ಬೆಂಗಳೂರು: ಕರೊನಾ ಸೋಂಕಿಗೆ ಒಳಗಾಗಿ ಚಿಕಿತ್ಸೆಗೆ ದಾಖಲಾಗಿದ್ದ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಮನೆಗೆ ಮರಳಿದ್ದಾರೆ
ಈ ಕುರಿತು ಸಂದೇಶ ನೀಡಿರುವ ಅವರು,ಅ.5 ರಂದು ನನಗೆ ಕರೋನಾ ಸೋಂಕು ತಗುಲಿದೆ ಎಂದು ತಿಳಿದ ನಂತರ ಬಿಬಿಎಂಪಿ ವೈದ್ಯರ ತಂಡದ ಸಲಹೆಯಂತೆ ನಾನು ಮನೆಯಲ್ಲಿಯೇ ಹೋಂ ಐಸೋಲೇಷನ್ ನಲ್ಲಿದ್ದೆ. ವೈದ್ಯರು ಸೂಚಿಸಿದ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದೆ.
ಆದರೆ ಅಕ್ಟೋಬರ್ 10 ರಂದು ನನ್ನ ಮನೆಗೆ ಬಂದ ವೈದ್ಯರೊಬ್ಬರು ನನ್ನ ಉಸಿರಾಟದಲ್ಲಿ ವ್ಯತ್ಯಾಸವನ್ನು ಗಮನಿಸಿ ತಕ್ಷಣ ಪರೀಕ್ಷೆಗೆ ಒಳಗಾಗ ಬೇಕೆಂದು ಆಗ್ರಹಿಸಿದರು.
ಅವರ ಸೂಚನೆ ಮೇರೆಗೆ ನಾನು ಅವರೊಡನೇ ಹೋಗಿ ಶ್ವಾಸಕೋಶದ ಸಿಟಿ ಸ್ಕ್ಯಾನ್ (CT -Scan) ಗೆ ಒಳಗಾದೆ. ಆಗ ನನ್ನ ಶ್ವಾಸಕೋಶಕ್ಕೆ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿಯೇ ಸೋಂಕು ಹರಡಿದೆ ಎಂದು ತಿಳಿದುಬಂತು.
ಕಳೆದ ಎಂಟು ದಿನಗಳಿಂದ ನನಗೆ ಎಲ್ಲಾ ರೀತಿಯ ಚಿಕಿತ್ಸೆ ನೀಡಿ, ಶುಶ್ರೂಷೆ ಮಾಡಿ ನನ್ನನ್ನು ಗುಣಮುಖನಾಗುವ ಹಾದಿಗೆ ತಂದ ಡಾ. ಶಶಾಂಕ್, ಡಾ. ಶ್ರೀನಾಥ್, ಡಾ. ಪೂರ್ಣ ಪ್ರಸಾದ್, ಡಾ. ಕೃಪೇಶ್ ಮತ್ತು ಎಲ್ಲಾ ದಾದಿಯರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ತಿಳಿಸುತ್ತಿದ್ದೇನೆ.
ನನಗೆ ಇನ್ನೂ ಎರಡು ವಾರಗಳ ಕಾಲ ಮನೆಯಿಂದ ಹೋಗಬಾರದು ಎಂಬ ಷರತ್ತಿನ ಮೇಲೆ ನನ್ನನ್ನು ಬಿಡುಗಡೆ ಮಾಡಿದ್ದಾರೆ. ನಾನು ಡಾಕ್ಟರ್ ಪಾಲಿಸುತ್ತೇನೆ ಎಂದು ಮಾತು ಕೊಟ್ಟು ಮನೆ ಸೇರಿದ್ದೇನೆ. ಮನೆಯಲ್ಲಿ ಕೆಲ ಚಿಕಿತ್ಸೆ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.

