ದೊಡ್ಡಬಳ್ಳಾಪುರ: ವಿಧಾನ ಪರಿಷತ್ ಚುನಾವಣೆಯ ಸಂದರ್ಭದಲ್ಲಿ ಶಿಕ್ಷಕರ ಮೇಲೆ ಜೆಡಿಎಸ್ ಮುಖಂಡರು ಬೆದರಿಕೆ ಹಾಕುತ್ತಿದ್ದಾರೆ. ಶಿಕ್ಷಕರು ಭಯದ ವಾತಾವರಣದಲ್ಲಿ ಮತ ಚಲಾಯಿಸಬೇಕಾಗಿರುವ ವಾತಾವರಣ ಉಂಟಾಗಿದೆ ಎಂದು ಕೆಲವು ಶಿಕ್ಷಕರು ಬಿಜೆಪಿ ಕಾನೂನು ಪ್ರಕೋಷ್ಠದ ಗಮನಕ್ಕೆ ತಂದಿದ್ದಾರೆ.ಶಿಕ್ಷಕರು ಜೆಡಿಎಸ್ ಮುಖಂಡರ ಬೆದರಿಕೆಗೆ ಹೆದರದೆ ಮತ ಚಲಾಯಿಸಬೇಕೆಂದು ಬಿಜೆಪಿ ಕಾನೂನು ಪ್ರಕೋಷ್ಠದ ಮುಖಂಡರು ಮನವಿ ಮಾಡಿದ್ದಾರೆ.
ನಗರದ ಕನ್ನಡ ಜಾಗೃತ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತಾನಾಡಿದ ಬಿಜೆಪಿ ಕಾನೂನು ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯ ರವಿಮಾವಿನ ಕುಂಟೆ, ಶಿಕ್ಷಕರ ಕ್ಷೇತ್ರದಿಂದ ಮೂರು ಸಲ ಆಯ್ಕೆಯಾಗಿರುವ ಪುಟ್ಟಣ್ಣರ ಕಾರ್ಯವೈಖರಿಗೆ ಶಿಕ್ಷಕರು ನೀಡಿರುವ ಬೆಂಬಲ ಸಾಕ್ಷಿಯಾಗಿದೆ. ಈ ಚುನಾವಣೆಯಲ್ಲಿಯೂ ಸಹ ಪುಟ್ಟಣ್ಣರ ಕಡೆ ಹೆಚ್ಚಿನ ಶಿಕ್ಷಕರು ಒಲವು ಹೊಂದಿರುವುದನ್ನು ಸಹಿಸಲಾರದೆ ಜೆಡಿಎಸ್ ಪಕ್ಷದ ಮುಖಂಡರು ಬೆದರಿಕೆ, ಆಮಿಷ ಒಡ್ಡುತ್ತಿದ್ದಾರೆಂದು ಆರೋಪಗಳು ಕೇಳಿ ಬಂದಿವೆ. ಅಂತಹ ಶಿಕ್ಷಕರ ಬೆದರಿಕೆ ಬಗ್ಗದೆ ಕಾನೂನು ಪ್ರಕೋಷ್ಠದ ನೆರವನ್ನು ಪಡೆಯಬಹುದಾಗಿದೆ ಎಂದರು.
ಕಾನೂನು ಪ್ರಕೋಷ್ಠದ ಜಿಲ್ಲಾ ಸಂಚಾಲಕ ಆನಂದ್ ಕುಮಾರ್ ಮಾತನಾಡಿ, ಚುನಾವಣೆಯಲ್ಲಿ ಶಿಕ್ಷಕರಿಗೆ ಬೆದರಿಕೆ ಹಾಕುವುದು ಖಂಡನೀಯ. ಪ್ರಜಾಪ್ರಭುತ್ವದಲ್ಲಿ ಮತದಾನ ಮೂಲಭೂತ ಹಕ್ಕಾಗಿದ್ದು, ಬೆದರಿಕೆ, ಒತ್ತಡ ಹೇರುವುದು ಕಾನೂನು ಪ್ರಕಾರ ಅಪಾರಾಧವಾಗಲಿದೆ. ಈ ನಿಟ್ಟಿನಲ್ಲಿ ಬೆದರಿಕೆಗೆ ಒಳಗಾಗುವ ಶಿಕ್ಷಕರು ಯಾವುದೇ ಅಂಜಿಕೆ ಇಲ್ಲದೆ ಸಾಕ್ಷಿ ಸಮೇತ ಪ್ರಕೋಷ್ಠದ ಸಹಾಯ ಕೋರಿದರೆ ಕಾನೂನಿನ ಕ್ರಮ ಕೈಗೊಳ್ಳಲು ಚುನಾವಣೆ ಆಯೋಗ ಹಾಗೂ ಪೊಲೀಸ್ ಠಾಣೆಗೆ ದೂರು ನೀಡಲಾಗುವುದೆಂದರು.
ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಮುನಿರಾಜು ಮಾತನಾಡಿ, ಶಿಕ್ಷಕರಿಂದ ಶಿಕ್ಷಕರಿಗೆ ಕರೆ ಮಾಡಿಸುವ ಜೆಡಿಎಸ್ ಮುಖಂಡರು, ಶಿಕ್ಷಕ ಯಾರ ಪರ ಒಲವಿದ್ದರೆಂಬುದನ್ನು ತಿಳಿದು ಪುಟ್ಟಣ್ಣರ ಬೆಂಬಲ ಎಂದರೆ ಮನೆಯ ಬಳಿ ಗುಂಪು ಗುಂಪಾಗಿ ತೆರಳಿ ಬೆದರಿಕೆ, ಆಮಿಷ ಒಡ್ಡುತ್ತಿದ್ದಾರೆಂದು ಅನೇಕ ಶಿಕ್ಷಕರು ಅಳಲು ತೋಡಿಕೊಂಡಿದ್ದಾರೆ ಇದು ಸಲ್ಲದೆಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಕಾನೂನು ಪ್ರಕೋಷ್ಠದ ತಾಲೂಕು ಅಧ್ಯಕ್ಷ ಎಂ.ವಿ.ವಿಜಯಕುಮಾರ್, ನಗರ ಸಹ ಸಂಚಾಲಕರಾದ ರಮೇಶ್ ಕುಮಾರ್, ಎನ್.ಸುರೇಶ್ ಕುಮಾರ್, ಎ.ಜೆ.ಮಂಜುನಾಥ್, ಭರತ್, ತೂಬಗೆರೆ ಹೋಬಳಿ ಅಧ್ಯಕ್ಷ ಜಯರಾಂ ಮತ್ತಿತರಿದ್ದರು.

