ದೊಡ್ಡಬಳ್ಳಾಪುರ: ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡುವಂತೆ ಒತ್ತಾಯಿಸಿ ರಾಜ್ಯದ ಎಲ್ಲಾ ಸಾರಿಗೆ ನೌಕರರು ಬೆಂಗಳೂರಿನಲ್ಲಿ ನಡೆಯುತ್ತಿರುವ ಧರಣಿಗೆ ಬೆಂಬಲ ನೀಡಿರುವುದರಿಂದ ತಾಲೂಕಿನಲ್ಲಿ ಸಾರಿಗೆ ಬಸ್ ಗಳು ರಸ್ತೆಗಿಳಿದಿಲ್ಲ.
ಸಾರಿಗೆ ನೌಕರರನ್ನು ಸರಕಾರಿ ನೌಕರರು ಎಂದು ಪರಿಗಣಿಸುವುದರ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗುರುವಾರ ಸಾವಿರಾರು ಸಂಖ್ಯೆಯಲ್ಲಿ ನೌಕರರು ವಿಧಾನಸೌಧ ಮುತ್ತಿಗೆಗೆ ಯತ್ನಿಸಿದರು. ಆದರೆ ಅವರನ್ನು ಅರ್ಧದಲ್ಲೇ ತಡೆದ ಪೊಲೀಸರು ಹಲವರನ್ನು ವಶಕ್ಕೆ ಪಡೆ ದರು. ಧರಣಿ ನಿರತ ನೌಕರರ ಬಂಧನ ಖಂಡಿಸಿ ಶುಕ್ರವಾರ ಕೂಡ ಎಲ್ಲ ನಿಗಮಗಳ ಬಂದ್‌ಗೆ ಕರೆ ನೀಡಲಾಗಿದೆ ಎಂದು ಸಾರಿಗೆ ನೌಕರರ ಸಂಘದ ಮುಖಂಡ ಆನಂದ್ ತಿಳಿಸಿದ್ದರು ಈ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಸಾರಿಗೆ ಬಸ್ ಗಳು ರಸ್ತೆಗೆ ಇಳಿದಿಲ್ಲ.
ರಸ್ತೆಗಿಳಿಯದ ಬಸ್ ಗಳಿಂದಾಗಿ ಸಾರ್ವಜನಿಕರಿಗೆ ಅನಾನುಕೂಲವಾಗಿದ್ದು, ವಿವಿಧ ಪ್ರದೇಶಕ್ಕೆ ತೆರಳಲು ಬಸ್ ನಿಲ್ದಾಣಕ್ಕೆ ಬಂದಿರುವ ಪ್ರಯಾಣಿಕರು ಏಕಾಏಕಿ ಬಸ್ ನಿಲ್ಲಿಸಿರುವ ಸಿಬ್ಬಂದಿಗಳಿಗೆ ಹಿಡಿ ಶಾಪಹಾಕುತ್ತಿದ್ದಾರೆ.
ಕೋವಿಡ್-19 ಲಾಕ್ ಡೌನ್ ನಂತರ ತಾಲೂಕಿನಲ್ಲಿ ಹಂತ ಹಂತವಾಗಿ ಸಾರಿಗೆ ವ್ಯವಸ್ಥೆಯನ್ನು ಆರಂಭಿಸಲಾಗುತ್ತಿದ್ದು 94 ರೂಟ್ ಗಳಲ್ಲಿ 80 ರೂಟ್ ಆರಂಭಿಸಲಾಗಿತ್ತು. ಇಂದು ಬೆಳಗ್ಗೆ ಬೆಂಗಳೂರಿಗೆ ನಾಲ್ಕು ಬಸ್ ಗಳನ್ನು ಆಪರೇಟ್ ಮಾಡಲಾಗಿದ್ದು, ಉಳಿದ ಯಾವುದೇ ಚಾಲಕ, ನಿರ್ವಾಹಕರು ಕರ್ತವ್ಯಕ್ಕೆ ಹಾಜರಾಗಿಲ್ಲ, ಅವರಿಗೆ ಕರೆಮಾಡಿ ಕರೆಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಡಿಪೋ ವ್ಯವಸ್ಥಾಪಕ ಆನಂದ್ ಹರಿತಲೇಖನಿಗೆ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

