ದೊಡ್ಡಬಳ್ಳಾಪುರ: ಬಿಜೆಪಿ ಸರ್ಕಾರವನ್ನು ವಿರೋಧಿಸುವ ಪಕ್ಷಗಳು ಹಾಗೂ ದಲ್ಲಾಳಿಗಳು ಕೃಷಿ ಮಸೂದೆ ವಿರೋಧಿಸಿ ರೈತರ ಹೆಸರಿನಲ್ಲಿ ಧರಣಿ, ಬಂದ್ ನಡೆಸುತ್ತಿದ್ದಾರೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಮಾದ್ಯಮ ವಕ್ತಾರೆ ಪುಷ್ಪಾ ಶಿವಶಂಕರ್ ಆರೋಪಿಸಿದ್ದಾರೆ.
ನಗರದ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಮೂರು ಕೃಷಿ ಮಸೂದೆ ವಿರೋಧಿಸಿ ಬಂದ್, ಪ್ರತಿಭಟನೆ ನಡೆಸಲಾಗುತ್ತಿದೆ. ಆದರೆ ರೈತರ ಹಿತ ಕಾಪಾಡಲು ಕೇಂದ್ರ ಸರ್ಕಾರ ಕೃಷಿಕರ ಹಾಗೂ ಕೃಷಿ ಕ್ಷೇತ್ರದ ಸುಧಾರಣೆಗೆ ಸ್ವಾತಂತ್ರ್ಯಾನಂತರ ಇಷ್ಟೊಂದು ದೊಡ್ಡ ನಿರ್ಣಯ ಮಾಡಲಾಗಿದೆ ಎಂದರು.
ಪ್ರಧಾನಮಂತ್ರಿ ಫಸಲ್ ಭಿಮಾ, ಕಿಸಾನ್ ಸಮ್ಮಾನ್ ನಿಧಿ ಸೇರಿ ಅನೇಕ ರೈತಪರ ಯೋಜನೆ ಜಾರಿ ಮಾಡಲಾಗಿದ್ದು, ರೈತರ ಆದಾಯ ದ್ವಿಗುಣ ಮಾಡಬೇಕೆಂಬ ಕಲ್ಪನೆ ನರೇಂದ್ರ ಮೋದಿ ಅವರ ಸರ್ಕಾರದ್ದಾಗಿದೆ. ಕೇಂದ್ರದ ಕೃಷಿ ಮಸೂದೆ ವಿರೋಧಿಸಿ ರಾಜಕೀಯ ಪ್ರೇರಿತ ಹೋರಾಟ ನಡೆಸಲಾಗುತ್ತಿದೆ ಎಂದರು.
ಜಿಲ್ಲಾ ಅಧ್ಯಕ್ಷ ಎ.ವಿ.ನಾರಾಯಣಸ್ವಾಮಿ ಮಾತನಾಡಿ, ಕೇಂದ್ರ ಸರ್ಕಾರ ತಂದಿರುವ ಕೃಷಿ ಮಸೂದೆಗಳನ್ನೇ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಸೇರಿಸಿತ್ತು. ರೈತರ ಕಲ್ಯಾಣಕ್ಕಾಗಿ ಬಿಜೆಪಿ ಸರ್ಕಾರ ದೃಢ ಹೆಜ್ಜೆ ಇಟ್ಟಿದೆ.ಆದರೆ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಎದುರಿಸಲಾಗದೆ ರೈತರ ಹೆಸರಿನಲ್ಲಿ ವಿರೋಧ ಪಕ್ಷಗಳು, ದಲ್ಲಾಳಿಗಳು ವಿವಿಧ ಸಂಘಟನೆಗಳನ್ನು ಬಳಸಿ ರೈತರನ್ನು ಪ್ರಚೋದಿಸುವ ಕೆಲಸ ಮಾಡುತ್ತಿವೆ ಎಂದರು.
ಬಿಜೆಪಿ ರೈತ ಮೋರ್ಚಾ ತಾಲೂಕು ಅಧ್ಯಕ್ಷ ಕೋಡಿ ಆರ್.ಎಂ.ನರಸಿಂಹಮೂರ್ತಿ ಮಾತನಾಡಿ, ರೈತ ಪರ ಕಾಯ್ದೆ ವಿರುದ್ದ ರೈತರ ವಿರೋಧವಿಲ್ಲ, ರೈತರ ಹೆಸರಲ್ಲಿ ರಾಜಕೀಯ ಮಾಡಲು ಈ ಶಡ್ಯಂತ್ರವನ್ನು ವಿರೋಧ ಪಕ್ಷಗಳು ರೂಪಿಸಿವೆ ಎಂದರು.
ನಗರ ಘಟಕದ ಅಧ್ಯಕ್ಷ ಎಚ್.ಎಸ್.ಶಿವಶಂಕರ್ ಮಾತನಾಡಿ, ದೊಡ್ಡಬಳ್ಳಾಪುರದಲ್ಲಿ ಇಂದು ನಡೆಯುತ್ತಿರುವ ಪ್ರತಿಭಟನೆಯಲ್ಲಿ ಬಿಜೆಪಿ ವಿರೋಧಿಸುವವರೆ ಹೆಚ್ಚಾಗಿದ್ದಾರೆಯೇ ಹೊರತು ರೈತರಿಲ್ಲ. ರೈತ ಸಂಘದವರಿಗೆ ತಪ್ಪು ಮಾಹಿತಿ ನೀಡಿ ಪ್ರತಿಭಟನೆಗೆ ಕರೆತರಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರುಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋವಿಂದರಾಜು, ತಾಲೂಕು ಮಂಡಲ ಅಧ್ಯಕ್ಷ ನಾಗರಾಜು, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್ ಗೌಡ, ರಾಜ್ಯ ಸಾಮಾಜಿಕ ಜಾಲತಾಣ ಪ್ರಮುಖ ಶಿವಾನಂದರೆಡ್ಡಿ, ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಬಿ.ಸಿ.ನಾರಾಯಣಸ್ವಾಮಿ, ಜಿಲ್ಲಾ ಮಾದ್ಯಮ ಪ್ರಮುಖ ರಮೇಶ್, ನಗರ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಮುನಿರಾಜು ಮತ್ತಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ / ಜಾಹಿರಾತಿಗಾಗಿ 7019780535 ಸಂಖ್ಯೆಗೆ ಸಂಪರ್ಕಿಸಿ

