
ಬೆಂ.ಗ್ರಾ.ಜಿಲ್ಲೆ: ತೋಟಗಾರಿಕೆ ಇಲಾಖೆ ವತಿಯಿಂದ 2020-21ನೇ ಸಾಲಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿವಿಧ ಯೋಜನೆಗಳನ್ನು ಘೋಷಿಸಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ರೈತರು ಅವುಗಳ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ತೋಟಗಾರಿಕಾ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆ(NHM): 2020-21ನೇ ಸಾಲಿನಲ್ಲಿ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಪ್ರಸ್ತಾವನೆ ಆಧಾರಿತ ಘಟಕಗಳಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ ಮತ್ತು ನೆಲಮಂಗಲ ತಾಲೂಕುಗಳಲ್ಲಿನ ಆಸಕ್ತ ರೈತ ಫಲಾನುಭವಿಗಳಿಂದ ಸದರಿ ಯೋಜನೆಯಡಿ ವಿವಿಧ ಘಟಕಗಳಾದ ಟ್ರ್ಯಾಕ್ಟರ್, ಪವರ್ ಟಿಲ್ಲರ್, ವೈಯಕ್ತಿಕ ಕೃಷಿ ಹೊಂಡ, ಸಮುದಾಯ ಕೃಷಿ ಹೊಂಡ, ಹಣ್ಣು ಮಾಗಿಸುವ ಘಟಕ, Cold Room/Staffing Room, ಅಣಬೆ ಉತ್ಪಾದನೆ ಘಟಕ ಹಾಗೂ ತಳ್ಳುವ ಗಾಡಿ(Vending Cart) ಗಳಿಗೆ ಶೇ.50ರಂತೆ ಸಹಾಯಧನ ನೀಡಲು ಅವಕಾಶವಿದ್ದು, ಸದರಿ ಯೋಜನೆಯಡಿ ನಾಲ್ಕು ತಾಲ್ಲೂಕುಗಳ ಸಾಮಾನ್ಯ, ಸಾಮಾನ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ಆಸಕ್ತ ರೈತರು ಈ ಯೋಜನೆಯ ಸೌಲಭ್ಯ ಪಡೆಯಬಹುದಾಗಿದೆ.
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ(PMKSY): 2020-21ನೇ ಸಾಲಿನಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿಯಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ 3220.25 ಎಕರೆಗಳು ನಿಗದಿಯಾಗಿದ್ದು, ಈಗಾಗಲೇ 997.80 ಎಕರೆಗಳಷ್ಟು ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಅಳವಡಿಸಲಾಗಿದೆ. ಆದ್ದರಿಂದ, ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಅಳವಡಿಸುವ ರೈತರಿಗೆ ಆಯಾ ಬೆಳೆಗಳು ಮತ್ತು ಬೆಳೆಗಳ ಅಂತರಕ್ಕನುಗುಣವಾಗಿ ಮಾರ್ಗಸೂಚಿಯನ್ವಯ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಸಾಮಾನ್ಯ ರೈತರಿಗೆ ಪ್ರಥಮ 2 ಹೆಕ್ಟೇರ್ ಗೆ ನಿಗದಿಪಡಿಸಿರುವ ವೆಚ್ಚದ ಶೇ. 90 ರಷ್ಟು ಸಹಾಯಧನವನ್ನು ಹಾಗೂ ನಂತರ ಮೂರು ಹೆಕ್ಟೇರ್ ಗೆ ಶೇ. 45 ರಷ್ಟು ಸಹಾಯ ಧನವನ್ನು ನೀಡಲಾಗುವುದು (ತರಕಾರಿ ಹಾಗೂ ವಾಣಿಜ್ಯ ಹೂ ಬೆಳೆಗಳಿಗೆ ಗರಿಷ್ಠ 2 ಹೆಕ್ಟೇರ್ ವರೆಗೂ ಸಹಾಯ ಧನವನ್ನು ನೀಡಲಾಗುವುದು) ಸದರಿ ಸೌಲಭ್ಯವನ್ನು ಪ್ರತಿ ಫಲಾನುಭವಿ ಕುಟುಂಬಕ್ಕೆ 5 ಹೆಕ್ಟೇರ್ ಪ್ರದೇಶದವರೆಗೆ ಮಿತಿಗೊಳಿಸಲಾಗಿದೆ. ತೋಟಗಾರಿಕೆಯಲ್ಲಿ ಕೃಷಿ ಮಾಡುತ್ತಿರುವ ಹಾಗೂ ನೀರಾವರಿ ಮೂಲ ಹೊಂದಿರುವ ರೈತರು ತಮ್ಮ ಜಮೀನಿಗೆ ಹನಿ ನೀರಾವರಿ ಅಳವಡಿಸಿಕೊಳ್ಳಲು ಆಸಕ್ತಿ ಈ ಸೌಲಭ್ಯ ಪಡೆಯಬಹುದು.
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (RKVY): ರೈತರು ತಮ್ಮ ಜಮೀನಿನಲ್ಲಿ ಆಧುನಿಕ ಯಂತ್ರೋಪಕರಣಗಳನ್ನು ಬಳಸಿ ಕೃಷಿ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಳ್ಳಲು ತೋಟಗಾರಿಕೆ ಇಲಾಖೆಯಿಂದ ಅನುಮೋದಿತ ಕಂಪನಿಯವರಿಂದ ಯಂತ್ರೋಪಕರಣಗಳ ಖರೀದಿಗೆ 2020-21ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಣ್ಣ ರೈತರು ಮತ್ತು ಮಹಿಳಾ ಫಲಾನುಭವಿಗಳಿಗೆ ಶೇ. 50 ರಷ್ಟು ಸಹಾಯಧನವನ್ನು ನೀಡಲಾಗುವುದು. ಸಾಮಾನ್ಯ ವರ್ಗದ ರೈತರಿಗೆ ಶೇ. 40 ರಷ್ಟು ಸಹಾಯಧನವನ್ನು ನೀಡಲಾಗುವುದು. ತೋಟಗಾರಿಕೆಯಲ್ಲಿ ಕೃಷಿ ಮಾಡುತ್ತಿರುವ ರೈತರು ತಮ್ಮ ಜಮೀನಿನಲ್ಲಿ ಆಧುನಿಕ ಯಂತ್ರೋಪಕರಣಗಳಾದ ಬೂಮರ್, ಸ್ಟ್ರೇಯರ್ಸ್, ಪವರ್ ವೀಡರ್, ಕಲ್ಟಿವೇಟರ್, ರೋಟವೇಟರ್, ಅಡಿಕೆ ಸುಳಿಯುವ ಯಂತ್ರ, ಚಾಪ್ ಕಟರ್ ಹಾಗೂ ಮುಂತಾದ ಕೃಷಿ ಯಂತ್ರೋಪಕರಣಗಳನ್ನು ಖರೀದಿಸಲು ಆಸಕ್ತಿ ಇದ್ದಲ್ಲಿ ತಮ್ಮ ಜಮೀನು ವ್ಯಾಪ್ತಿಯ ಹೋಬಳಿಯ ರೈತ ಸಂಪರ್ಕ ಕೇಂದ್ರ / ತಾಲ್ಲೂಕು ಕಚೇರಿಯ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ತೋಟಗಾರಿಕಾ ಇಲಾಖೆ ಉಪ ನಿರ್ದೇಶಕರಾದ ಮಹಾಂತೇಶ ಮುರುಗೋಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗ್ರೂಪ್ ಮೂಲಕ ನಮ್ಮೊಂದಿಗೆ ಸೇರಿ.

