
ಬೆಂಗಳೂರು: ಬಿಜೆಪಿ ಸಂಸದ ಬಚ್ಚೇಗೌಡರ ಪುತ್ರ, ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಕಾಂಗ್ರೆಸ್ ಸೇರ್ಪಡೆ ವಿಚಾರ ಮಾತುಕತೆ ಹಂತದಲ್ಲಿದ್ದು ಮುಂದಿನ ಕೆಲವೇ ದಿನಗಳ ಒಳಗೆ ಅಂತಿಮಗೊಳ್ಳಲಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಶನಿವಾರ ಸಿದ್ದರಾಮಯ್ಯರ ಭೇಟಿ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಉಂಟಾದ ಚರ್ಚೆ ಕುರಿತು ಮಾಹಿತಿ ನೀಡಿರುವ ಸಿದ್ದರಾಮಯ್ಯ,
ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡ ಮತ್ತು ನಾವು ಜೊತೆಗೂಡಿ ಗ್ರಾಮ ಪಂಚಾಯತಿ ಚುನಾವಣೆ ಎದುರಿಸಿದ್ದರಿಂದ ಶೇ.70 ಸ್ಥಾನ ಗೆದ್ದಿದ್ದೇವೆ. ಈ ಕಾರಣಕ್ಕಾಗಿ ಶನಿವಾರ ನನ್ನನ್ನು ಭೇಟಿಯಾಗಿ ಧನ್ಯವಾದ ಹೇಳಿದರು. ಅವರ ಕಾಂಗ್ರೆಸ್ ಸೇರ್ಪಡೆ ವಿಚಾರ ಮಾತುಕತೆ ಹಂತದಲ್ಲಿದ್ದು ಮುಂದಿನ ಕೆಲವೇ ದಿನಗಳ ಒಳಗೆ ಅಂತಿಮಗೊಳ್ಳಲಿದೆ.
ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಸಂಬಂಧ ಕುಲಶಾಸ್ತ್ರ ಅಧ್ಯಯನ ಮುಗಿದು ವರದಿ ಬರಲಿ. ಅದನ್ನು ಸಚಿವ ಸಂಪುಟ ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಕೇಂದ್ರ ಸರ್ಕಾರ ಮನವಿಯನ್ನು ತಿರಸ್ಕರಿಸಿದರೆ ಹೋರಾಟ ಅನಿವಾರ್ಯ ಆಗಬಹುದು. ಈಗ ನಡೆಸುತ್ತಿರುವ ಹೋರಾಟಕ್ಕೆ ನನ್ನ ವಿರೋಧ ಖಂಡಿತಾ ಇಲ್ಲ. ಆದರೆ ಇದು ಹೋರಾಟ ಮಾಡುವ ಸಮಯವಲ್ಲ. ಸಮುದಾಯದ ಬಲಪ್ರದರ್ಶನ, ಹೋರಾಟ ಮಾಡಬೇಕಾದ ಸಂದರ್ಭಗಳು ಮುಂದೆ ಬರಲಿದೆ. ಕಾದು ನೋಡೋಣ.
ಯಡಿಯೂರಪ್ಪ ಅವರೇ ಸಿ.ಎಂ ಆಗಿ ಮುಂದುವರೆಯುತ್ತಾರೆ ಎಂದು ಅಮಿತ್ ಶಾ ಹೇಳಿರುವುದು ಬರೀ ಬಾಯಿಮಾತು. ಆರ್.ಎಸ್.ಎಸ್ ನಾಯಕರು ಹೇಳುವ ಪ್ರಕಾರ ಏಪ್ರಿಲ್ ನಂತರ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸ್ತಾರಂತೆ ಎಂದು ಭವಿಷ್ಯ ನುಡಿದಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಮೂಲಕ ನಮ್ಮೊಂದಿಗೆ ಜೊತೆಯಾಗಿ.

