ನವದೆಹಲಿ: ಕೇಂದ್ರ ಸರ್ಕಾರದ ಮಾತುಕತೆಯ ಪ್ರಸ್ತಾಪವನ್ನು ತಿರಸ್ಕರಿಸಿರುವ ರೈತ ಸಂಘಟನೆಗಳು, ಬೇಡಿಕೆ ಈಡೇರಿಕೆಗೆ ಆಗ್ರಹಿಸಿವೆ.
ಸರ್ಕಾರವು ರೈತರ ಬೇಡಿಕೆಗಳನ್ನು ಪರಿಹರಿಸುವ ವಿಷಯದಲ್ಲಿ ಗಂಭೀರವಾಗಿದ್ದರೆ, ರೈತರಿಗೆ ಯಾವುದೇ ಷರತ್ತುಗಳನ್ನು ಹಾಕುವುದನ್ನು ನಿಲ್ಲಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿರುವ ಮುಖಂಡರು ನೀವು ಬುರಾರಿ ಮೈದಾನಕ್ಕೆ ‘ರಚನಾತ್ಮಕ ರೀತಿಯಲ್ಲಿ’ ಹೋಗುವುದಾದರೆ ನಾವು ಮರುದಿನ ಮಾತುಕತೆ ಪ್ರಾರಂಭಿಸುತ್ತೇವೆ.
ಮಾತುಕತೆಯು ಕಾಯಿದೆಗಳ ಪ್ರಯೋಜನಗಳ ಬಗ್ಗೆ ರೈತರಿಗೆ ವಿವರಣೆ ಮತ್ತು ಅದು ನೀಡುತ್ತಿರುವ ಪರಿಹಾರದ ಪ್ರಸ್ತಾವನೆಯನ್ನು ಹೊಂದಿರಬೇಕು ಎಂದು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ (ಎಐಕೆಎಸ್ ಸಿಸಿ) ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
3 ರೈತ ವಿರೋಧಿ, ಜನ ವಿರೋಧಿ ಕಾನೂನುಗಳನ್ನು ರದ್ದುಪಡಿಸಬೇಕು ಮತ್ತು ವಿದ್ಯುತ್ ಮಸೂದೆ 2020 ಅನ್ನು ಹಿಂಪಡೆಯಬೇಕೆಂದು ರೈತರು ಒತ್ತಾಯಿಸಿದ್ದಾರೆ. ಈ ಪ್ರತಿಭಟನೆಯನ್ನು ತೀವ್ರಗೊಳಿಸಲು ದೆಹಲಿಗೆ ರೈತರು ಬರಬೇಕು ಎಂದು ಎಐಕೆಎಸ್ ಸಿಸಿ ಎಲ್ಲಾ ರೈತ ಸಂಘಟನೆಗಳಿಗೆ ಕರೆ ನೀಡಿದೆ.
2020 ರ ಡಿಸೆಂಬರ್ 1 ರಿಂದ ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಿದ್ದು, ರಾಜ್ಯಮಟ್ಟದಲ್ಲಿಯೂ ಪ್ರತಿಭಟನೆಗೆ ಕರೆ ನೀಡಲಾಗಿದೆ.
ಷರತ್ತು ಬದ್ಧ ಮಾತುಕತೆಗೆ ನಮ್ಮ ಸಮ್ಮತಿ ಇಲ್ಲ ಎಂದು ಸುಮಾರು 30 ರೈತ ಸಂಘಟನೆಗಳ ಜಂಟಿ ಕ್ರಿಯಾ ವೇದಿಕೆ ಕೇಂದ್ರ ಸರಕಾರದ ಪ್ರಸ್ತಾವವನ್ನು ತಿರಸ್ಕಾರ ಮಾಡಿವೆ.
ಈ ಮಧ್ಯೆ ದೇಶಾದ್ಯಂತ ನಾನಾ ಭಾಗಗಳಿಂದ ರೈತರು ದಿಲ್ಲಿ ಚಲೋ ಅಂಗವಾಗಿ ರಾಜಧಾನಿಯತ್ತ ಬರುತ್ತಿದ್ದು ದಿಲ್ಲಿ ಗಡಿಗುಂಟ ನೆಲೆ ನಿಂತಿದ್ದಾರೆ.
ಕ್ಷಣ ಕ್ಷಣದ ತಾಜಾ ಸುದ್ದಿ, ಮಾಹಿತಿಗಾಗಿ ನಮ್ಮ Facebook Twitter ಅನುಸರಿಸಿ.

