ಬೆಂಗಳೂರು: ಮಾಗಡಿ ರಸ್ತೆಯಲ್ಲಿರುವ ಬಾಲಗಂಗಾಧರನಾಥ ಸ್ವಾಮಿ ವೃತ್ತದಲ್ಲಿನ ಹಿರಿಯ ನಟ ದಿ.ವಿಷ್ಣುವರ್ಧನ್ ಅವರ ಪ್ರತಿಮೆಯನ್ನು ತಡರಾತ್ರಿ ದುಷ್ಕರ್ಮಿಗಳು ಧ್ವಂಸಗೊಳಿಸಿರುವ ಘಟನೆಗೆ ನಟ ದರ್ಶನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಫೇಸ್ಬುಕ್ ಪೇಜಲ್ಲಿ ಬರೆದುಕೊಂಡಿರುವ ಅವರು, ಕರ್ನಾಟಕದಲ್ಲಿ ಅತಿಯಾಗಿ ಪ್ರೀತಿಸೋ, ಆರಾಧಿಸೋ ವ್ಯಕ್ತಿಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವ ನಮ್ಮ ನಲ್ಮೆಯ ಸಾಹಸ ಸಿಂಹ ಡಾ|| ವಿಷ್ಣು ಸರ್ ಪುತ್ಥಳಿಯನ್ನು ಯಾರೋ ಕಿಡಿಗೇಡಿಗಳು ಯಾರು ಇಲ್ಲದ ಹೊತ್ತಿನಲ್ಲಿ ಧ್ವಂಸ ಮಾಡಿರುವುದು ನಾಚಿಕೆಯ ಸಂಗತಿ. ಇಂತ ದುಷ್ಕರ್ಮಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು. ಇಂತ ಹೀನ ಕೃತ್ಯಗಳಿಗೆ ಕೈಜೋಡಿಸುವ ವ್ಯಕ್ತಿಗಳಿಗೆ ತಕ್ಕ ಶಾಸ್ತಿ ಮಾಡುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಘಟನೆಯ ವಿವರ: ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಬಾಲಗಂಗಾಧರನಾಥ ಸ್ವಾಮಿ ವೃತ್ತದಲ್ಲಿನ ವಿಷ್ಣುವರ್ಧನ್ ಅವರ ಪ್ರತಿಮೆಯನ್ನು ತಡರಾತ್ರಿ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದರು.
ಘಟನೆ ಸಂಬಂಧ ವಿಷ್ಣುವರ್ಧನ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ದುಷ್ಕರ್ಮಿಗಳ ಪತ್ತೆಗೆ ಆಗ್ರಹಿಸಿ, ಪ್ರತಿಭಟನೆ ನಡೆಸಿದ್ದು ಕಿಡಿಗೇಡಿ ಪತ್ತೆಗೆ ವಿಷ್ಣುವರ್ಧನ್ ಅಭಿಮಾನಿಗಳು ಆಗ್ರಹಿಸಿದ್ದರು.
ಈ ಹಿಂದೆ ಪ್ರತಿಮೆಯನ್ನು ಇಲ್ಲಿಂದ ಕೆಲ ಕಿಡಿಗೇಡಿಗಳು ಎತ್ತೊಯ್ದಿದ್ದರು. ನಂತರ ಮತ್ತೆ ಪ್ರತಿಮೆಯನ್ನು ಇಡಲಾಗಿತ್ತು. ಈಗ ರಾತ್ರೋರಾತ್ರಿ ಪ್ರತಿಮೆ ಧ್ವಂಸಗೊಳಿಸುವ ಮೂಲಕ ದುಷ್ಕರ್ಮಿಗಳು ವಿಕೃತಿ ಮೆರೆದಿದ್ದರು.
ಪ್ರತಿಮೆ ದ್ವಂಸಗೊಂಡ ವಿಷಯ ತಿಳಿಯುತ್ತಿದ್ದಂತೆ ನಟ ವಿಷ್ಣುವರ್ಧನ್ ಅಭಿಮಾನಿಗಳು ತೀವ್ರವಾಗಿ ಆಕ್ರೋಶಗೊಂಡಿದ್ದು, ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

