
ಬ್ರಿಸ್ಬೇನ್: ಬಾರ್ಡರ್ – ಗವಾಸ್ಕರ್ ಟ್ರೋಫಿಯ ಟೆಸ್ಟ್ ಸರಣಿಯಲ್ಲಿ ಭಾರತ 2-1 ಮುನ್ನಡೆ ಸಾಧಿಸುವ ಮೂಲಕ ಕಾಂಗರೂಗಳ ನಾಡಿನಲ್ಲಿ ಟೆಸ್ಟ್ ಸರಣಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದೆ.
ಭಾರತ ತಂಡದ ವಿಕೆಟ್ ಕೀಪರ್ ರಿಷಭ್ಪಂತ್ ಹಾಗೂ ಶುಭಮನ್ ಗಿಲ್ರ ಆಟದಿಂದಾಗಿ ರಹಾನೆ ತಂಡವು 2-1 ರಿಂದ ಐತಿಹಾಸಿಕ ಗೆಲುವು ಸಾಧಿಸಿದೆ. ಆಸ್ಟ್ರೇಲಿಯಾ ನೀಡಿದ್ದ 328 ರನ್ಗಳ ಗುರಿಯನ್ನು ಬೆನ್ನಟ್ಟಿದ್ದ ಟೀಂ ಇಂಡಿಯಾಗೆ ನಿನ್ನೆ ಮಳೆ ಕಾಡಿತಾದರೂ ಇಂದು ದಿನಪೂರ್ತಿ ಭಾರತದ ಯುವ ಬ್ಯಾಟ್ಸ್ಮನ್ಗಳು ಆಸ್ಟ್ರೇಲಿಯಾದ ಅನುಭವಿ ಬೌಲಿಂಗ್ ಪಡೆಯನ್ನು ದಂಡಿಸುವ ಮೂಲಕ ರಹಾನೆ ತಂಡ ಕಪ್ ಅನ್ನು ತನ್ನಲ್ಲೇ ಉಳಿಸಿಕೊಂಡಿದೆ.
ಇಂದು ಬೆಳಗ್ಗೆ ಇನ್ನಿಂಗ್ಸ್ ಆರಂಭಿಸಿದ ಉಪನಾಯಕ ರೋಹಿತ್ ಶರ್ಮಾ ಹಾಗೂ ಗಿಲ್ ಆಕ್ರಮಣಕಾರಿ ಆಟ ಪ್ರದರ್ಶಿಸಲು ಮುಂದಾದರಾದರೂ ರೋಹಿತ್ 3 ರನ್ ಗಳಿಸಿ ಕುಮ್ಮಿನ್ಸ್ ಬೌಲಿಂಗ್ನಲ್ಲಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು.
ಪಂತ್- ಪೂಜಾರ ತಾಳ್ಮೆಯ ಆಟ: ರಹಾನೆ ಔಟಾದ ನಂತರ ಕ್ರೀಸ್ಗೆ ಇಳಿದ ರಿಷಭ್ಪಂತ್ ಅವರು ಪೂಜಾರರೊಂದಿಗೆ ಕೂಡಿಕೊಂಡು ಆಸ್ಟ್ರೇಲಿಯಾ ಬೌಲಿಂಗ್ ಪಡೆಯನ್ನು ದಂಡಿಸಿದರು. ಈ ಜೋಡಿಯು ಟೀ ವಿರಾಮದ ವೇಳೆಗೆ ತಂಡದ ಮೊತ್ತವನ್ನು 183 ರನ್ ಗಡಿ ಮುಟ್ಟಿಸಿದರು.
ಟೀ ವಿರಾಮದ ನಂತರ ಆಕ್ರಮಣಕಾರಿ ಆಟಕ್ಕೆ ಮುಂದಾದ ಪೂಜಾರ 56 ರನ್ ಗಳಿಸಿ ಕುಮ್ಮಿನ್ಸ್ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯು ಬಲೆಗೆ ಬಿದ್ದಾಗ ತಂಡದ ಮೊತ್ತ 228 ರನ್ ಗಳಾಗಿತ್ತು. ನಂತರ ಬಂದ ಮಯಾಂಕ್ ಆಗರ್ವಾಲ್ 9 ರನ್ ಗಳಿಸಿ ನಿರಾಸೆಯಿಂದ ಪೆವಿಲಿಯನ್ನತ್ತ ಹೆಜ್ಜೆ ಹಾಕಿದರು.
ಅರ್ಧಶತಕ ಬಾರಿಸಿದ ಬಳಿಕ ಪೂಜಾರ ಹೆಚ್ಚುಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. 211 ಎಸೆತಗಳಲ್ಲಿ 56 ರನ್ ಗಳಿಸಿ ಎಲ್ಬಿ ಬಲೆಗೆ ಪೂಜಾರ ಸಿಲುಕಿದರು. ಮಯಾಂಕ್ ಅಗರ್ವಾಲ್ ಮತ್ತೊಮ್ಮೆ ವೈಫಲ್ಯ ಅನುಭವಿಸಿ 9 ರನ್ಗೆ ನಿರ್ಗಮಿಸಿದರು. ಆದರೆ, ಇತ್ತ ರಿಷಭ್ ಪಂತ್ ತಂಡದ ಗೆಲುವಿಗೆ ಹೋರಾಟ ನಡೆಸುತ್ತಲೇ ಇದ್ದರು.
ಅಂತಿಮ ಹಂತದಲ್ಲಿ ವಾಷಿಂಗ್ಟನ್ ಸುಂದರ್ ಜೊತೆಗೂಡಿದ ಪಂತ್ ಆಕರ್ಷಕ ಅರ್ಧಶತಕ ಸಿಡಿಸಿ ಬಿರುಸಿನ ಬ್ಯಾಟಿಂಗ್ ಮಾಡಿ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು. ಭಾರತ 97 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 329 ರನ್ ಬಾರಿಸಿ 3 ವಿಕೆಟ್ಗಳ ಜಯ ತನ್ನದಾಗಿಸಿತು.
ಸ್ಕೋರ್ ವಿವರ: ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್: 369, ದ್ವಿತೀಯ ಇನ್ನಿಂಗ್ಸ್ 294 ರನ್
ಭಾರತ ಮೊದಲ ಇನ್ನಿಂಗ್ಸ್:336, ದ್ವಿತೀಯ ಇನ್ನಿಂಗ್ಸ್ 329/7
(ಪೊಟೋ ಕೃಪೆ: ಇಂಡಿಯನ್ ಕ್ರಿಕೆಟ್ ಟೀಮ್)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ.

