ದೊಡ್ಡಬಳ್ಳಾಪುರ: ರೈತ ವಿರೋಧಿ ನೀತಿಗಳನ್ನು ಕೈ ಬಿಡುವಂತೆ ಒತ್ತಾಯಿಸಿ ದೇಶಾದ್ಯಂತ ರೈತಪರ ಸಂಘಟನೆಗಳು ಹೋರಾಟ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಹಠಕ್ಕೆ ನಿಂತಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರೈತರ ಒತ್ತಾಯಗಳಿಗೆ ಸ್ಪಂದಿಸುವ ಮೂಲಕ ರೈತ ವಿರೋಧಿ ಮಸೂದೆಗಳನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಿಗರ ಬಣ) ಕಾರ್ಯಕರ್ತರು ನಗರದ ಕೇಂದ್ರ ಅಂಚೆ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಕರವೇ ಕನ್ನಡಿಗರ ಬಣದ ಸಂಸ್ಥಾಪಕ ಅಧ್ಯಕ್ಷ ಬಿ.ಎಸ್.ಚಂದ್ರಶೇಖರ್, ರೈತ ವಿರೋಧಿ ನೀತಿಗಳನ್ನು ಕೇಂದ್ರ ಸರ್ಕಾರ ರೈತ ಪರವಾಗಿವೆ ಎಂದು ಸಮರ್ಥಿಸಿಕೊಳ್ಳುವ ಹಾದಿಯತ್ತ ಸಾಗುತ್ತಿವೆ. ರೈತರ ಹೋರಾಟಕ್ಕೆ ಕನಿಷ್ಠ ಸ್ಪಂದನೆಯನ್ನು ನೀಡಲು ಮುಂದಾಗಿಲ್ಲ. ಕಾರ್ಪೊರೇಟ್ ಕಂಪನಿಗಳ ಪರವಾಗಿ ಜಾರಿಗೆ ತಂದಿರುವ ಕಾಯ್ದೆಗಳು ರೈತರನ್ನು ಈಸ್ಟ್ ಇಂಡಿಯಾ ಕಂಪನಿಗಳಂತೆ ಹೊಸ ಹೆಸರಿನಲ್ಲಿನ ಕಂಪನಿಗಳಿಗೆ ಒತ್ತೆ ಆಳುಗಳಾಗಿ ದುಡಿಯುವಂತೆ ಮಾಡುವ ಹುನ್ನಾರಗಳು ನಡೆಯುತ್ತಿವೆ. ರೈತ ವಿರೋ ಮಸೂದೆಗಳನ್ನು ಒಂದು ವಾರದೊಳಗೆ ಕೇಂದ್ರ ಸರ್ಕಾರ ಹಿಂದಕ್ಕೆ ಪಡೆಯಬೇಕು. ಇಲ್ಲವಾದಲ್ಲಿ ಕರವೇ ಕನ್ನಡಿಗರ ಬಣ ರಾಜ್ಯಾಧ್ಯಂತ ಕೇಂದ್ರ ಸರ್ಕಾರ ಸ್ವಾಮ್ಯದ ಕೇಂದ್ರ ಅಂಚೆ ಕಚೇರಿಗಳಿಗೆ ಬೀಗ ಜಡಿಯುವ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ ಎಂದರು.
ಪ್ರತಿಭಟನೆಯಲ್ಲಿ ಸಂಘದ ರಾಜ್ಯ ಕಾರ್ಯದರ್ಶಿ ರಮೇಶ್, ಜಿಲ್ಲಾ ಘಟಕದ ಅಧ್ಯಕ್ಷ ಹರ್ಷ, ಕಾರ್ಮಿಕ ಘಟಕದ ಅಧ್ಯಕ್ಷ ಅಪ್ಪಣ್ಣ,ಮುಖಂಡರಾದ ಶಿವಶಂಕರಪ್ಪ, ಪ್ರದೀಪ್, ಜಯರಾಂ, ಲಕ್ಷ್ಮಿಕಾಂತ್, ಗೋಪಾಲ್,ಶಶಿಕುಮಾರ್ ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

