ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಭೂ ಸುಧಾರಣ ತಿದ್ದುಪಡಿ ಕಾಯ್ದೆ, ಎಪಿಎಂಸಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಆಗ್ರಹಿಸಿ ಬೆಂಗಳೂರಿನಲ್ಲಿ ಬುಧವಾರ ನಡೆಯುತ್ತಿರುವ ಬಾರುಕೋಲು ಚಳುವಳಿಯಲ್ಲಿ ಭಾಗವಹಿಸಲು ತಾಲ್ಲೂಕಿನಿಂದ ತೆರಳುತ್ತಿದ್ದ ರೈತರನ್ನು ತಡೆದಿದ್ದ ಪೊಲೀಸರು, ಕಡಿಮೆ ಸಂಖ್ಯೆಯಲ್ಲಿ ಬೆಂಗಳೂರಿಗೆ ತೆರಳಲು ಪೊಲೀಸರು ಅವಕಾಶ ನೀಡಿದ ವಿಷಯ ತಡವಾಗಿ ವರದಿಯಾಗಿದೆ.
ಈ ಕುರಿತು ಮಾತನಾಡಿದ ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಪ್ರಸನ್ನ, ತಾಲ್ಲೂಕು ಅಧ್ಯಕ್ಷ ಹನುಮೇಗೌಡ, ಮುಖಂಡರಾದ ಸತೀಶ್,ಉಮಾದೇವಿ, ಶಿರವಾರರವಿ, ಕೋವಿಡ್ ನಿಂದಾಗಿ ಲಾಕ್ಡೌನ್ ಆದಾಗ ರೈತರ ನೆರವಿಗೆ ಬಾರದ ಸರ್ಕಾರ ಈಗ ರೈತರ ವಿರುದ್ದ ಸುಗ್ರೀವಾಜ್ಞೆ ಮೂಲಕ ಕಾಯ್ದೆಗಳನ್ನು ಜಾರಿಗೆ ತಂದಿದೆ. ಪ್ರಜಾಪ್ರಭುತ್ವ ವಿರೋಧಿ ಮಾರ್ಗದ ಮೂಲಕ ಕಾನೂನುಗಳನ್ನು ಜಾರಿಗೆ ತರುವ ಜನವಿರೋಧಿ ಆಡಳಿತವಾಗಿದೆ. ಇಡೀ ದೇಶದಲ್ಲಿ ಇವತ್ತು ಬಿಜೆಪಿ ಆಡಳಿತದ ವಿರುದ್ದ ರೈತರು ತಿರುಗಿಬಿದ್ದಿದ್ದಾರೆ. ಇನ್ನಾದರು ರೈತ ಪರವಾದ ಕಾಯ್ದೆಗಳನ್ನು ಜಾರಿಗೆ ತರಬೇಕು. ಇಲ್ಲದಿದ್ದರೆ ಬಾರುಕೋಲಿನ ಮೂಲಕ ಬಡಿದೆಚ್ಚರಿಸಲಾಗುವುದು ಎಂದರು.
ರೈತರದ್ದು ಸದಾ ಶಾಂತಿಯುತ, ಗಾಂಧೀಜಿ ಮಾರ್ಗದ ಹೋರಾಟ. ಇದಕ್ಕೆ ಅಡ್ಡಿಪಡಿಸುವ ಹಕ್ಕು ಯಾರಿಗೂ ಇಲ್ಲ. ನಮ್ಮ ಬೇಡಿಕೆ ಈಡೇರುವವರೆಗೂ ಹೋರಾಟ ನಿಲ್ಲಿಸುವ ಮಾತೇ ಇಲ್ಲ ಎಂದರು.
ಬೆಂಗಳೂರಿನಲ್ಲಿ ನಡೆಯುತ್ತಿರುವ ಬಾರುಕೋಲು ಹೋರಾಟಕ್ಕೆ ತಾಲ್ಲೂಕಿನಿಂದಲು ಚಾಟಿಗಳೊಂದಿಗೆ ಭಾಗವಹಿಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

