ದೊಡ್ಡಬಳ್ಳಾಪುರ: ಬಹುಜನ ಸಮಾಜ ಪಾರ್ಟಿ ರಾಜ್ಯ ಕಾರ್ಯದರ್ಶಿಯಾಗಿದ್ದ ಪುರುಷೋತ್ತಮ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದ್ದ ಆದೇಶವನ್ನು ರದ್ದುಗೊಳಿಸಲಾಗಿದೆ ಎಂದು ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಆದೇಶಿಸಿದ್ದಾರೆ ಎಂದು ರಾಷ್ಟ್ರೀಯ ಬಿಎಸ್ ಪಿ ಮುಖಂಡ ದಿನೇಶ್ ಗೌತಮ್ ತಿಳಿಸಿದ್ದಾರೆ.
ಈ ಕುರಿತು ನಗರದ ಬಿಎಸ್ ಪಿ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪುರುಷೋತ್ತಮ್ ಅವರನ್ನು ಮಾಹಿತಿ ಕೊರತೆಯಿಂದ ಪಕ್ಷದಿಂದ ಉಚ್ಚಾಟಿಸಲಾಗಿದ್ದು. ಈ ಬಗ್ಗೆ ರಾಜ್ಯ ಸಮಿತಿಸಭೆಯಲ್ಲಿ ಚರ್ಚಿಸಿ ಪುರುಷೋತ್ತಮ್ ಉಚ್ಚಾಟನೆ ಆದೇಶವನ್ನು ತಕ್ಷಣದಿಂದ ರದ್ದುಗೊಳಿಸಲಾಗಿದೆ ಎಂದರು.
ಉಚ್ಚಾಟನೆ ರದ್ದು ಗೊಳಿಸುವ ಜೊತೆಗೆ ಪುರುಷೋತ್ತಮ್ ಅವರನ್ನು ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಉಸ್ತುವಾರಿಯನ್ನಾಗಿ ನೇಮಿಸಿದ್ದು, ಇವರು ವಿಧಾನಸಭಾ ಕ್ಷೇತ್ರ ಸಮಿತಿಯನ್ನು ಪುನರ್ ರಚಿಸುವಂತೆ ಸೂಚನೆ ನೀಡಲಾಗಿದೆ ಎಂದರು.
ಪುರುಷೋತ್ತಮ್ ಮಾತನಾಡಿ, ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿನ ನನ್ನ ಪಕ್ಷ ಸಂಘಟನೆಯ ಕಾರ್ಯವನ್ನು ಅಕ್ಕ ಮಾಯಾವತಿ ಅವರಿಗೂ ತಿಳಿದಿದ್ದು, ಅಶೋಕ್ ಸಿದ್ದಾರ್ಥ ಅವರ ಮುಖೇನ ಉಚ್ಚಾಟನೆಯನ್ನು ರದ್ದುಗೊಳಿಸಿದ್ದಾರೆ. ಪಕ್ಷ ಒಂದು ಮನೆಯಿದ್ದಂತೆ ಸಣ್ಣಪುಟ್ಟ ವಿರಸ ಶಮನವಾಗಿದ್ದು ಯಾವುದೇ ಗೊಂದಲವಿಲ್ಲವೆಂದರು.
ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಮುಖಂಡರಾದ ರಮೇಶ್ ಚಂದ್ರ ಭಾರತಿ ಸೇರಿದಂತೆ ರಾಜ್ಯ, ಜಿಲ್ಲಾ ಘಟಕಗಳ ಮುಖಂಡರು ಹಾಜರಿದ್ದರು.

