ದೊಡ್ಡಬಳ್ಳಾಪುರ: ರಾಜ್ಯದಲ್ಲಿ ಶುಕ್ರವಾರ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳು ಪುನರಾರಂಭವಾಗಿದ್ದು, ತಾಲೂಕಿನಾಧ್ಯಂತ ಮೊದಲ ದಿನ ಉತ್ತಮ ಸ್ಪಂದನೆ ದೊರೆತಿದೆ.
ತಾಲೂಕಿನ ಸರ್ಕಾರಿ ಮತ್ತು ಖಾಸಗಿ ಶಾಲೆಗಳು ತರಗತಿಗಳನ್ನು ಆರಂಭಿಸಿದ್ದು ಮೊದಲ ದಿನ ಶೇ.76ರಷ್ಟು ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಿದ್ದರೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಬೈಯಪ್ಪರೆಡ್ಡಿ ಹರಿತಲೇಖನಿಗೆ ತಿಳಿಸಿದ್ದಾರೆ.
ಮೊದಲ ದಿನದ ಶಾಲೆಗಳ ಪುನರಾರಂಭದ ಹಿನ್ನೆಲೆ ಬಹುತೇಕ ಶಾಲೆ ಆವರಣ, ಕೊಠಡಿಗಳನ್ನು ಶುಚಿಗೊಳಿಸಿ, ರಂಗೋಲಿ, ತಳಿರು ತೋರಣಗಳಿಂದ ಅಲಂಕರಿಸಲಾಗಿದ್ದು, ವಿದ್ಯಾರ್ಥಿಗಳನ್ನು ಶಿಕ್ಷಕರು ಆತ್ಮೀಯವಾಗಿ ಬರಮಾಡಿಕೊಂಡರು.
ಸರ್ಕಾರದ ನಿರ್ದೇಶನದಂತೆ ಶಿಕ್ಷಣ ಇಲಾಖೆಯ ಸೂಚನೆಯ ಮೇರೆಗೆ ಕೋವಿಡ್ ಮಾರ್ಗಸೂಚಿ ಪಾಲನೆಗೆ ಒತ್ತು ನೀಡಲಾಗಿತ್ತು. ಸ್ಯಾನಿಟೈಸರ್, ನೀರು ಹಾಗೂ ಸೋಪಿನ ವ್ಯವಸ್ಥೆ ಮಾಡಲಾಗಿತ್ತು. ಅಂತರ ಕಾಪಾಡಿಕೊಂಡು ತರಗತಿಗೆ ಹಾಜರಾಗಿದ್ದರು. 6 ರಿಂದ 9ನೇ ತರಗತಿ ವರೆಗಿನ ವಿದ್ಯಾರ್ಥಿಗಳೂ ವಿದ್ಯಾಗಮ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಖಾಸಗಿ ಶಾಲೆಗಳ ಆರಂಭ: ಶ್ರೀ ದೇವರಾಜ ಅರಸ್ ಅಂತಾರಾಷ್ಟ್ರೀಯ ವಸತಿಯ ನಿರ್ದೇಶಕ ಜೆ.ರಾಜೇಂದ್ರ, ಪ್ರಾಂಶುಪಾಲರಾದ ದೇವಿಕಾರಾಣಿ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡರು.
ಶ್ರೀ ದೇವರಾಜ್ ಅರಸ್ ಪದವಿಪೂರ್ವ ಕಾಲೇಜಿನಲ್ಲಿಯೂ ಸಹ ದ್ವಿತೀಯ ಪಿಯುಸಿ ತರಗತಿಗಳು ಪ್ರಾರಂಭವಾಗಿದ್ದವು. ವಿದ್ಯಾರ್ಥಿಗಳು ಅತಿ ಉತ್ಸಾಹದಿಂದ ಕಾಲೇಜಿಗೆ ಹಾಜರಾಗಿದ್ದರು ಕೋವಿಡ್ ನಿಯಮಗಳನ್ನು ಪಾಲಿಸುತ್ತಾ ವಿದ್ಯಾರ್ಥಿಗಳು ಹೊಸ ಹೊಸ ವರ್ಷದ ಶುಭಾಶಯ ಕೋರಿದರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳಿಗೆ ಸ್ವಾಗತ ಮಾಡುತ್ತಾ ತರಗತಿಗಳನ್ನು ಪ್ರಾರಂಭಿಸಿದರು.
ಇತರ ಶಾಲೆಗಳನ್ನು ಆರಂಭಿಸುವಂತೆ ಹೆಚ್ಚಿದ ಒತ್ತಡ: ಕೋವಿಡ್-19 ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ 6ರಿಂದ 9ರ ವರಗೆ ವಿದ್ಯಾಗಮ, 10 ಮತ್ತು 12ನೇ ತರಗತಿಗಳನ್ನು ಶುಕ್ರವಾರವಾರದಿಂದ ಆರಂಭಿಸಲಾಗಿದೆ. ಇದನ್ನು ನೋಡಿದ ಪೋಷಕರು ಹಾಗೂ ವಿದ್ಯಾರ್ಥಿಗಳು ಇದೇ ರೀತಿ ಮುಂಜಾಗ್ರತರ ಕೈಗೊಂಡು ಉಳಿದ ಶಾಲೆಯನ್ನು ಆರಂಭಿಸುವಂತೆ ಶಿಕ್ಷಣ ಸಚಿವರನ್ನು ಮನವಿ ಮಾಡಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

