ಬೆಂಗಳೂರು: ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆ 2020ರ ಹಿನ್ನೆಲೆ ದಿನಾಂಕ: 22.12.2020ರಂದು ಮೊದಲನೆಯ ಹಂತದಲ್ಲಿ ನೆಲಮಂಗಲ ಮತ್ತು ಹೊಸಕೋಟೆ ತಾಲ್ಲೂಕುಗಳ ಗ್ರಾಮ ಪಂಚಾಯಿತಿಗಳಿಗೆ ಮತದಾನವು ನಿಗದಿಯಂತೆ ನಡೆದಿದ್ದು, ದಿನಾಂಕ: 20.12.2020ರ ಸಂಜೆ 5 ಗಂಟೆಯಿಂದ ದಿನಾಂಕ: 22.12.2020ರ ಸಂಜೆ 5 ಗಂಟೆಯವರೆಗೆ ಒಣದಿನಗಳನ್ನು ಘೋಷಿಸಲಾಗಿರುತ್ತದೆ.
ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆಯು ದಿನಾಂಕ: 30.11.2020 ರಿಂದ ಜಾರಿಯಲ್ಲಿದ್ದು, ದಿನಾಂಕ: 22.12.2020ರವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಬಕಾರಿ ಇಲಾಖೆಯಿಂದ ಕೈಗೊಂಡ ಜಾರಿ ಮತ್ತು ತನಿಖಾ ಕಾರ್ಯದಿಂದ ಜಿಲ್ಲೆಯ ವ್ಯಾಪ್ತಿಯಲ್ಲಿ 24 ಘೋರ ಪ್ರಕರಣಗಳು, ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನಕ್ಕೆ ಅವಕಾಶ ಮಾಡಿದಂತಹ 96 ಪ್ರಕರಣಗಳು ಹಾಗೂ ಅಬಕಾರಿ ಸನ್ನದುಗಳಲ್ಲಿ ಸನ್ನದು ಷರತ್ತು ಉಲ್ಲಂಘನೆಯ 14 ಮೊಕದ್ದಮೆಗಳು ಸೇರಿದಂತೆ ಒಟ್ಟು 134 ಅಬಕಾರಿ ಪ್ರಕರಣಗಳನ್ನು ದಾಖಲಿಸಲಾಗಿದೆ.
ಸದರಿ ಮೊಕದ್ದಮೆಗಳಲ್ಲಿ ಒಟ್ಟು 322.245 ಲೀಟರ್ ಭಾರತೀಯ ತಯಾರಿಕಾ ಮದ್ಯ, 89.500 ಲೀಟರ್ ಬೀರ್, 16.500 ಲೀಟರ್ ವೈನ್(ಹೋಮ್‌ಮೇಡ್) ,1.320 ಲೀಟರ್ ರಕ್ಷಣಾ ಇಲಾಖೆ ಉಪಯೋಗದ ಮದ್ಯವನ್ನು ಜಪ್ತುಪಡಿಸಿಕೊಳ್ಳಲಾಗಿದೆ. ಅಲ್ಲದೆ, ಅಕ್ರಮ ಮದ್ಯ ಸಾಗಾಣಿಕೆಗೆ ಉಪಯೋಗಿಸಿದ 16 ದ್ವಿಚಕ್ರ ವಾಹನಗಳು ಮತ್ತು ವೈನ್ ಅನ್ನು ಸಾಗಾಣಿಕೆ ಮಾಡಲು ಉಪಯೋಗಿಸುತ್ತಿದ್ದ ಕಾರನ್ನು ಜಫ್ತುಪಡಿಸಲಾಗಿದೆ. ಈ ಸಂಬಂಧ 109 ಜನರನ್ನು ದಸ್ತಗಿರಿ ಪಡಿಸಲಾಗಿದೆ.
ವಶಪಡಿಸಿಕೊಂಡಿರುವ ಮದ್ಯ ಮತ್ತು ಬೀರ್‌ನ ಒಟ್ಟು ಮೌಲ್ಯ ರೂ.1,15,000-00ಗಳಾಗಿದೆ ಹಾಗೂ ವಾಹನಗಳ ಮೌಲ್ಯ ರೂ.4,00,000-00ಗಳಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.

