ನಾವೆಲ್ಲರೂ ಇದನ್ನು ಸಂಪೂರ್ಣವಾಗಿ ಓದಿಕೊಂಡು, ಆತ್ಮಸಾಕ್ಷಿಯಿಂದ ಸತ್ಯ ಒಪ್ಪಿಕೊಳ್ಳೋಣ..
ಇದೊಂದು ಅಭಿಯಾನವಾಗಲಿ. ಮಹಾಮಾರಿ ಕರೊನಾ ಇತ್ತೀಚೆಗೆ ಸ್ವಲ್ಪ ಮಟ್ಟಿಗೆ ಹತೋಟಿಗೆ ಬಂದ ಮೇಲೆ ದೇಶದ ತುಂಬೆಲ್ಲಾ “ಶಾಲೆಗಳನ್ನು ತೆರೆಯುವ” ಪರ-ವಿರೋಧ ಚರ್ಚೆಗಳು ಜೋರಾಗಿ ನಡೆಯುತ್ತಿವೆ. ಈ ನಡುವೆ ಈಗಿರುವ ನಮ್ಮ ದೇಶದ ಶಿಕ್ಷಣ ನೀತಿ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಅಷ್ಟೊಂದು ಪರಿಣಾಮಕಾರಿಯೇ…? ಎಂಬ ಚರ್ಚೆ ಕೇಳಿಬರುತ್ತಿದೆ. ಸತ್ಯ ಹೇಳಬೇಕೆಂದರೆ,, ಖಂಡಿತವಾಗಿಯೂ ಇಲ್ಲ.
ಯಾಕೆ ಅಂತ ಈ ಅಂಕಣದ ಕೊನೆಯಲ್ಲಿ ಚಿಕ್ಕದಾಗಿ-ಚೊಕ್ಕದಾಗಿ ವಿವರಿಸುತ್ತೇನೆ.ಎಲ್ಲಕ್ಕಿಂತ ಮೊದಲು ಪ್ರಸ್ತುತ ನಮ್ಮ ದೇಶದ ಮೆಕಾಲೆ ಶಿಕ್ಷಣ ನೀತಿ ಹಾಗೂ ಅದಕ್ಕಿಂತ ಮುಂಚೆ ನಮ್ಮ ದೇಶದಲ್ಲಿ ಇದ್ದ ಗುರುಕುಲ ಶಿಕ್ಷಣ ಪದ್ಧತಿ* ಯ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ..
ಸಹಸ್ರಾರು ವರ್ಷಗಳ ಹಿಂದೆ ನಮ್ಮ ಅಖಂಡ ಭಾರತದಲ್ಲಿ ಗುರುಕುಲ ಶಿಕ್ಷಣ ಪದ್ಧತಿ ಇತ್ತು. ಆಗಿನ ಗುರುಕುಲಗಳಲ್ಲಿ ಮನುಷ್ಯನ ಜನನದಿಂದ ಮರಣದವರೆಗಿನ ಪ್ರಯಾಣಕ್ಕೆ ಅವಶ್ಯವಾದ “ಧರ್ಮ ಭೋದನೆ” ನಡೆಯುತ್ತಿತ್ತು. ಮನುಷ್ಯ ತನ್ನ ನಿಸ್ವಾರ್ಥ ಹಾಗೂ ಪ್ರತಿಫಲ ನಿರಪೇಕ್ಷಿತ ಸೇವಾ ಮನೋಭಾವವನ್ನೇ ಜೀವನದ ಮುಖ್ಯ ಧ್ಯೇಯವನ್ನಾಗಿಸಿಕೊಂಡಿದ್ದ.
ಧರ್ಮದಿಂದ ಬದುಕುವುದೇ ದೇವರನ್ನು ಕಾಣುವ ಏಕೈಕ ಮಾರ್ಗ ಎಂಬುದನ್ನು ನಂಬಿದ್ದ..ಕಾಲಾನಂತರದಲ್ಲಿ ನಿಧಾನವಾಗಿ ಮನುಷ್ಯ ತನ್ನ ಜೀವನಶೈಲಿಯನ್ನು ಮಾರ್ಪಾಡು ಮಾಡಿಕೊಂಡು ಆಧುನಿಕತೆಯ ನೆಪದಲ್ಲಿ ‘ಅ’ನಾಗರಿಕತೆಯತ್ತ ವಾಲಿದ.
ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಬದುಕಲು ಪ್ರಾರಂಭಿಸಿದ. ಅದೇ ಸಮಯಕ್ಕೆ ನಮ್ಮ ಅಖಂಡ ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಸ್ಥಾಪನೆಯಾಯಿತು. ಭೌತಿಕವಾಗಿ ಭಾರತದ ಮೇಲೆ ಸಹಜವಾಗಿಯೇ ಹಿಡಿತ ಸಾಧಿಸಿದ ಬ್ರಿಟಿಷರಿಗೆ ಭಾರತೀಯರನ್ನು ಸಾಂಪ್ರದಾಯಿಕವಾಗಿ ಹತ್ತಿಕ್ಕಲು (ಇದರ ಮೂಲ ಮಂತ್ರ ಮತಾಂತರವಾಗಿತ್ತು) ಸಾಧ್ಯವಾಗಲಿಲ್ಲ.
ಯಾಕೆಂದರೆ ಭಾರತೀಯರಿಗೆ ಗುರುಕುಲದಲ್ಲಿ ಸಿಗುತ್ತಿದ್ದ ಶಿಕ್ಷಣದ ತಾಕತ್ತು ಹಾಗಿತ್ತು..ಆಗ ಬ್ರಿಟಿಷ್ ಅಧಿಕಾರಿ ಥಾಮಸ್ ಬಾಬಿಂಗ್ಟನ್ ಮೆಕಾಲೆ ಎಂಬಾತನು ಭಾರತದ ಉದ್ದಗಲಕ್ಕೂ ಅಧ್ಯಯನ ನಡೆಸಿ ಕೊನೆಯದಾಗಿ ಬ್ರಿಟಿಷ್ ಸರ್ಕಾರಕ್ಕೆ ಹೀಗಂತ ಪತ್ರ ಬರೆದ..” ಭಾರತೀಯರ ಸಂಸ್ಕೃತಿಯನ್ನು ಅವರ ಮನಸ್ಸಿನಿಂದ ಮರೆ ಮಾಡದೇ ಅವರನ್ನು ಹಣಿಯುವುದು ಅಸಾಧ್ಯ”.
ಇದರ ಮೊದಲನೇ ಹೆಜ್ಜೆಯಾಗಿ ಬ್ರಿಟಿಷ್ ಸರ್ಕಾರ ನಮ್ಮ ಭಾರತದ ಸಾಂಪ್ರದಾಯಿಕ ಗುರುಕುಲ ಶಿಕ್ಷಣ ಪದ್ಧತಿಯನ್ನು ಅಪರಾಧ ಎಂದು ಘೋಷಿಸಿ, ೧೮೫೩ ರಲ್ಲಿ ಮೆಕಾಲೆ ಶಿಕ್ಷಣ ನೀತಿ (ನನ್ನ ಪ್ರಕಾರ *ಜೀವನ ಮಾಡಲು ಯೋಗ್ಯವಾದದ್ದನ್ನು ಹೊರತುಪಡಿಸಿ ಉಳಿದದ್ದೆಲ್ಲವನ್ನೂ ಕಲಿಸುವ* ಶಿಕ್ಷಣ ವ್ಯವಸ್ಥೆ) ಯನ್ನು ಬಲವಂತವಾಗಿ ಜಾರಿಗೆ ತಂದಿತು..
ನಂತರದ ಸ್ವಾತಂತ್ರ್ಯ ಸಂಘರ್ಷದಲ್ಲಿ ಇದನ್ನು ವಿರೋಧಿಸಿದವರ ಧ್ವನಿಯಡಗಿಸಿ, ದೇಶಾದ್ಯಂತ ಇದನ್ನು ಖಡ್ಡಾಯಗೊಳಿಸಲಾಯಿತು. ಹತ್ತೊಂಬತ್ತನೆಯ ಶತಮಾನದಲ್ಲಿ ಸ್ವಾತಂತ್ರ್ಯ ಸಂಗ್ರಾಮ ತಾರಕಕ್ಕೇರಿದ್ದ ಸಂದರ್ಭದಲ್ಲಿ ನೆಹರೂ ಸಹಿತ ಕ್ರಾಂತಿಕಾರಿಗಳನ್ನು ಹೊರತುಪಡಿಸಿ ಬಹುತೇಕ ಮುಂದಾಳುಗಳು ಬ್ರಿಟಿಷ್ ಅಧಿಕಾರಿಗಳ ತಾಳಕ್ಕೆ ತಕ್ಕಂತೆ ಕುಣಿಯಲಾರಂಭಿಸಿ, *ಹೊಂದಾಣಿಕೆಯ ಹೋರಾಟ* ನಡೆಸುತ್ತಾ ಬಂದರು…
ಭವಿಷ್ಯದಲ್ಲಿ ಭಾರತೀಯರಿಗೆ ತಮ್ಮ ಗತಕಾಲದ ತಾಕತ್ತಿನ ಅರಿವಾದರೆ ವಿಶ್ವ ಭೂಪಟದಲ್ಲಿ ಭಾರತವೇ ಸಾರ್ವಭೌಮನಾಗುವ ಭಯವಿದ್ದಿದ್ದರಿಂದಲೇ ಬ್ರಿಟಿಷರು ನೆಹರೂ ಸೇರಿದಂತೆ ಕೆಲವರ ಜೊತೆಗೆ *ಹೊಂದಾಣಿಕೆ* ಮಾಡಿಕೊಂಡು ಸ್ವತಂತ್ರ ಬಿಟ್ಟುಕೊಟ್ಟು, ನೇತಾಜಿಯವರ ಘರ್ಜನೆಗೆ ಹೆದರಿ ಫಲಾಯನಗೈದಿದ್ದು….
ನಂತರ ನಡೆದಿದ್ದು ದುರಂತ..ದುರಂತ ಯಾಕೆಂದರೆ, ಯಾವ ಬ್ರಿಟಿಷರು,ಹಾಗೂ ಅವರ ಕಾನೂನುಗಳು ಭಾರತದಲ್ಲಿ ಬರುವ ಮುಂಚೆ ಇಡೀ ಅಖಂಡ ಭಾರತದಲ್ಲಿ ವೈಭವೋಪೇತವಾದ ಸಿರಿವಂತಿಕೆ ಇತ್ತೋ… ಆ ಸಿರಿವಂತಿಕೆಯನ್ನು ಶಾಶ್ವತವಾಗಿ ಕಮರಿಸುವ ಒಳಒಪ್ಪಂದ ಮಾಡಿಕೊಂಡಿದ್ದ ನೆಹರೂ ಸೇರಿದಂತೆ ಅವರ ನಂತರದ ಇಂದಿರಾ ಮತ್ತು ಅವರ ಬಾಲಂಗೋಚಿಗಳು(ಶಾಸ್ತ್ರೀಜೀ ಹೊರತುಪಡಿಸಿ) ಸಹ ಬ್ರಿಟಿಷ್ ಸಾಮ್ರಾಜ್ಯದ ಆಡಳಿತ ನೀತಿಯಲ್ಲಿಯೇ ಭಾರತವನ್ನು ಗುಲಾಮೀತನದ ಮುಖೇನ ಅಧಃಪತನಕ್ಕೆ ಕೊಂಡೊಯ್ದರು..
ಹೀಗೆಯೇ ಬ್ರಿಟಿಷ್ ಸರ್ಕಾರದ ಮೆಕಾಲೆ ಶಿಕ್ಷಣ ನೀತಿ ಹಾಗೂ ಕೆಲವು ಭಾರತೀಯರ ಪಾಶ್ಚಿಮಾತ್ಯ ‘ಅ’ಸಂಸ್ಕೃತಿ ವ್ಯಾಮೋಹವು ನಮ್ಮ ದೇಶದ ಸಂಸ್ಕೃತಿಯ ಮೂಲ ಸ್ವರೂಪವನ್ನೇ ಹಾಳುಗೆಡವಿತು.
ಮೆಕಾಲೆ ಶಿಕ್ಷಣ ನೀತಿಯಲ್ಲಿ ಬರುವ ಯಾವ ಪಾಠಗಳೂ,ಸಮೀಕರಣಗಳೂ, ಸೂತ್ರಗಳೂ ನಮ್ಮ ಭಾರತೀಯ ಜನರ ಜೀವನ ರೂಪಿಸುವಲ್ಲಿ ಸಂಪೂರ್ಣ ಎಡವಿರುವುದರ ಜೊತೆಗೆ, ಬ್ರಿಟಿಷರ ಅಪೇಕ್ಷೆಯಂತೆ ಭಾರತೀಯ ಸನಾತನ ಸಂಸ್ಕೃತಿಯನ್ನು ನಾಶ ಮಾಡುವ ಪ್ರಯತ್ನದಲ್ಲಿ
ಸ್ವಲ್ಪ ಮಟ್ಟಿಗೆ ಯಶ ಕಂಡಿದ್ದಂತೂ ಸುಳ್ಳಲ್ಲ.. ಇಂತಹಾ ಭಾರತೀಯ ಸಂಸ್ಕೃತಿ ವಿರೋಧಿ ಮೆಕಾಲೆ ಶಿಕ್ಷಣ ನೀತಿಯ ಒಂದಿಷ್ಟು *ಬೆತ್ತಲೆ ಸತ್ಯ* ಗಳು ನನ್ನ ಮಾನಸಿಕ ಲೇಖನಿ ನಾಮ *ವಿಶ್ವನಾಥ* ನ ಹೆಸರಿನಲ್ಲಿ…..
*ವಿಶ್ವನಾಥ* …..ಓದಿದ್ದು ಹತ್ತು ಮತ್ತು ಐಟಿಐ(ಫಿಟ್ಟರ್). ಅಂಗನವಾಡಿಯಿಂದ ಹಿಡಿದು ಹತ್ತನೇ ತರಗತಿವರೆಗೆ ಶಾಲೆಯಲ್ಲಿ ಕಲಿಸಿದ ಪಾಠಗಳು ಇಂದಿಗೂ ವಿಶ್ವನಾಥನಿಗೆ ಎಳ್ಳಷ್ಟೂ ಸಹಾಯವಾಗಲಿಲ್ಲ.
ಕೃಷಿ ಮಾಡಲಿಕ್ಕಂತೂ ಆತನ ಅಪ್ಪ ಬೇಸಾಯ ಮಾಡಿದ್ದನ್ನು ನೋಡಿ ಕಲಿತಿದ್ದೇ ವಿನಃ ಯಾವ ಪಾಠದಲ್ಲೂ ಕೃಷಿ ಬಗ್ಗೆ ಒಂದಿಂಚೂ ಮಾಹಿತಿ ಇರಲಿಲ್ಲ. ಜೀವನದಲ್ಲಿ ಅತಿ ಮುಖ್ಯವಾಗಿ ಇರಬೇಕಾದ ಶಿಸ್ತು, ವಿಧೇಯತೆ ಹಾಗೂ ನಡವಳಿಕೆ ಎಂಬ ತ್ರಿರತ್ನಗಳೂ ಅಮ್ಮ ಹಾಗೂ ಅಪ್ಪನ ಬಳುವಳಿಗಳು.
ಈಗ ಮಾಡುತ್ತಿರುವ ಎಲೆಕ್ಟ್ರಿಕಲ್ ಗುತ್ತಿಗೆಯ ಉದ್ಯಮವೂ ಅವನ ಅಣ್ಣನ ಬಳಿ ಕಲಿತಿದ್ದು. ಈಗ ಮಾಡುತ್ತಿರುವ ಉದ್ಯಮದಲ್ಲೂ ಆಗೊಮ್ಮೆ ಈಗೊಮ್ಮೆ ಇಣುಕುವ ಕಟಿಂಗ್ ಪ್ಲೈಯರ್, ಸ್ಕ್ರೂ ಡ್ರೈವರ್, ಹಾಕ್ ಸಾ ಬ್ಲೇಡ್ ಗಳ ಪರಿಚಯವಾಗಿದ್ದು ಮಾತ್ರ ಅಜಮಾಸು “ಲಕ್ಷ ಖರ್ಚು ಮಾಡಿ ಎರಡು ವರ್ಷಗಳ ಕಾಲ ಕಲಿತ ಐಟಿಐ ನ ಬಳುವಳಿ!!!!”. ಇನ್ನೂರು ರೂಪಾಯಿಯ ಕಟಿಂಗ್ ಪ್ಲೈಯರ್,ಸ್ಕ್ರೂ ಡ್ರೈವರ್ ಗಳನ್ನು ಅರಿಯಲು ಲಕ್ಷ ಖರ್ಚು ಮಾಡುವ ಅವಶ್ಯಕತೆ ಏನಿತ್ತು ವಿಶ್ವನಾಥನಿಗೆ..!?
ಹಾಗಾದರೆ ನಾವುಗಳೆಲ್ಲರೂ ಶಾಲೆ,ಕಾಲೇಜುಗಳಲ್ಲಿ ಕಲಿತಿದ್ದೇನು!? ಈಗ ಜೀವನೋಪಾಯಕ್ಕಾಗಿ ಮಾಡುತ್ತಿರುವುದೇನು!!? *ಬರೀ ಶಿಕ್ಷಣದಿಂದಲೇ ಹಣ,ಅನ್ನ ಹುಟ್ಟುವುದಾದರೆ ಮಣ್ಣಿನಲ್ಲಿ ಹೊನ್ನಿನಂತಹ ಅನ್ನ ಬೆಳೆಯುತ್ತಿದ್ದ ನಮ್ಮ ಹಿಂದಿನ ತಲೆಮಾರಿನ ಕೃಷಿಕರು ಅಂತಹ ಅನ್ನ ಬೆಳೆಯುವುದನ್ನು ಕಲಿತದ್ದಾದರೂ ಯಾವ ವಿಶ್ವವಿದ್ಯಾಲಯಗಳಲ್ಲಿ..!??!!!?*
ಹಾಗಾದರೆ ಅನ್ನ,ಹಣ ಹುಟ್ಟಿಸುವ ದಾರಿ ತೋರದ ನಮ್ಮ ದೇಶದ ಪ್ರಸ್ತುತ ಶಿಕ್ಷಣ ವ್ಯವಸ್ಥೆಯು ನಮ್ಮ ಪೀಳಿಗೆಗೆ ನೀಡಿದ ಘನಂದಾರಿ ಕೊಡುಗೆಯಾದರೂ ಏನು!?
ಲಕ್ಷ ಲಕ್ಷ ಹಣ ಕೊಟ್ಟು, ಹವಾನಿಯಂತ್ರಿತ ಪರಿಸರದಲ್ಲಿ ಪಾಠ ಕೇಳಿ, ಹೆಚ್ಚುವರಿ ಟ್ಯೂಷನ್ ಅದು ಇದು ಹಾಳು ಮೂಳು ಎಲ್ಲಾ ಸೌಲಭ್ಯಗಳ ಸಹಾಯದಿಂದ ಪದವಿ ಪಡೆದವನು ಹೊರಬಂದು ತನ್ನ ಪದವಿ ಅಂಕಪಟ್ಟಿ ಹೊರತಾಗಿ ಒಂದು ತುತ್ತು ಅನ್ನ ಅಥವಾ ಒಂದು ರೂಪಾಯಿ ಬಿಡಿಗಾಸು(ಕಳ್ಳತನ,ಸುಳ್ಳುತನ ಹೊರತುಪಡಿಸಿ ನ್ಯಾಯಮಾರ್ಗದಲ್ಲಿ) ಸಂಪಾದಿಸಿಕೊಳ್ಳುವ ಯೋಗ್ಯತೆಯೇ ಇಲ್ಲದ ಮೇಲೆ ಅವನ ತಂದೆ ತಾಯಿಯ ಬೆವರಿನ “ಫಲ” ಏನು!??…
ಇವತ್ತು ಒಬ್ಬ ಉನ್ನತ ವ್ಯಾಸಂಗ (ಖಾಸಗಿ ಸಂಸ್ಥೆ) ಪಡೆದ ವಿದ್ಯಾರ್ಥಿ ಅವನು ಕೆಲಸಕ್ಕೆ ಸೇರಿದ ಮೇಲೆ ಅವನ ಸಂಬಳದ ಹಣವು, ಅವನು ಪದವಿ ಪಡೆಯಲು ಖರ್ಚು ಮಾಡುವ ಹಣದ ಬಡ್ಡಿಗೂ ಸಹ ಸಮನಾಗಿರುವುದಿಲ್ಲ.
ಇದು ಈಗಿನ ಶಿಕ್ಷಣದ ದುರಾವಸ್ಥೆ. ಪ್ರಮಾಣ ಮಾಡಿ ಹೇಳಿ..* ನಮ್ಮ ಇಂದಿನ ಪೀಳಿಗೆಯ ಎಷ್ಟು ಜನ “ವಿದ್ಯಾವಂತರು” ತಾವು ಪಡೆದ ಶಿಕ್ಷಣಕ್ಕೆ ಸಂಬಂಧಿಸಿದ ಕೆಲಸವನ್ನೇ ಮಾಡುತ್ತಿದ್ದಾರೆ.!?*
ಶೇಕಡಾ ಹತ್ತರಷ್ಟೂ ಸಹ ಇಲ್ಲ. ಸತ್ಯ ಅಲ್ವಾ…!!? ಇಷ್ಟೆಲ್ಲಾ ದುಂದುವೆಚ್ಚ ಮಾಡಿಸಿ, ಮಧ್ಯಮ ವರ್ಗವನ್ನು ತನ್ನ ಕಬಂಧಬಾಹುಗಳೊಳಗೆ ಸಿಲುಕಿಸಿಕೊಂಡಿರುವ ಈಗಿನ ಶಿಕ್ಷಣ ವ್ಯವಸ್ಥೆಯ ಅನಿವಾರ್ಯತೆ ಅಥವಾ ಅವಶ್ಯಕತೆ ನಮಗೆ ಖಂಡಿತವಾಗಿಯೂ ಇದೆಯಾ!!?
ಒಮ್ಮೆ ಗಂಭೀರವಾಗಿ ಯೋಚಿಸಿ ,, ನಿರ್ಧರಿಸಿ. ಇದು ಕೇವಲ ನನ್ನೊಳಗಿರುವ ವಿಶ್ವನಾಥನ ಪ್ರಶ್ನೆ ಮಾತ್ರವಲ್ಲ. ನಮ್ಮೆಲ್ಲರೊಳಗೂ ಒಬ್ಬೊಬ್ಬ ವಿಶ್ವನಾಥನುಂಟು. ನಮ್ಮೆಲ್ಲರಲ್ಲೂ ಇರುವ ಆ ವಿಶ್ವನಾಥನದ್ದೇ ಈ ಪ್ರಶ್ನೆ….
ಹಾಗಾದರೆ ಪ್ರಸ್ತುತ ನಮ್ಮ ದೇಶದಲ್ಲಿ ಇರುವ ಮೆಕಾಲೆ ಶಿಕ್ಷಣ ನೀತಿಯನ್ನು ರದ್ದುಗೊಳಿಸಿ, ಗುರುಕುಲ ಶಿಕ್ಷಣ ಪದ್ಧತಿಯನ್ನೇ ಅಳವಡಿಸಿಬಿಟ್ಟರೆ ಎಲ್ಲವೂ ಸರಿಯಾಗಿಬಿಡುತ್ತದೆಯೇ…!!????ಖಂಡಿತವಾಗಿಯೂ ಇಲ್ಲ.. *ಯಾವುದೇ ದೇಶದ ಮಧ್ಯಮ ವರ್ಗ ಹಾಗೂ ಕೆಳ ವರ್ಗದ ಜನತೆಯ ಆರ್ಥಿಕ ಅಭಿವೃದ್ಧಿ ಆದರೆ ಮಾತ್ರ ಆ ದೇಶ ಸಮಗ್ರಾಭಿವೃದ್ಧಿ ಹೊಂದಲು ಸಾಧ್ಯ* .
ಇದು ಸಾರ್ವಕಾಲಿಕ ಶ್ರೇಷ್ಠ ಸತ್ಯವೂ ಹೌದು. ಹಾಗಾದರೆ ಸರ್ಕಾರಗಳು ಕೆಳ ಹಾಗೂ ಮಧ್ಯಮ ವರ್ಗದ ಜನತೆಗೆ ಇಷ್ಟೊಂದು ಭರಪೂರ ಯೋಜನೆಗಳನ್ನು, “ಭಾಗ್ಯ” ಗಳನ್ನು ನೀಡುತ್ತಿದ್ದರೂ ಅವರ ಶ್ರೇಯೋಭಿವೃದ್ಧಿ ಆಗುತ್ತಿಲ್ಲವೇಕೆ!!??
ಹಾಗಾದರೆ ಸರ್ಕಾರ ಎಡವಿದ್ದಾದರೂ ಎಲ್ಲಿ? ಎಂಬ ಪ್ರಶ್ನೆಗೆ ಉತ್ತರ.” ಉಚಿತ ಮೂಲಭೂತ ಸೌಕರ್ಯಗಳ ” ಹೊರತಾಗಿ ಕೆಳ,ಮಧ್ಯಮ ವರ್ಗಕ್ಕೆ ಬೇರಾವುದೇ ಉಚಿತ ಯೋಜನೆ, ಬಿಟ್ಟಿ ಭಾಗ್ಯಗಳನ್ನು ನೀಡಿದರೂ, ಇಂತಹ ಇನ್ನೂ ನೂರು ಸರ್ಕಾರಗಳು ಬಂದು ಹೋದರೂ ನಮ್ಮ ದೇಶದ ಕೆಳ ಹಾಗೂ ಮಧ್ಯಮ ವರ್ಗದ ಜನರ ಆರ್ಥಿಕ ಪರಿಸ್ಥಿತಿ ಈಗಿರುವುದಕ್ಕಿಂತ ಹೀನಾಯ ಸ್ಥಿತಿಗೆ ತಲುಪುತ್ತದೆಯೇ ಹೊರತು ಒಂದಿಂಚೂ ಮೇಲೇರುವುದಿಲ್ಲ.
ಯಾಕೆಂದರೆ ಕೆಳ,ಮಧ್ಯಮ ವರ್ಗದ ಜನರ ಆದಾಯದ ಭಾಗಶಃ ಪೂರ್ಣಭಾಗ ಅಥವಾ ಆದಾಯಕ್ಕಿಂತಲೂ ಹೆಚ್ಚು ಹಣ ಖರ್ಚಾಗುತ್ತಿರುವುದು ಮೂಲಭೂತ ಸೌಕರ್ಯಗಳಲ್ಲಿ ಒಂದು ಎನಿಸಿಕೊಂಡಿರುವ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ!!!! ಎಂಬುದು ಬಹು ಆತಂಕಕಾರಿ
*ಬೆತ್ತಲೆ ಸತ್ಯ* ..
ಹಾಗಾದರೆ ಈ ವಿಚಾರದಲ್ಲಿ ಆಳುವ ಸರ್ಕಾರಗಳ ನೈತಿಕ ಜವಾಬ್ದಾರಿ ಏನು?!?
ಉತ್ತರ ಬಹಳ ಸಿಂಪಲ್…
ಎಲ್ಲಾ ಸರ್ಕಾರಿ ಶಾಲೆ ಕಾಲೇಜುಗಳಲ್ಲಿಯೂ ಎಲ್ಲಾ ವಿಧದ ಶಿಕ್ಷಣವನ್ನೂ ಸಂಪೂರ್ಣ ಉಚಿತವಾಗಿ ಹಾಗೂ ಉನ್ನತ ಗುಣಮಟ್ಟದಲ್ಲಿ ನೀಡಬೇಕು. ಬ್ರಿಟಿಷರ ಮೆಕಾಲೆ ಶಿಕ್ಷಣ ವ್ಯವಸ್ಥೆ ಎಂಬ ಅಪ್ಪ ಹಾಕಿದ ಆಲದ ಮರಕ್ಕೆ ಜೋತುಬೀಳುವ ಪರಿಪಾಠಕ್ಕೆ ಕುಂಬಳಕಾಯಿ ಹೊಡೆದು ಪ್ರಸ್ತುತ ಕೇಂದ್ರ ಸರ್ಕಾರದ ಪ್ರಮುಖ ಪ್ರಸ್ತಾವನೆಯಾಗಿರುವ ಪರಿಷ್ಕೃತ ಶಿಕ್ಷಣ ನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು. ಮುಖ್ಯವಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮೂಗುದಾರ ಕಟ್ಟಬೇಕು. ಮಕ್ಕಳಿಗೆ ಪ್ರಾಥಮಿಕದಿಂದಲೂ ನಮ್ಮ ಸನಾತನ ಸಂಸ್ಕೃತಿಯ ವೈಶಿಷ್ಟ್ಯಗಳನ್ನು ಪಠ್ಯಕ್ರಮದಲ್ಲಿ ಅಳವಡಿಸಬೇಕು. ಎಲ್ಲಕ್ಕಿಂತ ಮಿಗಿಲಾಗಿ ಮಕ್ಕಳಿಗೆ ಬದುಕುವ ನೀತಿಪಾಠ ಬೋಧಿಸಬೇಕು.
ಇದೆಲ್ಲವೂ ನಿಸ್ವಾರ್ಥದಿಂದ ಜಾರಿಯಾದರೆ, ಕೆಳ ಹಾಗೂ ಮಧ್ಯಮ ವರ್ಗದ ಜನತೆಯ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ನಂತರದಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಸಹಜವಾಗಿಯೇ ಉತ್ತಮ ಸ್ಥಿತಿಯತ್ತ ದಾಪುಗಾಲು ಹಾಕುತ್ತದೆ.
ಯಾವುದೇ ರಾಜಕೀಯ ಪಕ್ಷದ ಸರ್ಕಾರಗಳು ಅಧಿಕಾರಕ್ಕೆ ಬಂದರೂ ಅದರ ಭಾಗವಾದ ಶಾಸಕರನೇಕರೇ ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳ ಮಾಲಿಕರು ಎಂಬ *ಬೆತ್ತಲೆ ಸತ್ಯಕ್ಕೆ* ಮೇಲ್ಕಾಣಿಸಿದ ಅಂಶಗಳನ್ನು ಸರ್ಕಾರಗಳು ಯಥಾವತ್ತಾಗಿ ಜಾರಿಗೊಳಿಸಲಾಗುವುದೆಂದು ನಂಬುವುದನ್ನು *ಸುಳ್ಳಿನ ಸೆರಗು* ಎಂಬ ವೈಯಕ್ತಿಕ ಅಭಿಪ್ರಾಯದೊಂದಿಗೆ. ಇಂತಿ ಜಿ.ಎನ್.ಪ್ರದೀಪ್
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ

