ಬೆಂಗಳೂರು: ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಸಾಲು ಸಾಲು ಹಬ್ಬಗಳು ಇರುವುದರಿಂದ ಕೋವಿಡ್ ಬಗ್ಗೆ ನಾಗರಿಕರು ಎಚ್ಚರಿಕೆ ಕ್ರಮವಹಿಸುವ ಅಗತ್ಯವಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ.ಸುಧಾಕರ್ ಹೇಳಿದರು.
ಪ್ರವಾಹ ಪರಿಸ್ಥಿತಿಯಿಂದ ಸಾಂಕ್ರಾಮಿಕ ರೋಗಗಳು ಹರಡದಂತೆ ತುರ್ತು ವೈದ್ಯಕೀಯ ಸಿದ್ದತೆ ಕುರಿತು ಸೋಮವಾರ ವಿಡಿಯೋ ಕಾನ್ಪರನ್ಸ್ ಮೂಲಕ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕೇರಳದ ಓಣಂ ಹಬ್ಬದಲ್ಲಿ ಎಚ್ಚರಿಕೆ ಕ್ರಮಕೈಗೊಳ್ಳದ ಕಾರಣ 2-3 ಪಟ್ಟು ಕರೊನಾ ಪ್ರಕರಣಗಳು ಹೆಚ್ಚಾಗಿ ಕಂಡುಬಂದಿವೆ. ಆದ್ದರಿಂದ ಬಾಗಲಕೋಟೆ ಜಿಲ್ಲೆಯಲ್ಲಿಯೂ ಸಹ ಹಬ್ಬಗಳಲ್ಲಿ ನಾಗರಿಕರು ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ತಿಳಿಸಿದರು.
ಹಬ್ಬದ ದಿನಗಳಲ್ಲಿ ಜನಸಂದಣಿ ಹೆಚ್ಚಾಗದಂತೆ ಕ್ರಮವಹಿಸಬೇಕು. ಸಾರ್ವಜನಿಕರು ಮಾಸ್ಕ್ ಧರಿಸುವುದ ಮತ್ತು ಸಾಮಾಜಿಕ ಅಂತರ ಪಾಲನೆಗೆ ಕ್ರಮವಹಿಸಲು ತಿಳಿಸಿದರು. ಪ್ರವಾಹ ಮತ್ತು ಅತಿವೃಷ್ಠಿಯಿಂದ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ಹರಡುವ ಸಾಧ್ಯತೆ ಇದ್ದು, ಜಿಲ್ಲಾ ಮತ್ತು ತಾಲೂಕಾ ಮಟ್ಟದ ಕಾರ್ಯಕ್ರಮ ಅಧಿಕಾರಿಗಳು ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದರು.
ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅವರು ಕೋವಿಡ್ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತಾ ಕೋವಿಡ್ ಪ್ರಕರಣಗಳು ಕ್ರಮೇಣ ಕಡಿಮೆಗೊಳ್ಳುತ್ತಿವೆ. ಜಿಲ್ಲೆಯಲ್ಲಿ 526 ಆಕ್ಸಿಜನ್, 49 ವೆಂಟಿಲೇಟರ್, 26 ಐ.ಸಿ.ಯು ಬೆಡ್ ಇದ್ದು, 29 ಜನರಿಗೆ ಆಕ್ಸಿನಜ್ ನೀಡಲಾಗುತ್ತಿದೆ. ವೆಂಟಿಲೇಟರ್ ಮೇಲೆ ಯಾರು ಇರುವುದಿಲ್ಲ. ಆರ್.ಟಿ.ಪಿ.ಸಿ.ಆರ್ ಮೇಲೆ ಪ್ರತಿದಿನ ಗುರಿ ಮೀರಿ ಸಾಧನೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ 12523 ಕೊವಿಡ್ ಪ್ರಕರಣಗಳು ಕಂಡುಬಂದಿದ್ದು, ಈ ಪೈಕಿ 927 ಸಕ್ರಿಯ ಪ್ರಕರಣಗಳಿಗೆ ಇದರಲ್ಲಿ 619 ಹೋಮ್ ಐಸೋಲೇಶನ್‍ದಲ್ಲಿ ಇದ್ದಾರೆ. 126 ಜನ ಮರಣ ಹೊಂದಿದ್ದು, ಆರ್‍ಟಿಪಿಸಿಆರ್, ರ್ಯಾಪಿಡ್ ಮೂಲಕ 1550 ಪರಿಶೀಲಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.ಸಾಂಕ್ರಾಮಿಕ ರೋಗಗಳ ಬಗ್ಗೆ ವಿವರಣೆ ನೀಡಿದ ಅವರು ಜಿಲ್ಲೆಯಲ್ಲಿ ಚಿಕನ್ ಗುನ್ಯಾ 85 ಪ್ರಕರಣಗಳು ಕಂಡುಬಂದಿವೆ. ಆನೆಕಾಲು ರೋಗದ ಬಗ್ಗೆ 4 ಸಾವಿರ ಜನರನ್ನು ಪರೀಕ್ಷಿಸಲಾಗಿದ್ದು, ಅದರಲ್ಲಿ ಹುನಗುಂದ ಮತ್ತು ಬಾದಾಮಿಯಲ್ಲಿ 12 ಮಾತ್ರ ಪತ್ತೆಯಾಗಿರುತ್ತವೆ. ಮಲೇರಿಯಾ 4 ಪ್ರಕರಣ ಕಂಡುಬಂದಿರುತ್ತವೆ. ಚಿಕನ್‍ಗುನ್ಯಾ, ಡೆಂಗ್ಯೂ ಹಾಗೂ ಮಲೇರಿಯಾ ಕಳೆದ 4-5 ವರ್ಷಗಳಿಂದ ಕಡಿಮೆಯಾಗುತ್ತಿದ್ದು, ಯಾವುದೇ ಮರಣ ಪ್ರಕರಣ ಇರುವುದಿಲ್ಲವೆಂದು ತಿಳಿಸಿದರು. ಕಳೆದ 2015 ರಿಂದ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಮೂಲಕ ಹಮ್ಮಿಕೊಂಡ ಅರಿವು ಕಾರ್ಯಕ್ರಮದಿಂದಾಗಿ ಕಡಿಮೆಯಾಗಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿ.ಪಂ ಉಪ ಕಾರ್ಯದರ್ಶಿ ಅಮರೇಶ ನಾಯಕ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ, ಜಿಲ್ಲಾ ಸಮೀಕ್ಷಣಾಧಿಕಾರಿ ವಿಜಯ ಕಂಠಿ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಜಯಶ್ರೀ ಎಮ್ಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

