ದೊಡ್ಡಬಳ್ಳಾಪುರ: ಪಶುಪಾಲನಾ ಹಾಗೂ ಪಶು ಸೇವಾ ಇಲಾಖೆ ಹಾಗೂ ಹಾಲು ಒಕ್ಕೂಟದ ಸಹಯೋಗದಲ್ಲಿ ನ.25ರವರೆಗೆ ನಡೆಯಲಿರುವ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಕೊವಿಡ್-19 ಹಿನ್ನಲೆಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪಶುಪಾಲನಾ ಇಲಾಖೆಯ ತಾಲೂಕು ಸಹಾಯಕ ನಿರ್ದೇಶಕ ಡಾ.ಎ.ರಾಜೇಂದ್ರ ತಿಳಿಸಿದ್ದಾರೆ.
ತಾಲೂಕು ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ರಾಸುಗಳಿಗೆ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕಿನಲ್ಲಿ 62 ಸಾವಿರ ರಾಸುಗಳಿಗೆ ಅಂದರೆ, ಹಸು, ಎಮ್ಮೆ ಹಾಗೂ ಹಂದಿಗಳಿಗೆ ಕಾಲುಬಾಯಿ ರೋಗ ಲಸಿಕೆ ಹಾಕಲಾಗುತ್ತಿದೆ. ಇದಕ್ಕಾಗಿ 8ತಂಡಗಳನ್ನು ರಚಿಸಲಾಗಿದೆ.ರಾಷ್ಟ್ರೀಯ ಜಾನುವಾರುಗಳ ರೋಗನಿಯಂತ್ರಣ ಯೋಜನೆಯಡಿ ಒಂದನೇ ಸುತ್ತಿನ ಕಾಲುಬಾಯಿ ರೋಗದ ಲಸಿಕೆ ಕಾರ್ಯಕ್ರಮವನ್ನು ಆಯೊಜಿಸಲಾಗಿದೆ. ಕಿವಿ ಓಲೆ ಇರುವ ನೋಂದಾಯಿತ ಜಾನುವಾರಗಳ ಮಾಹಿತಿಯನ್ನು ಸ್ಕ್ಯಾನ್ ಮಾಡಿ, ಇನಾಫ್ ತಂತ್ರಾಂಶದ ಮೂಲಕ ಅಪ್‌ಲೋಡ್ ಮಾಡಲಾಗುತ್ತಿದೆ ಎಂದರು.
ಕಡ್ಡಾಯವಾಗಿ ಲಸಿಕೆ ಹಾಕಿಸಿ: ಕಾಲುಬಾಯಿ ತಗುಲಿದ ಜಾನುವಾರುಗಳಲ್ಲಿ ಶೇಕಡಾ 40 ರಷ್ಟು ಹಾಲಿನ ಇಳುವರಿ ಕಡಿಮೆಯಾಗುತ್ತದೆ. ಈ ರೋಗ ಸಾಂಕ್ರಾಮಿಕ ರೋಗವಾಗಿರುವುದರಿಂದ ವೇಗವಾಗಿ ಆರೋಗ್ಯವಂತ ರಾಸುಗಳಿಗೂ ಸೋಂಕು ತಗಲುತ್ತದೆ. ಕಾಲುಬಾಯಿ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ರಾಸುಗಳಿಗೆ ಲಸಿಕೆಯನ್ನು ಹಾಕುವುದರಿಂದ ಕಾಲು ಬಾಯಿ ರೋಗವನ್ನು ಸಂಪೂರ್ಣವಾಗಿ ತಡೆಗಟ್ಟಬಹುದು. ರೈತರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಮುಂದೆ ಆಗುವ ಅನಾಹುತಗಳಿಂದ ಪಾರಾಗಿ ಎಂದರು.
ಕೊವಿಡ್-19 ಮುಂಜಾಗ್ರತೆ: ಸರ್ಕಾರದ ಕೊರೊನಾ ಮಾರ್ಗಸೂಚಿಯಂತೆ ಲಸಿಕಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಪಶುಪಾಲನಾ ಹಾಗೂ ಬೆಂಗಳೂರು ಹಾಲು ಒಕ್ಕೂಟದ ವೈದ್ಯಾಧಿಕಾರಿಗಳು ಹಾಗು ಸಿಬ್ಬಂದಿಗಳಿಗೆ ಮಾಸ್ಕ್, ಕೈಚೀಲ, ಮುಖಗವಚ, ಸೋಪು, ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ಮಾಡಿ ಕಳುಹಿಸಿಕೊಡಲಾಗುತ್ತಿದ್ದು, ಕೊವಿಡ್-19 ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾಗಿದೆ ಎಂದರು.
ಕಾಲುಬಾಯಿ ರೋಗ ಲಸಿಕಾ ಕಾರ್‍ಯಕ್ರಮದ ತಾಲೂಕು ನೋಡಲ್ ಅಧಿಕಾರಿ ಡಾ.ವಿಶ್ವನಾಥ್ ಹಾಜರಿದ್ದರು.

