ದೊಡ್ಡಬಳ್ಳಾಪುರ: ತಾಲೂಕಿನ ವಿವಿದೆಡೆಗಳಲ್ಲಿ ಕ್ರಿಸ್ಮಸ್ ಹಬ್ಬವನ್ನು ಈ ಬಾರಿ ಕರೊನಾ ಹಿನ್ನಲೆಯಲ್ಲಿ ಅಗತ್ಯ ಮುನ್ನೆಚ್ಚರಿಕೆಗಳೊಂದಿಗೆ ಸರಳವಾಗಿ ಆಚರಿಸಲಾಯಿತು.
ಚರ್ಚ್ಗಳಲ್ಲಿ ವಿಶೇಷ ಪ್ರಾರ್ಥನೆಗಳು ನಡೆದವು. ಕ್ರೈಸ್ತ ಬಾಂಧವರು ಚರ್ಚ್ಗಳಲ್ಲಿ ಪ್ರಾರ್ಥನೆ ಸಲ್ಲಿಸಿ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ನಗರದ ಟಿ.ಬಿ.ವೃತ್ತದ ಬಳಿಯಿರುವ ಸಂತ ಪೇತ್ರರ ಚರ್ಚ್ನಲ್ಲಿ ಈವ್ ಅಂಗವಾಗಿ ಗುರುವಾರ ಸಂಜೆ ವಿಶೇಷ ಪ್ರಾರ್ಥನೆ ನಡೆಯಿತು.
ಚರ್ಚ್ಗಳಲ್ಲಿ ಕ್ರಿಸ್ತರಿಗೆ ಸಾಂಕೇತಿಕವಾಗಿ ಮೇಣದ ಬತ್ತಿಗಳನ್ನು ಹಚ್ಚಲಾಗುತ್ತದೆ. ಹಾಗೂ ಕೆಲವರು ತಮ್ಮ ಹರಕೆಗಳನ್ನು ಪೂರ್ಣಗೊಳಿಸಲು ಸಹ ಮೇಣದ ಬತ್ತಿಗಳನ್ನು ಹಚ್ಚುವ ದೃಶ್ಯ ಸಾಮಾನ್ಯವಾಗಿತ್ತು.
ಸಂತ ಪೇತ್ರರ ಚರ್ಚ್ನಲ್ಲಿ ಫಾದರ್ ಆಂಟೋನಿ ಡಿಸೋಜಾ ವಿಶೇಷ ಪ್ರಾರ್ಥನೆ ಸಲ್ಲಿಸಿ ಯೇಸು ಜನ್ಮ ವೃತ್ತಾಂತದ ಪ್ರವಚನ ನೀಡಿ, ಜಗತ್ತಿನ ಪಾಪ, ಸೈತಾನಗಳನ್ನು ಕಳೆದು, ಶಾಂತಿ ನೆಲೆಸಲು 2020 ವರ್ಷಗಳ ಹಿಂದೆ ಅವತರಿಸಿದ ಯೇಸು ಕ್ರಿಸ್ತ ಲೋಕದ ಬೆಳಕಾಗಿದ್ದಾನೆ. ಈ ಬಾರಿ ಜಗತ್ತಿನ ಬಹಳಷ್ಟು ಕಡೆ ಕರೊನಾ ಸೋಂಕು ಆವರಿಸಿದೆ. ಕೋವಿಡ್-19 ಸಂಕಷ್ಟ ದೂರವಾಗಿ ಎಲ್ಲೆಡೆ ಜನರು ಆರೋಗ್ಯ, ಶಾಂತಿ ಹಾಗೂ ನೆಮ್ಮದಿಯಿಂದ ಬಾಳ್ವೆ ನಡೆಸುವಂತೆ ವಿಶೇಷವಾಗಿ ಪ್ರಾರ್ಥಿಸಲಾಗುತ್ತಿದೆ ನಮ್ಮಲ್ಲಿರುವುದನ್ನು ಇತರರಿಗೆ ಹಂಚಿಕೊಂಡು ಸಹಬಾಳ್ವೆ ನಡೆಸಬೇಕು ಎಂದು ತಿಳಿಸಿದರು.
ಸಂತ ಪೇತ್ರರ ಚರ್ಚ್ನಲ್ಲಿ ಯೇಸು ಕ್ರಿಸ್ತನ ಜನನ ವೃತ್ತಾಂತ ತಿಳಿಸುವ ಬೊಂಬೆಗಳು ಹಾಗೂ ವಸ್ತು ಪ್ರದರ್ಶನ ಗಮನ ಸೆಳೆಯಿತು. ಮನೆಗಳಲ್ಲಿ ಚಿಕ್ಕ ಮಕ್ಕಳಿಗೆ ಸಾಂಟಾ ಕ್ಲಾಸ್ ವೇಷವನ್ನು ಹಾಕಿ ಸಂಭ್ರಮಿಸಿದರು.
ನಗರದ ಮಾರುಕಟ್ಟೆ ರಸ್ತೆಯ ಸುಮಿತ್ರಾ ಸ್ಮಾರಕ ದೇವಾಲಯದಲ್ಲಿ ತಾಲೂಕಿನ ಪಾಲನಜೋಗಿಹಳ್ಳಿ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿರುವ ವಿವಿಧ ಚರ್ಚ್ಗಳಲ್ಲಿ ಕ್ರಿಸ್ಮಸ್ ಆಚರಣೆ ನಡೆಯಿತು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

