ಬೆಂಗಳೂರು: ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಹೊರವಲಯದಲ್ಲಿ ರೈತರು ನಡೆಸುತ್ತಿರುವ ಹೋರಾಟ 5ನೇ ದಿನ ತಲುಪಿದೆ. ರೈತರ ಹಿತಕ್ಕಾಗಿ ಕಾಯ್ದೆ ತಂದಿರುವುದಾಗಿ ಹೇಳಿರುವ ಕೇಂದ್ರ ಕೂಡಲೇ ಪ್ರತಿಭಟನಾಕಾರರೊಂದಿಗೆ ಮಾತನಾಡಿ ಅವರ ಅನುಮಾನಗಳನ್ನು ನಿವಾರಿಸುವ ಪ್ರಯತ್ನ ಮಾಡುವುದು ಸೂಕ್ತ. ಇಲ್ಲವಾದರೆ, ರೈತರು, ಜನರ ಅನುಮಾನಗಳು ಬೆಳೆಯುತ್ತಾ ಹೋಗುತ್ತದೆ ಎಂದು ಮಾಜಿಮುಖ್ಯಮಂತ್ರಿ ಕುಮಾರಸ್ವಾಮಿ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಟ್ವಿಟ್ ಮೂಲಕ ರೈತರ ಹೋರಾಟದ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ರೈತರ ಸಮಸ್ಯೆ ಆಲಿಸಬೇಕಿದ್ದರೆ ಬುರಾಡಿ ಉದ್ಯಾನಕ್ಕೆ ಬರಬೇಕು ಎಂದು ಕೇಂದ್ರ ರೈತರಲ್ಲಿ ಮನವಿ ಮಾಡಿದೆ. ಇದನ್ನು ರೈತರು ಒಪ್ಪಿಲ್ಲ. ಇದು ತಮಗೆ ಒಡ್ಡಿರುವ ಷರತ್ತು ಎಂದು ರೈತರು ಭಾವಿಸಿದ್ದಾರೆ. ಅದ್ದರಿಂದ ಈ ಷರತ್ತು ಹಿಂದಕ್ಕೆ ಪಡೆಯುವುದೇ ಸೂಕ್ತ.
ರೈತರು ಇರುವಲ್ಲಿಯೇ, ಅವರು ಇಚ್ಛಿಸಿದಲ್ಲಿಯೇ ಸಮಸ್ಯೆಗಳನ್ನು ಆಲಿಸಿ ಎಂಬುದು ನನ್ನ ಸಲಹೆ.
5 ದಿನಗಳಿಂದ ರೈತರು ಸಿಂಗು ಗಡಿಯಲ್ಲೇ ಧರಣಿ ಕುಳಿತಿದ್ದಾರೆ. ಇದು ಚಳಿಗಾಲ. ದೆಹಲಿ ಚಳಿ ಯಾರಿಗಾದರೂ ಮೈ ನಡುಗಿಸುತ್ತದೆ. ಕೋವಿಡ್ ಕಾಲದಲ್ಲಿ ರೈತರನ್ನು ಹಾಗೆ ಅಲ್ಲಿ ಬಿಡುವುದು ಆರೋಗ್ಯದ ದೃಷ್ಟಿಯಿಂದ ಸೂಕ್ತವಲ್ಲ. ಅಲ್ಲಿರುವ ಯಾರಿಗಾದರೂ ಅಪಾಯವಾದರೆ ಅದು ಕೇಂದ್ರ ಸರ್ಕಾರದ ಬಾಧ್ಯತೆಯಾಗುತ್ತದೆ. ಹೀಗಾಗಿ ಕೂಡಲೇ ಮನವಿ ಆಲಿಸುವುದು ಸಮಂಜಸ ಎಂದಿದ್ದಾರೆ.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಟ್ವಿಟರ್ ನಲ್ಲಿ ಫಾಲೋ ಮಾಡುವ ಮೂಲಕ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ.

