ದೊಡ್ಡಬಳ್ಳಾಪುರ: ಮೇಯಲು ಬಿಟ್ಟಿದ್ದ ಹಸುಗಳನ್ನು ಕಳವು ಮಾಡುತ್ತಿರುವ ಘಟನೆ ನಗರದಲ್ಲಿ ನಡೆದಿದ್ದು, ರೈತರು ಆತಂಕಗೊಂಡಿದ್ದಾರೆ.
ಕಳೆದ ಒಂದು ವಾರದಿಂದೀಚೆಗೆ 4 ಹಸುಗಳು ಕಳುವಾಗಿವೆ. ತೇರಿನ ಬೀದಿಯ ಎಚ್.ರಾಜು ಅವರು ಸಾಕಿದ್ದ ಒಂದು ಹಸು, ರಂಗಪ್ಪ ಸರ್ಕಲ್ನ ನಾಗರಾಜು ಸಾಕಿದ್ದ ಎರಡು ಹಸುಗಳು ಹಾಗೂ ಮುನಿಯಪ್ಪ ಅವರು ಸಾಕಿದ್ದ ಒಂದು ಹಸು ಕಳುವಾಗಿವೆ.
ನಗರದ ತೇರಿನ ಬೀದಿ, ಅರಳು ಮಲ್ಲಿಗೆ ಗೇಟ್ ಶಾಲೆ ಬಳಿಯ ನಿವಾಸಿ ಎಚ್.ರಾಜು ಅವರು ಸಾಕಿದ್ದ 80 ಸಾವಿರ ಬೆಲೆ ಬಾಳುವ ಹಸುವನ್ನು ಮೇಯಲು ಬಿಟ್ಟಿದ್ದಾಗ, ಹಸು ಕಳ್ಳರು ಕದ್ದೊಯ್ದಿದ್ದಾರೆ ಎನ್ನಲಾಗಿದೆ.
ಹಸು ಈಲಾಗಿದ್ದು, ಇನ್ನು ಒಂದು ವಾರದಲ್ಲಿ ಕರು ಹಾಕುತ್ತಿತ್ತು. ಎಷ್ಟು ಹುಡುಕಿದರೂ ಸಿಗದೇ ಈ ಕುರಿತು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ರೈತರು ತಿಳಿಸಿದ್ದಾರೆ.
ಕರೊನಾ ಸಂಕಷ್ಟದಲ್ಲಿ ಆಸರೆಯಾಗಿದ್ದ ಹಸು ಕಳುವಾಗಿರುವುದು ಕುಟುಂಬದಲ್ಲಿ ತುಂಬಾ ನೋವುಂಟಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

