ಬೆಂಗಳೂರು: ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಎದ್ದಿದ್ದ ಕೂಗಿಗೆ ಸಿಎಂ ಯಡಿಯೂರಪ್ಪ ಅಸ್ತು ಎಂದ ಆದೇಶಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಇದರ ಬೆನ್ನಲ್ಲೆ ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪನೆಯ ಕೂಗು ವ್ಯಾಪಕವಾಗಿ ಕೇಳಿಬಂದಿದೆ.
ಇಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಿಎಂ ಯಡಿಯೂರಪ್ಪ ಪತ್ರ ಬರೆದು, ರಾಜ್ಯದಲ್ಲಿ ವೀರಶೈವ-ಲಿಂಗಾಯತ ಸಮಾಜದ ಜನಾಂಗದವರು ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಇವರಲ್ಲಿ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದವರಿದ್ದಾರೆ, ಈ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಕರ್ನಾಟಕ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವುದು ಅಗತ್ಯವಿರುವುದರಿಂದ ತಕ್ಷಣದಿಂದ ಜಾರಿಗೆ ಬರುವಂತೆ ಈ ನಿಗಮವನ್ನು ಸ್ಥಾಪನೆ ಮಾಡಲು ಆದೇಶಿಸಿದೆ ಎಂದು ಪತ್ರ ಬರೆದಿದ್ದರು.
ಈ ಆದೇಶ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಕೆಲವರು ಪರ ಮತ್ತೆ ಕೆಲವರು ವಿರೋಧ ವ್ಯಕ್ತಪಡಿಸಿ ಚರ್ಚೆಗೆ ಕಾರಣವಾಗಿದೆ. ಇದರ ನಡುವೆ ಯಲಹಂಕ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ನಮ್ಮ ವಿರೋಧವಿಲ್ಲ. ಆದರೆ ಇದೇ ರೀತಿ ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಒಂದೆಡೆ ಮರಾಠ ನಿಗಮ ಸ್ಥಾಪನೆ ಕುರಿತಂತೆ ಕನ್ನಡ ಪರ ಸಂಘನೆಗಳ ಪ್ರತಿಭಟನೆ, ಆಕ್ರೋಶದ ನಡುವೆ ಘೋಷಿಸಲಾದ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆಕ್ರೋಶ, ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಪಟ್ಟು ಸಿಎಂ ಯಡಿಯೂರಪ್ಪರನ್ನು ಇಕ್ಕಟ್ಟಿಗೆ ತಂದಿದೆ.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ

