ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಡಿ.27 ರಂದು ನಡೆಯಲಿರುವ ಗ್ರಾಮ ಪಂಚಾಯಿತಿ ಚುನಾವಣೆಗೆ ಸಕಲ ಸಿದ್ದತೆಗಳನ್ನು ಕೈಗೊಳ್ಳಲಾಗಿದ್ದು, ಪೊಲೀಸ್ ಸಿಬ್ಬಂದಿ ನಿಯೋಜನೆ ನಗರದ ಭಗತ್ಸಿಂಗ್ ಕ್ರೀಡಾಂಗಣದಲ್ಲಿ ನಡೆಯಿತು.
ಪೊಲೀಸ್ ಸಿಬ್ಬಂದಿ ನಿಯೋಜನೆ ಕುರಿತು ಮಾಹಿತಿ ನೀಡಿದ ಡಿವೈಎಸ್ಪಿ ಟಿ.ರಂಗಪ್ಪ, ಚುನಾವಣೆ ನಡೆಯುತ್ತಿರುವ 25 ಗ್ರಾಮ ಪಂಚಾಯಿತಿಗಳಿಂದ 239 ಮತಗಟ್ಟೆಗಳಿದ್ದು, 500 ಮಂದಿ ಪೊಲೀಸ್ ಸಿಬ್ಬಂದಿ ಇದ್ದಾರೆ. ಇಬ್ಬರು ಡಿವೈಎಸ್ಪಿ,4 ಸರ್ಕಲ್ ಇನ್ಸ್ಪೆಕ್ಟರ್, ಸಾಮಾನ್ಯ ಮತಗಟ್ಟೆಗೆ ಒಬ್ಬರು ಪೊಲೀಸ್ ಪೇದೆ, ಸೂಕ್ಷ್ಮ ಹಾಗು ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ಇಬ್ಬರು ಸಿಬ್ಬಂದಿ ನಿಯೋಜಿಸಲಾಗುತ್ತಿದೆ. ಇದಲ್ಲದೆ ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲೂ ಗಸ್ತು ತಿರುಗಲು ಮೊಬೈಲ್ ತಂಡಗಳನ್ನು ನಿಯೋಜಿಸಲಾಗಿದೆ. ಇದರಲ್ಲಿ ಸಬ್ಇನ್ಸ್ಪೆಕ್ಟರ್ ಅಥವಾ ಎಎಸ್ಐ ಸೇರಿದಂತೆ ಪೊಲೀಸ್ ಸಿಬ್ಬಂದಿ ಇರಲಿದ್ದಾರೆ ಎಂದು ತಿಳಿಸಿದ್ದಾರೆ.
ಈ ಬಾರಿ ಮಸ್ಟರಿಂಗ್, ಡಿಮಾಸ್ಟರಿಂಗ್, ಭದ್ರತಾ ಕೊಠಡಿ ಹಾಗೂ ಮತ ಎಣಿಕೆ ನಗರದ ಕೊಂಗಾಡಿಯಪ್ಪ ಕಾಲೇಜಿನಲ್ಲಿ ನಡೆಯಲಿದೆ. ತಾಲೂಕಿನ 224 ಕ್ಷೇತ್ರಗಳ 443 ಸ್ಥಾನಕ್ಕೆ ಮತದಾನ ನಡೆಯಲಿದೆ. ಒಟ್ಟು 239 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಇದರಲ್ಲಿ, ಅತಿ ಸೂಕ್ಷ್ಮ 45, ಸೂಕ್ಷ್ಮ 94, ಹಾಗೂ ಸಾಮಾನ್ಯ 100 ಮತಗಟ್ಟೆಗಳಿವೆ. ಚುನಾವಣೆಯಲ್ಲಿ 940 ಮತಗಟ್ಟೆ ಸಿಬ್ಬಂದಿ ಹಾಗೂ 96 ಮೀಸಲು ಸೇರಿ 1036 ಮಂದಿ ಕಾರ್ಯ ನಿರ್ವಹಿಸಲಿದ್ದಾರೆ.10 ಮಂದಿ ಸೆಕ್ಟರ್ ಅಧಿಕಾರಿಗಳಿದ್ದಾರೆ. ಪ್ರಸ್ತುತ ಪರಿಷ್ಕರಣೆಯಾಗಿರುವ ಅಂತಿಮ ಮತಪಟ್ಟಿಯನ್ವಯ 71,207 ಪುರುಷರು, 70,773 ಮಹಿಳೆಯರು ಸೇರಿ 1,41,980 ಮತದಾರರು ಮತ ಚಲಾಯಿಸಲಿದ್ದಾರೆ ಎಂದು ತಾಲೂಕು ಚುನಾವಣಾ ಅಧಿಕಾರಿ ಹಾಗೂ ತಹಶೀಲ್ದಾರ್ ಟಿ.ಎಸ್.ಶಿವರಾಜ್ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

