ದೊಡ್ಡಬಳ್ಳಾಪುರ: ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಕಳೆದ 3 ಬಾರಿಯಿಂದ ಚುನಾಯಿತರಾಗಿರುವ ವ್ಯಕ್ತಿ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ನಿರ್ಲಕ್ಷ್ಯತೋರಿದ್ದಾರೆ. ಈ ನಿಟ್ಟಿನಲ್ಲಿ ಶಿಕ್ಷಕರ ಪರಗಟ್ಟಿ ದನಿಯಾಗಿ, ಪ್ರಜ್ಞಾಪೂರ್ವಕವಾಗಿ ಸರ್ಕಾರವನ್ನು ಎಚ್ಚರಿಸುವ ಅಗತ್ಯವಿದ್ದು, ಯುವ ನಾಯಕತ್ವ ಮತು ಪ್ರಗತಿಪರ ಚಿಂತನೆಗಳನ್ನು ಶಿಕ್ಷಕ ಸಮುದಾಯ ಬೆಂಬಲಿಸಬೇಕಿದೆ ಎಂದು ಬೆಂಗಳೂರು ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ಅಭ್ಯರ್ಥಿ ಪ್ರವೀಣ್ ಪೀಟರ್ ಹೇಳಿದರು.
ಬುಧವಾರ ಇಲ್ಲಿನ ಖಾಸಗಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಹಿಂದೆ ವಿಧಾನಪರಿಷತ್ ಸದಸ್ಯರಾಗಿದ್ದವರು ಸಂಕಷ್ಟದ ಸಂದರ್ಭದಲ್ಲಿ ಶಿಕ್ಷಕರ ನೆರವಿಗೆ ಬಂದಿಲ್ಲ ಎಂಬ ಆರೋಪವಿದೆ. ಸುಶಿಕ್ಷಿತ ಮತದಾರರು ಬದಲಾವಣೆಯ ಪರ ಇದ್ದಾರೆ. ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಿಕ್ಷಕರ ಸಮಸ್ಯೆಗಳು ಭಿನ್ನ ಭಿನ್ನವಾಗಿದ್ದು, ಅವುಗಳಿಗೆ ತಾರ್ಕಿಕವಾದ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.
ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ತಾಲೂಕಿನಲ್ಲಿ ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅತಿ ಹೆಚ್ಚು ಅನುದಾನವನ್ನು ತಂದು ಕೆಲಸ ಮಾಡಲಾಗಿದೆ. ಆದರೆ ಹಿಂದಿನ ವಿಧಾನಪರಿಷತ್ ಸದಸ್ಯರಾಗಿದ್ದವರು ನಮ್ಮ ಶಿಕ್ಷಣ ಕ್ಷೇತ್ರಕ್ಕೆ ಏನೂ ಮಾಡಲಿಲ್ಲ. ಇದನ್ನು ಶಿಕ್ಷಕ ಮತದಾರರು ಗಮನಿಸಬೇಕು.
ದೊಡ್ಡಬಳ್ಳಾಪುರದಲ್ಲಿ ಪಾಲಿಟೆಕ್ನಿಕ್ಕಾಲೇಜು ಸ್ಥಾಪನೆಗೆ ಅಗತ್ಯಕ್ರಮ ವಹಿಸಲಾಗುತ್ತಿದೆ. ಆದರೆ ಪ್ರಸ್ತುತ ಬಿಜೆಪಿ ಸರ್ಕಾರದಲ್ಲಿ ಯಾವುದೇ ಅನುದಾನಗಳನ್ನು ಕೊಡದೆ ವಂಚಿಸಲಾಗುತ್ತಿದೆ.ಕಳೆದ ಸರ್ಕಾರದಲ್ಲಿ ಕ್ಷೇತ್ರಕ್ಕೆ ಮಂಜೂರಾಗಿದ್ದ ಸುಮಾರು 140 ಕೋಟಿ ರೂ ವೆಚ್ಚದ ಯೋಜನೆಗಳಿಗೆ ಅನುಮೋದನೆ ನೀಡಿಲ್ಲ. ನಗರಕ್ಕೆ ಮಂಜೂರಾಗಿದ್ದ 25 ಕೋಟಿ ರೂ ಸಹ ವಿಪಕ್ಷದವರ ತಡೆಯಿಂದಾಗಿ ವಾಪಾಸು ಹೋಗಿದೆ ಎಂದರು.
ಮರೆಮಾಚಿದ ಕೊವಿಡ್-19 ವರದಿ: ತಾಲೂಕಿನಲ್ಲಿ ಕೊವಿಡ್-19 ಬುಲೆಟನ್ಗಳನ್ನು ಬಿಡುಗಡೆ ಮಾಡುತ್ತಿದ್ದರೂ ಅದರಲ್ಲಿ ಮೃತಪಟ್ಟವರ ಸಂಖ್ಯೆ ನೀಡದೇ ಮರೆಮಾಚಲಾಗುತ್ತಿದೆ. ನಿಖರ ವರದಿ ನೀಡಿದರೆ ಮಾತ್ರ ಜನರಲ್ಲಿ ವಾಸ್ತವ ಸ್ಥಿತಿ ಅರಿವಾಗುತ್ತದೆ. ಈ ಬಗ್ಗೆ ಸರಿಯಾದ ಸಂಬಂಧಪಟ್ಟವರು ಗಮನ ಹರಿಸಬೇಕು ಎಂದರು.
ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ ಮಾತನಾಡಿ, ಹಾಲಿ ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಪ್ರತಿನಿಧಿ ಪಕ್ಷಾಂತರ ಕಳೆದ 3 ಬಾರಿ ಒಂದು ಪಕ್ಷದಿಂದ ಗೆದ್ದು, ಈಗ ಪಕ್ಷಾಂತರ ಮಾಡಿ ಮತ್ತೊಂದು ಪಕ್ಷವನ್ನು ಪ್ರತಿನಿಧಿಸುತ್ತಿದ್ದಾರೆ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ತಿ.ರಂಗರಾಜು, ಕಾಂಗ್ರೆಸ್ ತಾಲೂಕು ಅಧ್ಯಕ್ಷ ಬೈರೇಗೌಡ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎಚ್.ಎಸ್.ರೇವತಿ, ಎಪಿಎಂಸಿ ನಿರ್ದೇಶಕ ಸೋಮರುದ್ರಶರ್ಮ, ಎಸ್ಸಿ ಘಟಕ ಅಧ್ಯಕ್ಷ ಮುನಿರಾಜು, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಬಷೀರ್, ಮುಖಂಡರಾದ ಬಿ.ಜಿ.ಹೇಮಮಂತರಾಜು, ಕುಮುದಾ, ಪು.ಮಹೇಶ್, ವಿಜಯಕುಮಾರ್ ಮತ್ತಿತರರು ಹಾಜರಿದ್ದರು.

