ಬೆಂಗಳೂರು: ಇಂಗ್ಲೆಂಡ್ ನಲ್ಲಿ ಕರೊನಾ ವೈರಸ್ ನ ಹೊಸ ಪ್ರಬೇಧ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಯು.ಕೆ., ಡೆನ್ಮಾರ್ಕ್ ಮತ್ತು ನೆದರ್ ಲೆಂಡ್ ದೇಶಗಳಿಂದ ರಾಜ್ಯಕ್ಕೆ ಆಗಮಿಸುವ ಪ್ರಯಾಣಿಕರಿಗೆ 7 ದಿನಗಳ ಹೋಮ್ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಇಂಗ್ಲೆಂಡ್ ನಲ್ಲಿ ಕರೊನಾ ವೈರಸ್ ನ ಹೊಸ ಪ್ರಬೇಧ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಇಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಲಾಯಿತು. ರೂಪಾಂತರಗೊಂಡಿರುವ ವೈರಾಣುವಿನ ತೀವ್ರತೆಯಲ್ಲಿ ವ್ಯತ್ಯಾಸ ಇಲ್ಲದಿದ್ದರೂ ಹೊಸ ಪ್ರಬೇಧ ಹೆಚ್ಚು ಸಾಂಕ್ರಾಮಿಕ ಎಂದು ಪ್ರಾಥಮಿಕ ಅಧ್ಯಯನದಲ್ಲಿ ಹೇಳಲಾಗುತ್ತಿದೆ.
ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಕೇಂದ್ರ ಸರ್ಕಾರ ನಾಳೆ ಮಧ್ಯರಾತ್ರಿಯಿಂದ ಡಿಸೆಂಬರ್ 31ರವರೆಗೆ ಇಂಗ್ಲೆಂಡ್ ನಿಂದ ಬರುವ ವಿಮಾನಗಳನ್ನು ನಿಷೇಧಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಯು.ಕೆ., ಡೆನ್ಮಾರ್ಕ್ ಮತ್ತು ನೆದರ್ ಲೆಂಡ್ ದೇಶಗಳಿಂದ ರಾಜ್ಯಕ್ಕೆ ಆಗಮಿಸುವ ಪ್ರಯಾಣಿಕರಿಗೆ 7 ದಿನಗಳ ಹೋಮ್ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ.
ಕಳೆದ 14 ದಿನಗಳಲ್ಲಿ ಈ ದೇಶಗಳಿಂದ ರಾಜ್ಯಕ್ಕೆ ಆಗಮಿಸಿರುವ ವ್ಯಕ್ತಿಗಳನ್ನು 24 ಗಂಟೆಗಳಲ್ಲಿ ಪತ್ತೆ ಮಾಡಿ ಆರ್ ಟಿ-ಪಿಸಿಆರ್ ಟೆಸ್ಟ್ ಗೆ ಒಳಪಡಿಸಲಾಗುತ್ತದೆ. ಹೊಸ ಪ್ರಬೇಧದ ವೈರಾಣುವಿನ ಬಗ್ಗೆ ಯಾವುದೇ ಆತಂಕ ಪಡಬೇಕಾದ ಅವಶ್ಯಕತೆ ಇಲ್ಲದಿದ್ದರೂ, ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೆ ಪಾಲಿಸಬೇಕೆಂದು ಮನವಿ ಮಾಡಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

