ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಹೂಡಿಕೆಗೆ ತೈವಾನ್ ಕಂಪನಿಗಳು ಒಲವು ತೋರಿಸಿವೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹಾಗೂ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ತೈಪೈ ಆರ್ಥಿಕ ಹಾಗೂ ಸಾಂಸ್ಕೃತಿಕ ಕೇಂದ್ರದ ಡೈರೆಕ್ಟರ್ ಜನರಲ್ ಬೆನ್ ವಾಂಗ್ ನೇತೃತ್ವದ ನಿಯೋಗ ಇಂದು ಭೇಟಿ ಮತ್ತು ಸುಧೀರ್ಘ ಚರ್ಚೆಯನ್ನು ನಡೆಸಿತು.
ಈ ನಿಯೋಗವನ್ನು ಭೇಟಿ ಮಾಡಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ತೈವಾನ್ ಹಾಗೂ ಭಾರತ ದೇಶದ ನಡುವೆ ಆರ್ಥಿಕ ಹಾಗೂ ಸಾಂಸ್ಕೃತಿ ವಿನಿಮಯದ ಇತಿಹಾಸವಿದೆ. ಕರ್ನಾಟಕ ರಾಜ್ಯದತ್ತ ತೈವಾನ್ ಕಂಪನಿಗಳ ಒಲವು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುವುದರ ಮೂಲಕ ತೈವಾನ್ ಕಂಪನಿಗಳ ಪ್ರಮುಖ ಆದ್ಯತೆಯ ರಾಜ್ಯವಾಗಿರುವುದು ಬಹಳ ಸಂತಸದ ವಿಷಯವಾಗಿದೆ. ತೈವಾನ್ ಕಂಪನಿಗಳೊ೦ದಿಗೆ ಮಾತುಕತೆಗಳನ್ನು ಸುಗಮಗೊಳಿಸಿ, ನಮ್ಮ ರಾಜ್ಯ ಸರಕಾರ ಅಂತಹ ಮಾತುಕತೆಗಳು ಹಾಗೂ ಬಂಡವಾಳ ಹೂಡಿಕೆಗೆ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರಗಳನ್ನು ನೀಡಲು ಸಿದ್ದವಿದೆ ಎಂದು ಭರವಸೆಯನ್ನು ನೀಡಿದರು.
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್ ಅವರು ಮಾತನಾಡಿ, ತೈವಾನ್ ಹಾಗೂ ಭಾರತ ದೇಶಗಳು ಇತ್ತೀಚಿನ ದಿನಗಳಲ್ಲಿ ಪ್ರಮುಖ ಪಾಲುದಾರರಾಗಿ ಹೊರಹೊಮ್ಮಿವೆ. ರಾಜ್ಯದಲ್ಲಿ ಈಗಾಗಲೇ ವಿಸ್ಟ್ರನ್, ಎಫ್ಎಫ್ಜಿ ಮತ್ತು ಸಿಡಿಸಿ ಯಂತಹ ತೈವಾನ್ ಕಂಪನಿಗಳು ರಾಜ್ಯದಲ್ಲಿ ಕಾರ್ಯಾರಂಭ ಮಾಡಿವೆ. ರಾಜ್ಯದ ಆರ್ಥಿಕತೆಯ ಬೆಳವಣಿಗೆಗೆ ತಮ್ಮ ಕೊಡುಗೆಯನ್ನು ನೀಡುತ್ತಿವೆ. ಇದು ತೈವಾನ್ ಹಾಗೂ ಕರ್ನಾಟಕ ರಾಜ್ಯದ ನಡುವಿನ ಬಾಂದವ್ಯವನ್ನು ಉತ್ತಮಗೊಳಿಸಿವೆ. ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಅತ್ಯತ್ತಮ ವಾತಾವರಣವಿದೆ. ಕೈಗಾರಿಕಾ ಸ್ನೇಹಿ ಕಾಯ್ದೆಗಳು ಹಾಗೂ ನೀತಿಗಳ ಅನುಷ್ಠಾನ ಆಗುತ್ತಿದ್ದು ಸುಲಭವಾಗಿ ಕೈಗಾರಿಕೆಗಳನ್ನು ಸ್ಥಾಪಿಸಬಹುದಾಗಿದೆ. ಈ ಹಿನ್ನಲೆಯಲ್ಲಿ ತೈವಾನ್ ಕಂಪನಿಗಳು ಬಂಡವಾಳ ಹೂಡಿಕೆಗೆ ಮಧ್ಯಸ್ತಿಕೆ ವಹಿಸುವಂತೆ ನಿಯೋಗಕ್ಕೆ ತಿಳಿಸಿದರು. ಕರ್ನಾಟಕ ರಾಜ್ಯ ಬಂಡವಾಳ ಹೂಡಿಕೆಗೆ ಎಲ್ಲಾ ರೀತಿಯ ಸಹಕಾರಗಳನ್ನು ನೀಡಲಿದೆ ಎಂದು ಭರವಸೆ ನೀಡಿದರು.
ತೈಪೈ ಆರ್ಥಿಕ ಹಾಗೂ ಸಾಂಸ್ಕೃತಿಕ ಕೇಂದ್ರದ ಡೈರೆಕ್ಟರ್ ಜನರಲ್ ಬೆನ್ ವಾಂಗ್ ಮಾತನಾಡಿ, ರಾಜ್ಯದಲ್ಲಿ ಹೂಡಿಕೆಗೆ ಇರುವ ಅವಕಾಶಗಳನ್ನು ತಿಳಿದುಕೊಳ್ಳಲು ತೈವಾನ್ ಕಂಪನಿಗಳು ಆಸಕ್ತಿಯನ್ನು ವ್ಯಕ್ತಪಡಿಸಿವೆ ಎಂದು ಹೇಳಿದರು.
ನಂತರ ಈ ನಿಯೋಗ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಕೈಗಾರಿಕಾಭಿವೃದ್ದಿ ಆಯುಕ್ತೆ ಶ್ರೀಮತಿ ಗುಂಜನ್ ಕೃಷ್ಣ ಅವರ ನೇತೃತ್ವದ ಅಧಿಕಾರಿಗಳು ಹಾಗೂ ರಾಜ್ಯದಲ್ಲಿ ಹೂಡಿಕೆ ಮಾಡಿರುವ ಪ್ರಮುಖ ಕಂಪನಿಗಳ ಪ್ರತಿನಿಧಿಗಳೊಂದಿಗೆ ಸಭೆಯನ್ನು ನಡೆಸಿದರು. ಈ ಸಂಧರ್ಭದಲ್ಲಿ ರಾಜ್ಯದಲ್ಲಿ ಹೂಡಿಕೆಗೆ ಇರುವ ಪ್ರಮುಖ ಅವಕಾಶಗಳನ್ನು ತಿಳಿಸಿಕೊಡಲಾಯಿತು. ಇನ್ವೆಸ್ಟ್ ಕರ್ನಾಟಕ ಪೋರಂನ ಸಿಓಓ ಬಿ.ಕೆ ಶಿವಕುಮಾರ್, ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ರೇವಣ್ಣ ಗೌಡ, ಐಕೆಎಫ್ ಡೆಪ್ಯಟಿ ಡೈರೆಕ್ಟರ್ ಭೈರೇಗೌಡ ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

