
ದೊಡ್ಡಬಳ್ಳಾಪುರ: ಘಾಟಿ ಕ್ಷೇತ್ರದಲ್ಲಿ ಜ.19 ರಂದು ನಡೆಯಲಿರುವ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮರಥೋತ್ಸ ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ದೇವಾಲಯದ ಆವರಣದ ಒಳಗೆ ನಡೆಯಲಿದೆ. ಹೀಗಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ಡಿವೈಎಸ್ಪಿ ಟಿ.ರಂಗಪ್ಪ ತಿಳಿಸಿದರು.
ಅವರು ಸೋಮವಾರ ಘಾಟಿ ಕ್ಷೇತ್ರದಲ್ಲಿ ನಡೆದ ಪೊಲೀಸ್ ಪೆರೇಡ್ನಲ್ಲಿ ಕುರಿತು ಮಾಹಿತಿ ನೀಡಿ, ಈ ಬಾರಿ ಮಂಗಳವಾರ ರಥೋತ್ಸವ ನಡೆಯುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಬರುವ ನಿರೀಕ್ಷೆ ಇದೆ. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಸಂಪ್ರದಾಯವಾಗಿ ರಥೋತ್ಸವ ದೇವಾಲಯದ ಆವರಣದ ಒಳಗೆ ಮಾತ್ರ ನಡೆಯಲಿದೆ. ಇಲ್ಲಿಗೆ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ.ರಥೋತ್ಸವದ ನಂತರ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ದೇವರ ದರ್ಶನಕ್ಕೆ ಯಾವುದೇ ರೀತಿಯ ನೂಕು ನುಗ್ಗಲು ಉಂಟಾಗದಂತೆ ಜನರನ್ನು ನಿಯಂತ್ರಿಸಲು ಐದು ಜನ ಸರ್ಕಲ್ ಇನ್ಸ್ಪೆಕ್ಟರ್, 10 ಜನ ಸಬ್ಇನ್ಸ್ಪೆಕ್ಟರ್, 20 ಜನ ಸಹಾಯಕ ಸಬ್ಇನ್ಸ್ಪಕ್ಟರ್ ಹಾಗೂ 250 ಜನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಘಾಟಿ ಕ್ಷೇತ್ರಕ್ಕೆ ಬರುವ ಬಸ್ ಸೇರಿದಂತೆ ಎಲ್ಲಾ ಬೃಹತ್ ವಾಹನಗಳಿಗೆ ಗೌರಿಬಿದನೂರು ರಸ್ತೆಯ ಮಾಕಳಿ ಮಾರ್ಗವಾಗಿ ದಾರಿ ಕಲ್ಪಿಸಲಾಗಿದೆ. ಹಾಡೋನಹಳ್ಳಿ ಮಾರ್ಗವಾಗಿ ಬೈಕ್ ಹಾಗೂ ಕಾರುಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ದೇವಾಲಯದ ಸಮೀಪದವರೆಗೆ ಕಾರು ಸೇರಿದಂತೆ ಎಲ್ಲಾ ರೀತಿಯ ವಾಹನಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ಕಾರು, ಬೈಕ್ಗಳ ನಿಲುಗಡೆಗಾಗಿ ಐದು ಕಡೆಗಳಲ್ಲಿ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ಪೊಲೀಸ್ ಬಂದೋಬಸ್ತ್ ಸೇರಿದಂತೆ ಘಾಟಿ ಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ಕೈಗೊಳ್ಳಲಾಗಿರುವ ಸಿದ್ದತೆಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ಸಂಜೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. (ಸಂಗ್ರಹ ಚಿತ್ರ ಬಳಸಲಾಗಿದೆ)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ.

