ದೊಡ್ಡಬಳ್ಳಾಪುರ: ಮೊಹಮ್ಮದ್ ಸಿರಾಜ್ ಎಲ್ಲರಿಗೂ ನೆನಪಾಗಿದ್ದು ಅಬುಧಾಬಿಯಲ್ಲಿ ಬುಧವಾರ ರಾತ್ರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಿರಾಜ್ ಎರಡು ಮೇಡನ್ ಓವರ್ ದಾಖಲೆಯ ಸಮೇತ ಮೂರು ವಿಕೆಟ್ ಗಳಿಸಿದಾಗ.
ಇಡೀ ಐಪಿಎಲ್ ಇತಿಹಾಸದಲ್ಲಿ ಹೈದರಾಬಾದಿನ ಕೊಳಗೇರಿಯಿಂದ ಬಂದ ಈ ಹುಡುಗ ಟ್ರೋಲ್ ಆಗಿದ್ದು ಲೆಕ್ಕವಿಲ್ಲದಷ್ಟು ಸಲ. ಆದರೆ ಆತ ಕಳೆದ ರಾತ್ರಿಯ ಪಂದ್ಯದಲ್ಲಿ ಮಾಡಿದ ದಾಖಲೆ ಐಪಿಎಲ್ ಇತಿಹಾಸಕ್ಕೆ ಹೊಸದು. ಪವರ್ ಪ್ಲೇ ಒಳಗೆ ಎರಡು ಮೇಡನ್ ಓವರ್ ಎಸೆದು ಮೂರು ವಿಕೆಟ್ ಗಳಿಸಿದ. ಸಣ್ಣ ಮಾತೇ ?
ಸಿರಾಜ್ ತಾಯಿ ಶಬಾನ ಬೇಗಮ್ ಅನಕ್ಷರಸ್ಥೆ. ಅಪ್ಪ ಮಹಮದ್ ಗೌಸ್ ಶಾಲೆ ಮೆಟ್ಟಿಲು ನೋಡದ ಆಟೋ ಡ್ರೈವರ್. ಹೈದರಾಬಾದಿನ ಕಡು ಕೊಳಕು ಕೊಳಗೇರಿ ಬಡಾವಣೆಯಲ್ಲಿ ದಟ್ಟ ದಾರಿದ್ರ್ಯವನ್ನೇ ಹೊತ್ತು ಬೆಳೆದ ಸಿರಾಜ್ ಎಷ್ಟೇ ಅವಮಾನಗಳುಂಟಾದರೂ ಎದುರಿಸಿದವ, ಗೆದ್ದವ. ಆದರೆ ಅವನ ಬದುಕು ಬದಲಾಗಿದ್ದು RCB ಸೇರಿದ ಮೇಲೆ.
ಆಗ ಹೇಳಿದ ಮಾತು: ಅಪ್ಪ–ಅಮ್ಮನಿಗೆ ಹೈದರಾಬಾದಿನ ಪ್ರತಿಷ್ಠಿತ ಮತ್ತು ಸುಂದರವಾದ ಪ್ರದೇಶದಲ್ಲಿ ಮನೆ ಕಟ್ಟಿಸಿಕೊಡುವ ಕನಸು ಈಗ ಕೈಗೂಡಲಿದೆ. ನಾನು ಕ್ರಿಕೆಟಿಗನಾಗಲು ಅಪ್ಪ ಜೀವನವಿಡೀ ಆಟೋ ರಿಕ್ಷಾ ಚಾಲನೆ ಮಾಡಿದ್ದಾರೆ. ಇಡೀ ಕುಟುಂಬವನ್ನು ಸಲುಹಿದ್ದಾರೆ. ಅಣ್ಣ ಮತ್ತು ಅಮ್ಮ ಕೂಡ ಬಹಳಷ್ಟು ತ್ಯಾಗ ಮಾಡಿದ್ದಾರೆ. ಈಗ ಬಂದಿರುವ ಹಣದಿಂದ ನನ್ನ ಹೊಸಮನೆ ಕನಸು ನನಸಾಗಲಿದೆ ಎಂದಿದ್ದರು ಸಿರಾಜ್.
ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆಡಿದ ಮೇಲೆ ಈ ಸಿರಾಜ್ ಭಾರತಕ್ಕೂ ಆಡಿದ. ಇಡೀ RCB ತಂಡ ಹೈದರಾಬಾದಿನಲ್ಲಿ ಪಂದ್ಯದ ಎರಡ್ಮೂರು ಮುಂಚಿನ ದಿನ ABD ಸಹಿತ ಈತನ ಹೈದರಾಬಾದಿನ ಹೊಸ ಮನೆಗೆ ಹೋಗಿ ಬಿರಿಯಾನೀನ ನೆಲದ ಮೇಲೆ ಕೂತು ತಿಂದು ಖುಷಿಪಟ್ಟಿದ್ದರು. ನಿಮಗೆ ಗೊತ್ತೆ ಆ ಹೊಸ ಮನೇನ ಈತ RCB ಮಾಡಿದ್ದ ಬಿಡ್ ಮೇಲೆ ಕೊಂಡುಕೊಂಡಿದ್ದ.
ಕಳೆದ ರಾತ್ರಿ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಸಿರಾಜ್ ಪ್ರದರ್ಶನ ನೋಡಿ ಆತನ ಆಟೋ ಡ್ರೈವರ್ ತಂದೆ ಎಷ್ಟು ಖುಷಿಪಟ್ಟಿರಬಹುದು? ಬಡವರ ಮಕ್ಕಳ ಸಂಭ್ರಮಗಳು ಸಣ್ಣದಾದರೂ ಅವು ಜಗತ್ತಿನ ಕಣ್ಣರಳಿಸುತ್ತವೆ ಅಲ್ಲವೆ.
Credit: siddu satyanavar

