ಬೆಂಗಳೂರು: ವಿಶ್ವ ಆರೋಗ್ಯ ಸಂಸ್ಥೆಯು 2025ರ ವೇಳೆಗೆ ರಕ್ತಹೀನತೆ ಮುಕ್ತ ದೇಶವನ್ನಾಗಿ ಮಾಡಲು ಎಲ್ಲರೂ ಕೈಜೋಡಿಸಬೇಕು ಎಂದು ಆರೋಗ್ಯ ಶಿಕ್ಷಣ ನಿರ್ದೇಶನಾಲಯದ ರಾಜ್ಯ ಮಟ್ಟದ ಸಲಹೆಗಾರರಾದ ವಿಶ್ವನಾಥ್ ಅವರು ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಸಹಯೋಗದೊಂದಿಗೆ ನಡೆದ “ಜಿಲ್ಲಾ ಮಟ್ಟದ ರಕ್ತಹೀನತೆ ಮುಕ್ತ ಭಾರತ ಕಾರ್ಯಕ್ರಮ ತರಬೇತಿ ಕಾರ್ಯಾಗಾರ”ವನ್ನು ಉದ್ಘಾಟಿಸಿ, ಅವರು ಮಾತನಾಡಿದರು.
ರಕ್ತಹೀನತೆಯನ್ನು ಹೋಗಲಾಡಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ರಕ್ತಹೀನತೆಯಿಂದ ಬಳಲುತ್ತಿರುವ ಮಕ್ಕಳು ಮತ್ತು ಗರ್ಭಿಣಿಯರನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಗುರುತಿಸಿ, ಸೂಕ್ತ ಹಾಗೂ ಸಮರ್ಪಕವಾಗಿ ಆರೋಗ್ಯ ಕ್ರಮಗಳನ್ನು ಕೈಗೊಳ್ಳಲು ತಿಳಿಸಿದರು.
ಮಕ್ಕಳಲ್ಲಿ ಅಪೌಷ್ಟಿಕತೆ ಸಮಸ್ಯೆಯಿಂದ ಕೆಲವೊಮ್ಮೆ ರಕ್ತಹೀನತೆ ಉಂಟಾಗುವ ಸಾಧ್ಯತೆಗಳಿದ್ದು, 2015-16 ರಲ್ಲಿ ಮಕ್ಕಳಲ್ಲಿ ರಕ್ತಹೀನತೆ ಪ್ರಮಾಣ ಶೇ.64ರಷ್ಟಿದ್ದು, 2019-20 ರ ವೇಳೆಗೆ ಶೇ.92ರಷ್ಟು ಪ್ರಗತಿ ಸಾಧಿಸಲಾಗಿದ್ದು, ಗರ್ಭಿಣಿಯರಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ತಿಳಿಸಿದರು.
ರಕ್ತಹೀನತೆಯಿಂದಾಗಿ ಮಕ್ಕಳಲ್ಲಿ ಬೆಳವಣಿಗೆ ಕುಂಠಿತವಾಗುತ್ತದೆ ಅಲ್ಲದೆ, ತೂಕದಲ್ಲಿ ವ್ಯತ್ಯಾಸ, ಬುದ್ಧಿ ಬೆಳವಣಿಗೆ ಆಗದೇ ಇರುವುದರಿಂದ ತಾಯಿ ಮತ್ತು ಮಗು ರಕ್ತಹೀನತೆಯಿಂದಾಗಿ ಬಳಲುವುದನ್ನು ತಡೆಗಟ್ಟಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನೀಡಲಾಗುವ ರಕ್ತಹೀನತೆ ನಿವಾರಣೆ ಮಾತ್ರೆಗಳನ್ನು ತಲುಪಿಸಬೇಕು ಎಂದರು.
ದೇಹದಲ್ಲಿ ಕಬ್ಬಿಣಾಂಶ ಕಡಿಮೆಯಾಗುವುದರಿಂದ ರಕ್ತಹೀನತೆಗೆ ಗುರಿಯಾಗುತ್ತೇವೆ. ಇದನ್ನು ತಡೆಗಟ್ಟಲು ನಾವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿರುವುದರಿಂದ, ಪರಿಸರ ನೈರ್ಮಲ್ಯ, ಶೌಚಾಲಯಗಳ ಬಳಕೆ, ವೈಯಕ್ತಿಕ ಸ್ವಚ್ಚತೆಯ ಮೂಲಕ ರಕ್ತಹೀನತೆಯನ್ನು ಕಡಿಮೆ ಮಾಡಬಹುದು.
ರಾಜ್ಯದಲ್ಲಿ ಶೇ.20%ರಷ್ಟು ಬಾಲ್ಯವಿವಾಹಗಳಾಗಿದ್ದು, ಚಿಕ್ಕ ವಯಸ್ಸಿನಲ್ಲಿ ಗರ್ಭ ಧರಿಸುವುದರಿಂದ ರಕ್ತಹೀನತೆಗೆ ತುತ್ತಾಗುತ್ತಾರೆ. ಪ್ರಪಂಚದಲ್ಲಿ ಶೇ.70%ರಷ್ಟು ಮರಣ ರಕ್ತಹೀನತೆಯಿಂದಲೇ ಸಂಭವಿಸುವುದು ಎಂದರಲ್ಲದೆ, ಮಹಿಳೆ ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆಯ ಕೊರತೆಯನ್ನು ದೂರ ಮಾಡಿದಾಗ ಮಾತ್ರ ಪೌಷ್ಟಿಕ ಬೆಳವಣಿಗೆಗೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಕೇಂದ್ರಗಳಲ್ಲಿ ಪೌಷ್ಟಿಕ ಆಹಾರ ಪುನಶ್ಚೇತನ ಕೇಂದ್ರಗಳನ್ನು ತೆರೆಯಲಾಗಿದ್ದು, ಮಗುವಿನ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಇಂತಹ ಕೇಂದ್ರಗಳಿಗೆ ತೆರಳುವಂತೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ಮಾಹಿತಿ ನೀಡಬೇಕು ಎಂದು ತಿಳಿಸಿದರು.
ತರಬೇತಿ ಶಿಬಿರದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಂತಾನೋತ್ಪತಿ ಮತ್ತು ಮಕ್ಕಳ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ಶರ್ಮಿಳಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಗೋವಿಂದರಾಜು, ರಾಜೇಶ್ವರಿ, ಕ್ಷೇತ್ರ ಆರೋಗ್ಯ ಅಧಿಕಾರಿ ಜಯಲಕ್ಷ್ಮಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿಬ್ಬಂದಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

