
ದೊಡ್ಡಬಳ್ಳಾಪುರ: ಕೋವಿಡ್-19 ಮಾರ್ಗಸೂಚಿ ಪ್ರಕಾರ ರಾಷ್ಟ್ರೀಯ ಹಬ್ಬವಾದ ಗಣರಾಜ್ಯೋತ್ಸವ ಆಚರಣೆಗೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಶಾಸಕ ಟಿ.ವೆಂಕಟರಮಣಯ್ಯ ವಿವಿಧ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜ.26ರ ಗಣರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೋವಿಡ್-19 ಸೋಂಕಿನ ಕಾರಣ ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದ ಹಿನ್ನೆಲೆ ಕಾರ್ಯಕ್ರಮದ ಆಯೋಜನೆ, 10 ಮಂದಿ ಸಾಧಕರಿಗೆ ಸನ್ಮಾನ ಕುರಿತು ಸಂಘ ಸಂಸ್ಥೆಗಳ ಸಲಹೆ ಪಡೆದು ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಗೆ ಬಾರದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಪತ್ರ: ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ನಡೆಸಲಾಗುವ ಸಭೆಗಳಿಗೆ ಭಾಗವಹಿಸುವಂತೆ ಪದೇ ಪದೇ ಸೂಚನೆ ನೀಡಿದರು ಜಾಗ್ರತೆ ವಹಿಸದೆ ಬೇಜವಬ್ದಾರಿ ತೋರುವ ಅಧಿಕಾರಿಗಳ ವಿರುದ್ದ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೇರಿದಂತೆ ಆಯಾ ಇಲಾಖೆಯ ಸಚಿವರಿಗೆ ಪತ್ರ ಬರೆಯುವಂತೆ ತಹಶಿಲ್ದಾರ್ ಅವರಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಮಾತನಾಡಿದ ಡಾ.ರಾಜ್ ಕುಮಾರ್ ಅಭಿಮಾನಿಗಳು ಸಂಘದ ನಗರ ಕಾರ್ಯದರ್ಶಿ ಪರಮೇಶ್, ಸಂಘನೆಗಳ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸದೆ ಇರುವುದರಿಂದ ಮತ್ತೊಮ ಸಭೆ ನಡೆಸಿ, ಸಾಧಕರ ಆಯ್ಕೆ ಮಾಡಬೇಕಿದೆ. ಕೋವಿಡ್-19 ಹಿನ್ನೆಲೆಯಲ್ಲಿ ಗಣರಾಜ್ಯದಂದು ಮಕ್ಕಳಿಂದ ಪಂಥ ಸಂಚಲನ ಮಾಡದೆ ಇರುವುದು ಸೇರಿದಂತೆ ಸರಳವಾಗಿ ಆಚರಿಸುವಂತೆ ಸಲಹೆ ನೀಡಿದರು.
ಕರವೇ ಪ್ರವೀಣ್ ಶೆಟ್ಟಿ ಬಣದ ಗೌರವ ಅಧ್ಯಕ್ಷ ಪು.ಮಹೇಶ್ ಮಾತನಾಡಿ, ಸಾಧಕರ ಆಯ್ಕೆ ಸಮಿತಿ ಕೆಲವರಿಗಷ್ಟೆ ಸೀಮಿತವಾಗಿದ್ದು, ಸಾಧಕರ ಆಯ್ಕೆ ಸಮರ್ಪಕವಾಗಿ ನಡೆಯುತ್ತಿಲ್ಲ. ಈ ನಿಟ್ಟಿನಲ್ಲಿ ಹೋಬಳಿಗೊಬ್ಬಂತೆ ಆಯ್ಕೆ ಸಮಿತಿಗೆ ಸೇರಿಸಿ ಅರ್ಹ ಸಾಧಕರಿಗೆ ಸನ್ಮಾನಿಸುವಂತೆ ಸಲಹೆ ನೀಡಿದರು.
ಮುಖಂಡರಾದ ಬಶೀರ್, ಮುನಿರಾಜು ಮಾತನಾಡಿ, ಸಂಘಟನೆಗಳಿಗೆ ಸೂಕ್ತ ಆಹ್ವಾನ ನೀಡಲ್ಲ ಇದು ಬೇಸರದ ವಿಷಯವಾಗಿದೆ, ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಕ್ರಮಕೈಗೊಳ್ಳಬೇಕಿದೆ ಅಲ್ಲದೆ, ಗಣರಾಜ್ಯೋತ್ಸವದಂದು ಕಾರ್ಯಕ್ರಮದಲ್ಲಿ ಮಹಾತ್ಮಗಾಂಧಿಜಿ ಅವರ ಭಾವ ಚಿತ್ರದೊಂದಿಗೆ ಅಂಬೇಡ್ಕರ್ ಅವರ ಭಾವಚಿತ್ರವನ್ನು ಇಟ್ಟು ಪೂಜೆ ಸಲ್ಲಿಸಬೇಕು ಹಾಗೂ ಅರ್ಹರಿಗೆ ಮಾತ್ರ ಸನ್ಮಾನ ಮಾಡಬೇಕಿದೆ. ಕಾಟಾಚಾರದ ಸನ್ಮಾನ ಆಗಬಾರದೆಂದರು.
ಪತ್ರಕರ್ತ ಗಂಗರಾಜ ಶಿರವಾರ ಮತ್ತು ಮಾದಾರ ಚನ್ನಯ್ಯ ಮಹಾಸಭಾದ ತಾಲೂಕು ಅಧ್ಯಕ್ಷ ಆದಿತ್ಯನಾಗೇಶ್ ಮಾತನಾಡಿ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಸಭೆ ಕುರಿತು ಜನತೆಗೆ ಸೂಕ್ತ ಮಾಹಿತಿ ದೊರಕುತ್ತಿಲ್ಲ, ಇದರಿಂದಾಗಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಸಮಾರಂಭಗಳು ಕೇವಲ ರಾಜಕಾರಣಿಗಳು, ಶಾಲಾ ಮಕ್ಕಳಿಗೆ ಸೀಮಿತವಾಗುತ್ತಿವೆ. ಕಾರ್ಯಕ್ರಮಗಳಲ್ಲಿ ತಾಲೂಕಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಅಧಿಕಾರಿಗಳು ಮಾಹಿತಿ ನೀಡಬೇಕಿದೆ ಎಂದರು.
ಕಸಾಪ ತಾಲೂಕು ಅಧ್ಯಕ್ಷೆ ಪ್ರಮೀಳಾ ಮಹದೇವ್ ಮಾತನಾಡಿ, ಗಣರಾಜ್ಯೋತ್ಸವ ಹಬ್ಬದ ದಿನವಾಗಿದ್ದು, ಪಥಸಂಚಲನ ಅಗತ್ಯವಾಗಿದೆ. ಮಕ್ಕಳು ಬೇಡವಾದರೂ, ಪೊಲೀಸ್ ತಂಡವನ್ನಾದರೂ ಬಳಸಿ ಪೆರೇಡ್ ನಡೆಸಬೇಕಿದೆ ಎಂದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ಮತ್ತು ತಹಶಿಲ್ದಾರ್ ಟಿ.ಎಸ್.ಶಿವರಾಜ್ ಮಾತನಾಡಿ, ಸಭೆಗೆ 40 ಮಂದಿ ಸಂಘಟನೆಗಳಿಗೆ ಪತ್ರ ಕಳಿಸಲಾಗಿದ್ದು ಸಭೆಗೆ ಆಹ್ವಾನದ ಕುರಿತು ಯಾವುದೆ ಲೋಪವಾಗಿಲ್ಲ, ಇದುವರೆಗೂ ತಾಲೂಕು ಇಲಾಖೆ ಸ್ವಯಂ ಪ್ರೇರಿತವಾಗಿ ಸಂಘಟನೆಗಳನ್ನು ಗುರುತಿಸಲಾಗಿದೆಯೇ ಹೊರತು ಯಾವುದೇ ಸಂಘಟನೆಗಳು ಮಾಹಿತಿ ನೀಡಿಲ್ಲ ಎಂದರು.
ಕೋವಿಡ್-19 ನಿಯಮದ ಅನ್ವಯ ಗಣರಾಜ್ಯೋತ್ಸವ ಆಚರಣೆ ಮಾಡಬೇಕಿದೆ. ಪೊಲೀಸ್ ಇಲಾಖೆಯಿಂದ ಪಥಸಂಚಲನ ಆಯೋಜಿಸಿ ಕಾರ್ಯಕ್ರಮ ಆಯೋಜಿಸಲಾಗುವುದೆಂದರು ಅಲ್ಲದೆ ಸಭೆಯ ನಿರ್ಣಯ, ಶಾಸಕರ ಸೂಚನೆಯಂತೆ ಸಾಧಕರ ಸಮಿತಿ ರಚನೆ ಮಾಡಿ ಸಾಧಕರ ಆಯ್ಕೆ ಪ್ರಕ್ರಿಯೆ ನಡೆಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಬೈಯಪ್ಪರೆಡ್ಡಿ ಅವರಿಗೆ ಸೂಚಿಸಿದರು.
ಬಿಇಒ ಬೈಯಪ್ಪರೆಡ್ಡಿ ಮಾತನಾಡಿ, ಗಣರಾಜ್ಯೋತ್ಸವದಂದು ಖಾಸಗಿ, ಅನುಧಾನಿತ ಹಾಗೂ ಖಾಸಗಿ ಶಾಲೆಗಳಲ್ಲಿ ನಿಯಮದ ಅನ್ವಯ ಮಹಾತ್ಮ ಗಾಂಧಿ ಅವರ ಭಾವಚಿತ್ರದೊಂದಿಗೆ ಡಾ.ಅಂಬೇಡ್ಕರ್ ಅವರ ಭಾವಚಿತ್ರ ಕಡ್ಡಾಯಗೊಳಿಸಲಾಗಿದೆ. ಯಾವುದೇ ಶಾಲೆ ನಿಯಮ ಮೀರಿದರೆ ಕ್ರಮಕೈಗೊಳ್ಳಲಾಗುವುದೆಂದರು.
ಸಭೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮುರುಡಯ್ಯ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಮೂಲಕ ನಮ್ಮೊಂದಿಗೆ ಜೊತೆಯಾಗಿ.

