
ಬೆಂ.ಗ್ರಾ.ಜಿಲ್ಲೆ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ರಾಜ್ಯಾದ್ಯಂತ 2021 ರ ಜನವರಿ 15 ರಿಂದ ಮಾರ್ಚ್ 15 ರವರೆಗೆ ಹಮ್ಮಿಕೊಂಡಿರುವ ಮಹಿಳಾ ಕಾಯಕೋತ್ಸವ ಅಭಿಯಾನದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ ಕಡಿಮೆ ಮಹಿಳೆಯರ ಭಾಗವಹಿಸುವಿಕೆ ಇರುವ ನಾಲ್ಕು ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 2011 ರ ಜನಗಣತಿ ಪ್ರಕಾರ ಶೇ. 48.49 ರಷ್ಟು ಮಹಿಳೆಯರಿದ್ದು, 2020-21ನೇ ಸಾಲಿನಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಮಹಿಳೆಯರ ಭಾಗವಹಿಸುವಿಕೆ ಶೇ. 48.23 ರಷ್ಟಿರುತ್ತದೆ.
ಕಡಿಮೆ ಭಾಗವಹಿಸುವಿಕೆಯಿರುವ ಗ್ರಾಮ ಪಂಚಾಯಿತಿಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯ ಪ್ರಮಾಣವನ್ನು ಶೇ.5 ರಷ್ಟು ಅಂದರೆ ಒಟ್ಟಾರೆ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಮಹಿಳೆಯರ ಭಾಗವಹಿಸುವಿಕೆ ಪ್ರಮಾಣವನ್ನು ಶೇ.55 ರಷ್ಟು ಹೆಚ್ಚಿಸುವುದರೊಂದಿಗೆ ಮಹಿಳಾ ಪ್ರಧಾನ ಕುಟುಂಬಗಳನ್ನು ಗುರುತಿಸುವುದು, ಕಾಮಗಾರಿ ಸ್ಥಳಗಳನ್ನು ಮಹಿಳೆ ಮತ್ತು ಮಕ್ಕಳ ಸ್ನೇಹಿಯನ್ನಾಗಿ ಮಾಡುವ ಉದ್ದೇಶ ಹೊಂದಲಾಗಿದೆ.
ತಾಲ್ಲೂಕು ಮಟ್ಟದಲ್ಲಿ ಕಾಯಕೋತ್ಸವದ ಅನುಷ್ಠಾನಕ್ಕಾಗಿ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಸಹಾಯಕ ನಿರ್ದೇಶಕರ ನೇತೃತ್ವದಲ್ಲಿ ಎರಡು ಟಾಸ್ಕ್ ಫೋರ್ಸ್ ಸಮಿತಿಗಳು ಕಾರ್ಯನಿರ್ವಹಿಸಲಿವೆ. ಈ ಸಮಿತಿಗಳಲ್ಲಿ ಸಂಬಂಧಪಟ್ಟ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ತಾಲ್ಲೂಕು ಸಾಮಾಜಿಕ ಪರಿಶೋಧನೆ ಸಂಯೋಜಕರು, ತಾಲ್ಲೂಕು ಐ.ಇ.ಸಿ. ಸಂಯೋಜಕರು, ಸಂಬಂಧಪಟ್ಟ ಪಿಡಿಓಗಳು, ಗ್ರಾಮ ಪಂಚಾಯತಿ ಬಿಲ್ ಕಲೆಕ್ಟರ್, ಗ್ರಾಮ ಪಂಚಾಯತಿ ಕ್ಲರ್ಕ್ / ಡಾಟಾ ಎಂಟ್ರಿ ಅಪರೇಟರ್, ಅಂಗನವಾಡಿ ಕಾರ್ಯಕರ್ತೆಯರು, ಸಾಮಾಜಿಕ ಪರಿಶೋಧನೆ ಗ್ರಾಮ ಸಂಪನ್ಮೂಲ ವ್ಯಕ್ತಿಗಳು, ತಾಲ್ಲೂಕು ಎನ್.ಆರ್.ಎಲ್.ಎಮ್. ಸಂಯೋಜಕರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯತಿ ಸಿಬ್ಬಂದಿ ಹಾಗೂ ಮಹಿಳಾ ಕಾಯಕ ಬಂಧುಗಳು ಸದಸ್ಯರಾಗಿ ಇರಲಿದ್ದಾರೆ. ಸಮೀಕ್ಷಾ ಕಾರ್ಯಕರ್ತರು ಗ್ರಾಮ ಮಟ್ಟದಲ್ಲಿ ಪ್ರತಿ ದಿನ ಕನಿಷ್ಟ 50 ಮನೆಗಳಿಗೆ ಭೇಟಿ ನೀಡಿ ಮಹಿಳೆಯರ ಸಮೀಕ್ಷೆಯನ್ನು ನಡೆಸಲಿದ್ದಾರೆ.
ನರೇಗಾ ಯೋಜನೆಯಡಿಯಲ್ಲಿ ಕೆಲಸ ಮಾಡಲು ಇಚ್ಚಿಸುವ ಮಹಿಳೆಯರು ಜಾಬ್ ಕಾರ್ಡ್ ಪಡೆಯಲು ಮತ್ತು ಕೆಲಸದ ಬೇಡಿಕೆಯ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಈ ಯೋಜನೆಯಡಿಯಲ್ಲಿ ತೋಟಗಾರಿಕೆ, ಅರಣ್ಯೀಕರಣ ಮತ್ತು ರೇಷ್ಮೆ ಕಾಮಗಾರಿಗಳಿಗೆ ಗುಂಡಿ ತೆಗೆಯುವುದು, ಬದು ನಿರ್ಮಾಣ, ಕೃಷಿ ಹೊಂಡ ನಿರ್ಮಾಣ, ದನ,ಕುರಿ ಹಾಗೂ ಕೋಳಿಗಳ ಸಾಕಾಣಿಕೆ ಶೆಡ್ ನಿರ್ಮಾಣ ಸೇರಿದಂತೆ ಮಹಿಳೆಯರು ನಿರ್ವಹಿಸಬಹುದಾದ ಇತರೆ ಅಕುಶಲ ಕಾಮಗಾರಿಗಳನ್ನು ನೀಡಲಾಗುವುದು.
ಜಿಲ್ಲೆಯಲ್ಲಿ ಜನವರಿ 15 ರಿಂದ ಮಾರ್ಚ್ 15 ರವರಗೆ ಮಹಿಳಾ ಕಾಯಕೋತ್ಸವ ಅಭಿಯಾನ ನಡೆಯಲಿದೆ. ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ ಮಹಿಳೆಯರು ಭಾಗವಹಿಸುವಿಕೆ ಅತಿ ಕಡಿಮೆ ಇರುವ 04 ಗ್ರಾಮ ಪಂಚಾಯತಿಗಳಲ್ಲಿ ಮೊದಲನೇ ತಿಂಗಳಿನಲ್ಲಿ ಕಾಯಕೋತ್ಸವ ಆಯೋಜಿಸಲಾಗುವುದು ಹಾಗೂ ಎರಡನೇ ತಿಂಗಳಲ್ಲಿ 06 ಗ್ರಾಮ ಪಂಚಾಯತಿಗಳಲ್ಲಿ ಕಾಯಕೋತ್ಸವ ಆಯೋಜಿಸಲು ಆಯ್ಕೆ ಮಾಡಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಆರ್.ರವಿಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಮೂಲಕ ನಮ್ಮೊಂದಿಗೆ ಜೊತೆಯಾಗಿ.

