ಚಿಕ್ಕಮಗಳೂರು: ದತ್ತ ಜಯಂತಿ ಕಾರ್ಯಕ್ರಮ ಡಿಸೆಂಬರ್ 27 ರಿಂದ 29 ರವರೆಗೆ ನಡೆಯಲಿದ್ದು, ಕೋವಿಡ್ -19 ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಿ ಆಚರಿಸುವಂತೆ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ತಿಳಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಡೆದ ದತ್ತ ಜಯಂತಿ ಕಾರ್ಯಕ್ರಮದ ಆಚರಣೆ ಕುರಿತು ನಡೆದ ಪೂರ್ವ ಸಿದ್ಧಾತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೇಶಾದ್ಯಂತ ಕೋವಿಡ್-19 ಇರುವ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಮುಂಜಾಗ್ರತ ಕ್ರಮಗಳನ್ನು ಅನುಸರಿಸಿ ನಡೆಸುವಂತೆ ತಿಳಿಸಿದ ಅವರು ಶಾಂತಿ, ಸುವ್ಯವಸ್ಥೆ ಹಾಗೂ ಶಿಸ್ತು ಪಾಲನಾ ದೃಷ್ಠಿಯಿಂದ ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಧರಿಸುವ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಹೇಳಿದರು.
ದತ್ತಪೀಠದ ರಸ್ತೆಯು ಗುಂಡಿಗಳಿಂದ ಕೂಡಿದ್ದು, ರಸ್ತೆಯ ಗುಂಡಿಗಳನ್ನು ದುರಸ್ತಿ ಪಡಿಸುವಂತೆ ಲೋಕೋಪಯೋಗಿ ಇಲಾಖೆ ಹಾಗೂ ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ ಅವರು ತಾತ್ಕಾಲಿಕ ಆಸ್ಪತ್ರೆ ತೆರೆದು ಅಗತ್ಯ ಔಷಧಿ, ಅಂಬ್ಯುಲೆನ್ಸ್ನೊಂದಿಗೆ ವೈದ್ಯಾಧಿಕಾರಿಗಳನ್ನು ನಿಯೋಜಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ತಿಳಿಸಿದರು.
ಅಲ್ಲಂಪುರ ಪಾರ್ಕಿಂಗ್ ಪ್ರದೇಶದಲ್ಲಿ ವಾಹನ ನಿಲುಗಡೆ, ತಾತ್ಕಾಲಿಕ ಶೌಚಾಲಯಗಳ ವ್ಯವಸ್ಥೆ, ತಾತ್ಕಾಲಿಕ ವಿದ್ಯುತ್ ಸಂಪರ್ಕ, ಭಕ್ತಾದಿಗಳ ಅಗತ್ಯಕ್ಕೆ ತಕ್ಕಂತೆ ಬಸ್ ಸೌಕರ್ಯ ಹಾಗೂ ಖಾಸಗಿ ಮಿನಿ ಬಸ್ ಸೌಕರ್ಯ ನಿಯೋಜಿಸುವಂತೆ ಕೆ.ಎಸ್.ಆರ್.ಟಿ.ಸಿ ಮತ್ತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದರು.
ದತ್ತಪೀಠಕ್ಕೆ ಆಗಮಿಸುವ ಭಕ್ತಾದಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಬಿ.ಎಸ್.ಎನ್.ಎಲ್ ಮೊಬೈಲ್ ತರಾಂಗತರಗಳು ವ್ಯವಸ್ಥಿತವಾಗಿರಬೇಕು. ದತ್ತ ಜಯಂತಿ ಕಾರ್ಯಕ್ರಮಗಳ ದಿನಗಳಲ್ಲಿ ಪ್ರವಾಸಿಗರು ಬರುವುದನ್ನು ನಿರ್ಬಂಧಿಸಲಾಗುವುದು. ತಾತ್ಕಾಲಿಕ ಆಸ್ಪತ್ರೆಗೆ ಹಾಗೂ ಸಂಸ್ಥೆಯ ಆವರಣಕ್ಕೆ ಸುಣ್ಣ ಬಣ್ಣ ಬಳಿಯುವಂತೆ ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ತಿಳಿಸಿದರು.
ನಗರ ಅಲಂಕಾರಕ್ಕಾಗಿ ನಿಗಧಿಪಡಿಸಿದ ಸ್ಥಳಗಳ ಪಟ್ಟಿ ಪಡೆದು, ಅವುಗಳನ್ನು ಹೊರತುಪಡಿಸಿ ಬೇರೆ ಸ್ಥಳಗಳಲ್ಲಿ ಹಾಕುವ ಬಂಟಿಂಗ್ಸ್ ಹಾಗೂ ಬ್ಯಾನರ್ ಹಾಗೂ ಧಾರ್ಮಿಕ ಕಟ್ಟಡಗಳ ಮುಂದೆ ಹಾಕುವ ಪ್ಲೆಕ್ಸ್ಗಳ ಮೇಲೆ ನಿಗಾವಹಿಸುವಂತೆ ಹೇಳಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಹೆಚ್.ಅಕ್ಷಯ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಪೂವಿತಾ, ಅಪರ ಜಿಲ್ಲಾಧಿಕಾರಿ ಡಾ.ಕುಮಾರ್, ಚಿಕ್ಕಮಗಳೂರು ಉಪವಿಭಾಗಾಧಿಕಾರಿ ಡಾ.ಹೆಚ್.ಎಲ್.ನಾಗರಾಜ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ವಿಶ್ವ ಹಿಂದೂ ಪರಿಷತ್, ಭಜರಂಗದಳದ ಮುಖಂಡರು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

