ಬೆಂಗಳೂರು: ಬೆಂಗಳೂರಿನ ಡಿ.ಜೆ.ಹಳ್ಳಿ ಮತ್ತು ಕೆ.ಜಿ. ಹಳ್ಳಿ ಗಲಭೆ ಪ್ರಕರಣದ ಆರೋಪಿ ಹಾಗೂ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ ರನ್ನು ಕೊನೆಗೂ ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ 22 ದಿನಗಳಿಂದ ತಲೆ ಮರೆಸಿಕೊಂಡಿದ್ದ ಸಂಪತ್ ರಾಜ್ ಬಂಧನಕ್ಕಾಗಿ ಸಿಸಿಬಿ ಅಧಿಕಾರಿಗಳು ಐದು ತಂಡಗಳನ್ನು ರಚಿಸಿದ್ದು, ಬೆಂಗಳೂರು ಸೇರಿದಂತೆ ಹೊರ ರಾಜ್ಯಗಳಲ್ಲೂ ಕೂಡಾ ಸಂಪತ್ ರಾಜ್ ಗಾಗಿ ಶೋಧ ನಡೆಸಲಾಗುತ್ತಿತ್ತು.
ಮಂಗಳವಾರವಷ್ಟೇ ಸಂಪತ್ ರಾಜ್ ಆಪ್ತ ರಿಯಾಜುದ್ದೀನ್ ರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಆಪ್ತನು ನೀಡಿರುವ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರ ಬಲೆಗೆ ಸಂಪತ್ ರಾಜ್ ಬಿದ್ದಿದ್ದು, ಅಂತಿಮವಾಗಿ ಅವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಹೈಕೋರ್ಟ್ ಕೆಂಡಾಮಂಡಲ: ಡಿ.ಜೆ.ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮೇಯರ್ ಸಂಪತ್ ರಾಜ್ ರನ್ನು ಬಂಧಿಸದ ಪೊಲೀಸರ ಕಾರ್ಯ ವೈಖರಿ ಬಗ್ಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು. ಒಬ್ಬ ಮಾಜಿ ಮೇಯರ್ ನ್ನು ಬಂಧಿಸಲು ಸಾಧ್ಯವಾಗಲಿಲ್ಲವೇ ಎಂದು ಹೈಕೋರ್ಟ್ ಚಾಟಿ ಬೀಸಿದ ಹಿನ್ನೆಲೆಯಲ್ಲಿ ಇದೀಗ ಸಿಸಿಬಿ ಪ್ರತ್ಯೇಕ ತಂಡಗಳನ್ನು ರಚಿಸಿದ್ದು, ಸಂಪತ್ ರಾಜ್‌ಗಾಗಿ ಹುಡುಕಾಟ ನಡೆಸಿತ್ತು.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ

