ನವದೆಹಲಿ: ಅನಿರೀಕ್ಷಿತ ಬೆಳವಣಿಗೆಯಲ್ಲಿ ಚಿತ್ರನಟಿ ಖುಷ್ಬೂ ಸುಂದರ್ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಸೋಮವಾರ ದೆಹಲಿಯ ಬಿಜೆಪಿ ಮುಖ್ಯಕಚೇರಿಯಲ್ಲಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹಾಗೂ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಎಲ್. ಮುರುಗನ್ ಅವರ ಸಮ್ಮುಖದಲ್ಲಿ ಖುಷ್ಬೂ ಕಮಲ ಪಕ್ಷವನ್ನ ಸೇರಿದ್ದಾರೆ.
ಹಲವು ದಿನಗಳಿಂದ ಕಾಂಗ್ರೆಸ್ ಪಕ್ಷದಿಂದ ದೂರ ಉಳಿದಿದ್ದ ಖುಷ್ಬೂ ಬಿಜೆಪಿ ಸೇರಲಿದ್ದಾರೆ ಎಂಬ ವದಂತಿ ಜೋರಾಗಿತ್ತು. ಅಲ್ಲದೆ ಅವರನ್ನ ಇಂದು ಎಐಸಿಸಿ ವಕ್ತಾರೆಯ ಹುದ್ದೆಯಿಂದ ಕೈಬಿಡಲಾಗಿತ್ತು. ಇದರ ಬೆನ್ನಲ್ಲೇ ಅವರು ಬಿಜೆಪಿಗೆ ಸೇರಿದ್ದಾರೆ.
ತಮಿಳುನಾಡು ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಸಮಯದಲ್ಲಿ ನಟಿ ಖುಷ್ಬೂ ಬಿಜೆಪಿ ಸೇರಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

