ನವದೆಹಲಿ: ಕರೊನಾ ಸೋಂಕಿಗೆ ಲಸಿಕೆ ಕಂಡು ಹಿಡಿಯಲು ದೇಶದ ವಿಜ್ಞಾನಿಗಳು ಸಮರೋಪಾದಿಯಲ್ಲಿ ಶ್ರಮಿಸುತ್ತಿದ್ದು, ದೇಶದ ಪ್ರತಿಯೊಬ್ಬರಿಗೂ ಕರೊನಾ ಲಸಿಕೆ ತಲುಪಿಸುವ ತಯಾರಿ ಸಿದ್ದವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಕರೊನಾ ಸೋಂಕು ತಡೆಯಲು ಹೇರಲಾಗಿದ್ದ ಲಾಕ್ಡೌನ್ ತೆರವು ಮಾಡಲಾಗಿದೆಯೇ ಹೊರತು, ಕರೊನಾ ಸೋಂಕು ದೇಶದಿಂದ ತೆರವಾಗಿಲ್ಲ. ಲಸಿಕೆ ಸಿಗುವವರೆಗೂ ದೇಶದ ಜನತೆ ಕೋವಿಡ್-19 ನಿಯಮ ಪಾಲಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಿದೆ.
ಕರೊನಾ ಸಂಧರ್ಭದಲ್ಲಿ ದೇಶದ ಜನತೆ ಕಷ್ಟ ಪಟ್ಟಿದ್ದಾರೆ, ಇದರ ಜೊತೆಗೆ ಆರ್ಥಿಕತೆ ಮೇಲೂ ಪರಿಣಾಮ ಬೀರಿದೆ. ಲಾಕ್ಡೌನ್ ಸರಿಯಾಗಿ ಆಗಿದ್ದರೂ ವೈರಸ್ ಹೋಗಿಲ್ಲ. ಇಂದು ದೇಶದಲ್ಲಿ ರಿಕವರಿ ರೇಟ್ ಚೆನ್ನಾಗಿದೆ, ಫ್ಯಾಟಲಿಟಿ ರೇಟ್ ಕಡಿಮೆಯಾಗಿದೆ.
ಹಬ್ಬದ ದಿನಗಳು ಸರಣಿಯಾಗಿ ಬರುತ್ತಿದ್ದು, ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಜೊತೆಗೆ ಹಬ್ಬವನ್ನು ಆಚರಿಸಬೇಕಿದೆ. ದೇಶದ ಜನರ ಉತ್ತಮ ಆರೋಗ್ಯವನ್ನು ನಾನು ನೋಡಲು ಬಯಸುತ್ತೇನೆ.
ಹಲವು ದೇಶಗಳು ಲಸಿಕೆಗಾಗಿ ಶ್ರಮಿಸುತ್ತಿವೆ, ಭಾರತದಲ್ಲೂ ಲಸಿಕೆಗಾಗಿ ಹಗಲು, ರಾತ್ರಿ ವಿಜ್ಞಾನಿಗಳು ಕೆಲಸ ಮಾಡುತ್ತಿದ್ದಾರೆ. ಕೆಲವು ಲಾಸಿಕೆಗಳು ಮೊದಲ ಹಂತದಲ್ಲಿದ್ದರೆ ಕೆಲವು ಅಡ್ವಾನ್ಸ್ ಲೆವೆಲ್ನಲ್ಲಿ ಇವೆ. ಲಸಿಕೆ ಬರುವವರೆಗೂ ಜಾಗರೂಕರಾಗಿರೋಣ. ಕರೊನಾ ಸೋಂಕಿನ ಲಸಿಕೆಯನ್ನು ದೇಶದ ಪ್ರತಿಯೊಬ್ಬ ನಾಗರಿಕನಿಗೂ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ.

