ಬೆಂಗಳೂರು: ಕೋವಿಡ್-19 ಲಸಿಕೆ ಶೀಘ್ರದಲ್ಲಿ ಲಭ್ಯವಾಗಲಿದ್ದು, ಪ್ರಥಮ ಆದ್ಯತೆ ಮೇರೆಗೆ ವೈದ್ಯಕೀಯ ಸಿಬ್ಬಂದಿಗಳಿಗೆ ಲಸಿಕೆ ನೀಡಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರ ಸಹಯೋಗದೊಂದಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿಂದು ಹಮ್ಮಿಕೊಳ್ಳಲಾಗಿದ್ದ “ಜಿಲ್ಲೆಯಲ್ಲಿ ಕೋವಿಡ್-19 ಲಸಿಕೆ ಪರಿಚಯ ಕುರಿತಂತೆ ಜಿಲ್ಲಾ ಮಟ್ಟದ ತರಬೇತಿ ಕಾರ್ಯಾಗಾರ”ವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಹಂತ ಹಂತವಾಗಿ ಲಸಿಕೆ ನೀಡಲು ನಿರ್ಧರಿಸಲಾಗಿದ್ದು, ಗ್ರಾಮೀಣ ಭಾಗದಲ್ಲಿ 50 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡಲಾಗುವುದು ಎಂದರಲ್ಲದೆ, ಕೇಂದ್ರ ಸರ್ಕಾರವು ಕೋವಿಡ್ ಲಸಿಕೆಯ ಮೊದಲ ಆದ್ಯತೆ ವೈದ್ಯರಿಗೆ ನೀಡುತ್ತಿದ್ದು ಅದರ ಪ್ರಕಾರ ಲಸಿಕೆ ನೀಡಬೇಕಿದೆ ಎಂದು ತಿಳಿಸಿದರು.
ಸಾರ್ವಜನಿಕರಿಗೆ ಕೋವಿಡ್ ಲಸಿಕೆ ಕುರಿತು ಸಂಪೂರ್ಣವಾದ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ವೈದ್ಯರಿಗೆ, ಸಿಬ್ಬಂದಿಗಳಿಗೆ ತರಬೇತಿಯ ಅವಶ್ಯಕತೆ ಇರುವುದರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕರೊನಾ ಲಸಿಕೆಯ ಕುರಿತು ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದರಲ್ಲದೆ ತರಬೇತಿಯಲ್ಲಿ ನೀಡಲಾಗುವ ಪೂರ್ಣ ಮಾಹಿತಿಯನ್ನು ಸರಿಯಾಗಿ ಅರ್ಥೈಸಿಕೊಂಡು ಸಾರ್ವಜನಿಕರಿಗೆ ತಲುಪಿಸಲು ತಿಳಿಸಿದರು.
ಲಸಿಕೆ ನೀಡಲು ಬೇಕಾದ ಎಲ್ಲಾ ಅಗತ್ಯ ಸಿದ್ಧತೆ ನಡೆಯುತ್ತಿದ್ದು, ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಕೈಗಳನ್ನು ಸಾಬೂನಿನಿಂದ ತೊಳೆಯುವುದು, ಸ್ಯಾನಿಟೈಸರ್ ಬಳಸುವುದು ಸೇರಿದಂತೆ ಇನ್ನಿತರೆ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದು ಹೇಳಿದರು.
ಡಬ್ಲ್ಯೂಎಚ್ ಪ್ರತಿನಿಧಿಯಾದ ಸರ್ವೇಲೇನ್ಸ್ ಮೆಡಿಕಲ್ ಅಧಿಕಾರಿಯಾದ ನಾಗರಾಜು ಅವರು ಮಾತನಾಡಿ ನ್ಯಾಷನಲ್ ಎಕ್ಸ್‍ಫರ್ಟ್ ಗ್ರೂಪ್ ಆನ್ ವ್ಯಾಕ್ಸಿನ್ ಅಡ್ಮಿನಿಸ್ಟ್ರೇಶನ್ (NEGVC) ಮಾರ್ಗದರ್ಶನದ ಅಡಿಯಲ್ಲಿ ನಾವು ಕೋವಿಡ್ ಲಸಿಕೆಯನ್ನು ನೀಡಬೇಕಾಗುತ್ತದೆ. ಮೊದಲ ಆದ್ಯತೆ ವೈದ್ಯರಿಗೆ, ನಂತರದಲ್ಲಿ ಪೋಲೀಸ್ ಇಲಾಖೆ, ಆಮ್ರ್ಡ್ ಪೋರ್ಸ್, ಹೋಮ್‍ಗಾಡ್ರ್ಸ್, ಮುನ್ಸಿಪಾಲ್ ವರ್ಕರ್ಸ್, 50 ಮೇಲ್ಪಟ್ಟವರಿಗೆ ನೀಡಬೇಕೆಂದು ನೇಗ್‍ವ್ಯಾಕ್(NEGVC) ಸೂಚಿಸಿದೆ ಎಂದು ಮಾಹಿತಿ ನೀಡಿದರು.
ಲಸಿಕೆ ನೀಡಲು ಸೂಕ್ತವಾದ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬೇಕು, ಆಯಾ ಊರಿನ ಅಂಗನವಾಡಿ ಕೇಂದ್ರಗಳು, ಸರ್ಕಾರಿ ಶಾಲೆಗಳು, ಮುನ್ಸಿಪಾಲಿಟಿ, ಸಮುದಾಯ ಭವನಗಳನ್ನು ಆಯ್ಕೆ ಮಾಡಿ, ಸಾಮಾಜಿಕ ಅಂತರ ಕಾಯ್ದುಕೊಂಡು ಲಸಿಕೆ ನೀಡಬೇಕು. ಆಯ್ಕೆ ಮಾಡಿಕೊಂಡಿರುವ ಸ್ಥಳಗಳಲ್ಲಿ ಮೂರು ಕೊಠಡಿಗಳಿರಬೇಕು. ಮೊದಲನೇ ಕೊಠಡಿಯಲ್ಲಿ ಲಸಿಕೆ ಪಡೆಯುವವರು ಕುಳಿತುಕೊಳ್ಳಲು ವ್ಯವಸ್ಥೆ, ಎರಡನೇ ಕೊಠಡಿ ವ್ಯಾಕ್ಸಿನೇಷನ್ ಕೊಠಡಿಯಾಗಿದ್ದು, ಲಸಿಕೆ ನೀಡಲು ಬೇಕಾಗುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿರಬೇಕು. ಮೂರನೇ ಕೊಠಡಿ ವೀಕ್ಷಣಾ ಕೊಠಡಿಯಾಗಿದ್ದು, ಲಸಿಕೆ ಪಡೆದುಕೊಂಡವರು ಕನಿಷ್ಟ ಮೂವತ್ತು ನಿಮಿಷಗಳ ಕಾಲ ವಿಶ್ರಾಂತಿ ಪಡೆದು ಹೋಗಲು ಅವಕಾಶ ಕಲ್ಪಿಸಿರಬೇಕು ಎಂದು ಹೇಳಿದರು.
ಕಾರ್ಯಾಗಾರದಲ್ಲಿ ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ.ಶರ್ಮಿಳಾ ಹೆಡೆ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಗೋವಿಂದರಾಜು, ತಾಲ್ಲೂಕು ಆರೋಗ್ಯಾಧಿಕಾರಿಗಳು, ಆರೋಗ್ಯ ಸಹಾಯಕರು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

