ದೊಡ್ಡಬಳ್ಳಾಪುರ: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ (ಟಿಎಪಿಎಂಸಿಎಸ್) ಚುನಾವಣೆ ನ.8 ರಂದು ನಡೆಯಲಿದ್ದು,ಚುನಾವಣೆ ನಡೆಯುವ ದಿನಾಂಕ ಘೋಷಣೆಯಾಗಿರುವ ಹಿನ್ನೆಲೆ ಎಲ್ಲಾ ಮತದಾರರಿಗು ಅಂಚೆ ಮೂಲಕ ನೋಟಿಸ್ ತಲುಪುವುದರೊಂದಿಗೆ ಚುನಾವಣಾ ಕಣ ಸಜ್ಜಾಗುತ್ತಿದೆ.
13 ಸ್ಥಾನಗಳನ್ನು ಹೊಂದಿರುವ ಟಿಎಪಿಎಂಸಿಎಸ್ನಲ್ಲಿ ‘ಎ’ತರಗತಿಯಿಂದ 4 (ವಿಎಸ್ಎಸ್ಎನ್ಗಳಿಂದ), ‘ಬಿ’ ತರಗತಿಯಿಂದ 9 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.ಒಟ್ಟು ಸದಸ್ಯರ ಸಂಖ್ಯೆ 4,200 ಜನರಿದ್ದಾರೆ. ಇದರಲ್ಲಿ 2,163 ಜನ ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದಾರೆ. 9 ಸ್ಥಾನಗಳ ಪೈಕಿ ಮಹಿಳಾ ಅಭ್ಯರ್ಥಿಗಳಿಗೆ 2 ಸ್ಥಾನ ಮೀಸಲು. ಸಾಮಾನ್ಯ 3, ಬಿಸಿಎಂ ‘ಎ’ 1, ಬಿಸಿಎಂ ‘ಬಿ’ 1, ಎಸ್ಸಿ 1, ಎಸ್ಟಿ ಅಭ್ಯರ್ಥಿಗೆ 1 ಸ್ಥಾನ ಮೀಸಲಾಗಿದೆ.
ನಾಮ ಪತ್ರಗಳ ಸಲ್ಲಿಕೆ ಅ.29 ರಿಂದ ಬೆಳಿಗ್ಗೆ 11 ರಿಂದ ಸಂಜೆ 4 ಗಂಟೆಯವರೆಗೆ. ನಾಮ ಪತ್ರ ಸಲ್ಲಿಕೆಗೆ ಕೊನೆಯ ದಿನ ಅ.30. ನಾಮ ಪತ್ರಗಳನ್ನು ಹಿಂದಕ್ಕೆ ಪಡೆಯಲು ನ.1 ರಂದು ಮಧ್ಯಾಹ್ನ 3 ಗಂಟೆಯವರೆಗೆ ಅವಕಾಶ ಇದೆ. ನ.2 ರಂದು ಚುನಾವಣ ಕಣದಲ್ಲಿ ಉಳಿದವರ ಅಂತಿಮಪಟ್ಟಿ ಪ್ರಕಟವಾಗಲಿದೆ. ನ.8 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮತದಾನ ನಡೆಯಲಿದೆ. ತಹಶೀಲ್ದಾರ್ ಟಿ.ಎಸ್.ಶಿವರಾಜ್ ಅವರು ಚುನಾವಣ ಅಧಿಕಾರಿಗಳಾಗಿದ್ದಾರೆ.
1966ರಲ್ಲಿ ಕ್ಷೇತ್ರದ ಹಿರಿಯ ರಾಜಕಾರಣಿ ಮಾಜಿ ಸಚಿವ ಜಿ.ರಾಮೇಗೌಡ ಅವರಿಂದ ಸ್ಥಾಪನೆಯಾದ ಟಿಎಪಿಎಂಸಿಎಸ್ಗೆ ಸಂಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸುವ ಮೂಲಕ ತಾಲ್ಲೂಕಿನಲ್ಲಿ ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಭದ್ರಬುನಾದಿಯನ್ನು ಹಾಕಿದ್ದಾರೆ.
ಆರ್.ಎಲ್.ಜಾಲಪ್ಪ ಅವರು ರಾಜಕೀಯದಲ್ಲಿ ಸಕ್ರಿಯರಾಗಿದ್ದಾಗ ಕ್ಷೇತ್ರದಲ್ಲಿನ ಯಾವುದೇ ಸಹಕಾರಿ ಸಂಸ್ಥೆಗಳಲ್ಲೂ ಅವರು ಸೂಚಿಸಿದವರು ಮಾತ್ರ ನಿರ್ದೇಶಕರು, ಅಧ್ಯಕ್ಷರಾಗಿ ಆಡಳಿತ ನಡೆಸುತ್ತಿದ್ದರು, ಟಿಎಪಿಎಂಸಿಎಸ್ನಲ್ಲೂ ಸಹ. ಆದರೆ ಕ್ಷೇತ್ರದಲ್ಲಿ ಬದಲಾದ ರಾಜಕೀಯ ಬೆಳವಣಿಗೆಯ ನಂತರ. ಈಗ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮೂರು ಪಕ್ಷಗಳಲ್ಲೂ ಮುಖಂಡರು, ಕಾರ್ಯಕರ್ತರು ಸಮಬಲವನ್ನು ಹೊಂದಿದ್ದಾರೆ. ಹೀಗಾಗಿ ಸಹಕಾರಿ ಕ್ಷೇತ್ರದಿಂದ ಮೊದಲುಗೊಂಡು ಎಲ್ಲಾ ಕಡೆಯು ಚುನಾವಣೆಗಳು ತೀವ್ರ ಪೈಪೋಟಿಯಿಂದಲೇ ಕೂಡಿವೆ.
ಸಹಕಾರಿ ಕ್ಷೇತ್ರದ ಚುನಾವಣೆಗೆ ರಾಜಕೀಯ ಪಕ್ಷದ ಅಧಿಕೃತ ಚಿಹ್ನೆಯನ್ನು ಬಳಸಿಕೊಳ್ಳಲು ಅವಕಾಶ ಇಲ್ಲ. ಆದರೆ ಪಕ್ಷ ಬೆಂಬಲಿತದ ಆಧಾರದ ಮೇಲೆಯೇ ಸಿಂಡಿಕೆಗಳನ್ನಾಗಿ ಮಾಡಿಕೊಂಡು ಮತಯಾಚನೆ ನಡೆಯುತ್ತದೆ. ಈಗಾಗಲೇ ಮೂರು ರಾಜಕೀಯ ಪಕ್ಷಗಳಿಂದಲು ಆಕಾಂಕ್ಷಿಗಳ ಸಭೆಗಳನ್ನು ನಡೆಸಿ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದಾರೆ. ಅಂತಿಮವಾಗಿ ಪಕ್ಷ ಸೂಚಿಸಿದ ಅಥವಾ ಬಂಡಾಯವಾಗಿಯು ಹಲವಾರು ಜನ ನಾಮ ಪತ್ರಗಳನ್ನು ಸಲ್ಲಿಸುವ ಸಾಧ್ಯತೆ ಈ ಬಾರಿ ಹೆಚ್ಚಾಗಿದೆ.
ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮೂರು ಪಕ್ಷಗಳಲ್ಲು ಬಣ ರಾಜಕಾರಣ ಪ್ರಭಲವಾಗಿದ್ದು ಹೈಕಮಾಂಡ್ ಹಿಡಿತ ಕೈತಪ್ಪಿ ಹೋಗಿದೆ. ಕಳೆದ ಬಾರಿ ಜೆಡಿಎಸ್, ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದರು. ಆದರೆ ಯಾವ ಪಕ್ಷಕ್ಕು ಸ್ಪಷ್ಟ ಬಹುಮತ ಬರದೇ ಕಾಂಗ್ರೆಸ್, ಜೆಡಿಎಸ್ ಮೈತ್ರಿಯೊಂದಿಗೆ ಎರಡೂ ಪಕ್ಷದವರು ಅಧ್ಯಕ್ಷರಾಗಿ ಆಡಳಿತ ನಡೆಸಿದ್ದರು.
ನ್ಯಾಯಾಲಯದ ಮೊರೆ: ಸಹಕಾರ ಸಂಘಗಳ ನಿಯಮಗಳ ಪ್ರಕಾರ ಐದು ವರ್ಷಗಳ ಆಡಳಿತಾವಧಿಯಲ್ಲಿ ನಡೆಯುವ ಸರ್ವ ಸದಸ್ಯರ ಸಭೆಗಳಲ್ಲಿ ಮೂರು ಸಭೆಗಳಿಗೆ ಸದಸ್ಯರು ಕಡ್ಡಾಯವಾಗಿ ಹಾಜರಾಗಿ, ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಬೇಕು. ಆಗ ಮಾತ್ರ ಸದಸ್ಯರಿಗೆ ಮತದಾನದ ಹಕ್ಕು ಬರುತ್ತದೆ. ಆದರೆ ಬಹುತೇಕ ಜನ ಸದಸ್ಯರು ಸಾಮಾನ್ಯ ಸರ್ವಸದಸ್ಯರ ಸಭೆಗೆ ಹಾಜರಾಗದ ಕಾರಣ ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ. ಸರ್ವ ಸದಸ್ಯರ ಸಭೆಗೆ ಹಾಜರಾಗಲು ಸಾಧ್ಯವಾಗದೇ ಇರುವ ಬಗ್ಗೆ ಸಕಾರಣವನ್ನು ನೀಡಿ ನ್ಯಾಯಾಲಯದಿಂದ ಮತದಾನ ಮಾಡುವ ಹಕ್ಕನ್ನು ಪಡೆಯಲು ಅವಕಾಶ ಇದೆ. ಹೀಗಾಗಿ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸುವ ಆಕಾಂಕ್ಷಿಗಳು ಮತದಾನದ ಹಕ್ಕು ಇಲ್ಲದ ಸದಸ್ಯರಿಂದ ವಕಾಲತ್ತಿಗೆ ಸಹಿ ಪಡೆದು ನ್ಯಾಯಾಲಯದ ಮೂಲಕ ಮತದಾನದ ಹಕ್ಕು ಪಡೆಯಲು ಮುಂದಾಗಿದ್ದಾರೆ.

