಿದಂತೆ ಅಪರಾಧ ಪ್ರಕರಣಗಳನ್ನು ತಡೆಯಲು ಉಳಿದ ಸಿಬ್ಬಂದಿಗಳು ಬಳಸಿಕೊಂಡು ಶ್ರಮಿಸಬೇಕಾದ ಅನಿರ್ವಾರ್ಯತೆ ಹಿರಿಯ ಅಧಿಕಾರಿಗಳದ್ದಾಗಿದೆ.
ಕರೊನಾ ಸೋಂಕು ನಿರ್ವಹಣೆಯಲ್ಲಿ ಸರ್ಕಾರ ಶ್ರಮಿಸುತ್ತಿದೆ ಎನ್ನುತ್ತದೆ. ಆದರೆ ಜಿಲ್ಲಾ ಆರೋಗ್ಯ ಇಲಾಖೆ ಬೆಂ.ಗ್ರಾ.ಜಿಲ್ಲೆಯಲ್ಲಿ ಕರೊನಾ ಸೋಂಕು ನಿಯಂತ್ರಣಕ್ಕೆ ಯಾವುದೇ ಕ್ರಮಕೈಗೊಳ್ಳದೆ ಕೇವಲ ಸೋಂಕಿನ ಟೆಸ್ಟ್ ಹೆಚ್ಚಿಸಲಾಗುತ್ತಿದೆ ಎನ್ನುವ ಆರೋಪ ಕೇಳಿಬರುತ್ತಿದೆ.
ರಾಜ್ಯ ಸರ್ಕಾರದ ಒತ್ತಡದಿಂದ ಪಾರಾಗಲು ಬುಲೆಟಿನ್ ಗೊಂದಲ ಮಾಡಿ ಸಾವಿನ ಸಂಖ್ಯೆ ಮುಚ್ಚಿಟ್ಟಿರುವ ಆರೋಪ, ಸಿಬ್ಬಂದಿಗಳ ಕೊರತೆ ನೀಗುವಲ್ಲಿ ವಿಫಲ, ಕೋವಿಡ್-19 ಕೇರ್ ಸ್ಥಾಪನೆಯಲ್ಲಿ ವಿಳಂಭ ಸೇರಿದಂತೆ ಜಿಲ್ಲಾ ಆರೋಗ್ಯ ಇಲಾಖೆ ಕೋವಿಡ್-19 ಸೋಂಕು ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದ್ದು, ತಾಲೂಕಿನ ವಿವಿಧ ಸಂಘಟನೆಗಳು ಜಿಲ್ಲಾ ಉಸ್ತುವಾರಿ ಸಚಿವರ ಭೇಟಿಯ ವೇಳೆ ಘೆರಾವ್ ಹಾಕಲು ಚಿಂತನೆ ನಡೆಸಿದ್ದಾರೆ.
ಒಟ್ಟಾರೆ ಕರೊನಾ ಸೋಂಕಿನಿಂದ ರಕ್ಷಿಸಬೇಕಾದ ಕರೊನಾ ವಾರಿಯರ್ಸ್‌ಗಳಿಗೂ ರಕ್ಷಣೆ ಇಲ್ಲವಾಗಿರುವುದು ಮಾತ್ರ ತಾಲೂಕಿನ ಜನತೆಗೆ ತೀವ್ರ ಕಷ್ಟಕ್ಕೆ ಕಾರಣವಾಗಲಿದೆ.

