
ದೊಡ್ಡಬಳ್ಳಾಪುರ: ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನೂತನ ಅಧ್ಯಕ್ಷ ನಾರಾಯಣಗೌಡರ ಅಧ್ಯಕ್ಷತೆಯಲ್ಲಿ ವಿಶೇಷ ಸಭೆಯನ್ನು ನಡೆಸಲಾಯಿತು.
ಈ ವೇಳೆ ಬೇಸಿಗೆ ಆರಂಭದ ಹಿನ್ನೆಲೆ ಕುಡಿಯುವ ನೀರಿನ ಪೂರೈಕೆ, ಹನಿ ನೀರಾವರಿ ಸಬ್ಸಿಡಿ ಪಡೆಯಲು ಜಾರಿಗೆ ಬಂದಿರುವ ವಿಶೇಷ ಸೌಲಭ್ಯ, ನಿರಂತರ ಜ್ಯೋತಿ ವಿಸ್ತರಣೆ, ನೀಲಗಿರಿ ತೆರವಿನಿಂದ ಭಿತ್ತನೆ ಹೆಚ್ಚಳ ಮುಂತಾದ ಮಹತ್ವದ ವಿಚಾರಗಳು ಚರ್ಚೆಯಾದವು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ನಾರಾಯಣಗೌಡ, ನನ್ನ ಅಧಿಕಾರಾವಧಿ ಎಷ್ಟು ದಿನವಿರಲಿದೆ ಎಂಬುದು ಮುಖ್ಯವಲ್ಲ. ಆದರೆ ಜನಪರ ಕಾರ್ಯಗಳನ್ನು ಉಳಿದ ಅವಧಿಯಲ್ಲಿ ಮಾಡಬೇಕಾದ ಜವಬ್ದಾರಿ ನನ್ನ ಮೇಲಿದ್ದು, ಅಧಿಕಾರಿಗಳ ಸಹಕಾರ ಅಗತ್ಯವಾಗಿದೆ. ಬೇಸಿಗೆ ಆರಂಭವಾಗುತ್ತಿರುವುದರಿಂದ ಕುಡಿಯುವ ನೀರಿನ ಪೂರೈಕೆ ಕುರಿತು ಹೆಚ್ಚಿನ ಮುಂಜಾಗ್ರತೆ ವಹಿಸಬೇಕಿರುವುದರಿಂದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಯೋಗೀಶ್ ಅವರಿಗೆ ಸೂಚಿಸಿದರು.
ಈ ವೇಳೆ ಮಾತನಾಡಿದ ಮಾಜಿ ಆದ್ಯಕ್ಷ ಡಿ.ಸಿ.ಶಶಿಧರ್, ಕೊಳವೆ ಬಾವಿ ಕೊರೆಸಲು ಕ್ರಿಯಾ ಯೋಜನೆ ಅಗತ್ಯವಾಗಿರುವುದರಿಂದ ತ್ವರಿತವಾಗಿ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ. ಜನರ ಸಮಸ್ಯೆ ಕುರಿತು ಜನ ಪ್ರತಿನಿಧಿಗಳಾಗಿ ಸ್ಥಳೀಯ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತೇವೆ. ಆದರೆ ಹಿರಿಯ ಅಧಿಕಾರಿಗಳು ಕ್ರಿಯಾ ಯೋಜನೆಯಿಲ್ಲದೆ ಕೊಳವೆ ಬಾವಿಗೆ ಅನುಮತಿ ನೀಡದ ಕಾರಣ ಸ್ಥಳೀಯ ಅಧಿಕಾರಿಗಳು ಅಡಕತ್ತರಿಯಲ್ಲಿ ಸಿಲುಕುತ್ತಿದ್ದಾರೆ. ಈ ಕುರಿತು ತಾಲೂಕು ಪಂಚಾಯಿತಿಯಿಂದ ತ್ವರಿತ ಕ್ರಮ ಅಗತ್ಯವಾಗಿದೆ. ಕ್ರಿಯಾ ಯೋಜನೆ ತಯಾರಿಸಿ ಅನುದಾನ ಬಿಡುಗಡೆ ಯಾದ ನಂತರ ಕೊಳವೆ ಬಾವಿ ಕೊರೆಸುವುದಾದರೆ ನೀರಿಲ್ಲದೆ ಜನತೆ ಪರದಾಡುವಂತಾಗಲಿದೆ ಎಂದರು.
ಇವರಿಗೆ ಜೊತೆಯಾದ ಮಾಜಿ ಅಧ್ಯಕ್ಷ ಶ್ರೀವತ್ಸ, ನೀರಿನ ಸಮಸ್ಯೆ ಕುರಿತು ತ್ವರಿತವಾಗಿ ಬಗೆಹರಿಸುವುದು ನಮ್ಮೆಲ್ಲರ ಜವಬ್ದಾರಿಯಾಗಿದೆ. ಬೇಸಿಗೆಯಲ್ಲಿ ತೀವ್ರಗೊಳ್ಳುವ ನೀರಿನ ಸಮಸ್ಯೆಗೆ ಕ್ರಿಯಾ ಯೋಜನೆಯಿಂದಾಗುವ ವಿಳಂಭವಾಗಲಿದೆ. ಈ ಮುಂಚಿನ ಅಧಿಕಾರಿಗಳು ಅಗತ್ಯ ಇರುವೆಡೆ ಕೊಳವೆ ಬಾವಿ ಕೊರೆಸಿ ನಂತರ ಪ್ರಕ್ರಿಯೆ ನಡೆಸುತ್ತಿದ್ದರು. ಅದರೆ ಅಧಿಕಾರಿಗಳು ಬದಲಾದರೆ ನಿಯಮಗಳು ಸಹ ಬದಲಾಗುವುದು ಖಂಡನೀಯ. ಅಕ್ರಮಗಳು ನಡೆದರೆ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಲಿ.ಆದರೆ, ಈ ಹಿಂದೆ ಮಾಡುತ್ತಿದ್ದ ಪ್ರಕ್ರಿಯೆಯಂತೆಯೇ ನೀರಿನ ಪೂರೈಕೆ ಸಮಸ್ಯೆ ಬಗೆ ಹರಿಸಬೇಕಿದೆ. ಇಲ್ಲವಾದರೆ ಸಮಸ್ಯೆ ಮತ್ತಷ್ಟು ಉಲ್ಬಣವಾಗಲಿದೆ.
ಜನವರಿ ತಿಂಗಳ ಆರಂಭದಲ್ಲಿಯೇ ತಾಲೂಕಿನ 86 ಗ್ರಾಮಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಕ್ರಿಯಾ ಯೋಜನೆಗೆ ಅನುಮತಿ ದೊರಕುವಷ್ಟರಲ್ಲಿ ಮತ್ತಷ್ಟು ಗ್ರಾಮಗಳಲ್ಲಿ ಸಮಸ್ಯೆ ಉಂಟಾಗುತ್ತದೆ ಆಗೇನು ಮಾಡುವುದು. ತಾಪಂವತಿಯಿಂದ ಕೊಳವೆ ಬಾವಿ ಕೊರೆಸಲು ತುರ್ತು ಬಳಕೆಗೆ ಅನುದಾನ ಮೀಸಲಿಡಬೇಕು.ಇಲ್ಲವೆ ತ್ವರಿತವಾಗಿ ಕೊಳವೆ ಬಾವಿ ಕೊರೆಸಿ ನಂತರ ಕ್ರಿಯಾ ಯೋಜನೆ ಪ್ರಕ್ರಿಯೆ ಮಾಡಬೇಕು. ನನ್ನ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಮಿತಿ ಮೀರಿದೆ ಮೂರು ದಿನದ ಒಳಗಾಗಿ ನೀರಿನ ಸಮಸ್ಯೆ ಬಗೆ ಹರಿಸದಿದ್ದರೆ ಸಾವಿರ ಜನರ ಕರೆತಂದು ತಾಲೂಕು ಪಂಚಾಯಿತಿ ಬಳಿ ಪ್ರತಿಭಟನೆ ಮಾಡಿಸಲಾಗುವುದು. ಬರಲಿ ಡಿಸಿ ಬರ್ತಾರೋ ಜಿಲ್ಲಾಪಂಚಾಯಿತಿ ಸಿಇಒ ಬರ್ತಾರೋ ಬಂದು ಸಮಸ್ಯೆ ಬಗೆ ಹರಿಸಲಿ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ತಾಪಂ ಇಒ ಮುರುಡಯ್ಯ ಮಾತನಾಡಿ, ತಾಲೂಕಿನ 34 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರಿನ ಪೂರೈಕೆ ಮಾಡಲಾಗಿದೆ. ಅದರ ವೆಚ್ಚ 73 ಲಕ್ಷ ನೀಡಬೇಕಿದೆ. ಆದರೆ,ಬಿಡುಗಡೆಯಾಗಿರುವುದು ಕೇವಲ 19 ಲಕ್ಷ ಮಾತ್ರ. ಬಾಕಿ ಹಣ ಬಿಡುಗಡೆಯಾಗದೇ ಓದರೆ ಟ್ಯಾಂಕರ್ ಮೂಲಕವು ನೀರಿನ ಪೂರೈಕೆ ಕಷ್ಟವಾಗಲಿದೆ ಎಂದರು.
ಈ ವಿಚಾರವಾಗಿ ನೀರಿನ ಸಮಸ್ಯೆ ಬಗೆ ಹರಿಸಲು ಮೊದಲು ಕೊಳವೆ ಬಾವಿ ಕೊರೆಸಿ ನಂತರ ಕ್ರಿಯಾ ಯೋಜನೆ ಪ್ರಕ್ರಿಯೇ ಮಾಡುವಂತೆ ತಾಲೂಕು ಪಂಚಾಯಿತಿಯಿಂದ ನಿರ್ಣಯ ಕೈಗೊಂಡು ನಿಯೋಗ ತೆರಳಿ ಜಿಪಂ ಸಿಇಒ ಅವರಿಗೆ ಸಲ್ಲಿಸಲು ತೀರ್ಮಾನಿಸಲಾಯಿತು.
ತೋಟಗಾರಿಕೆ ಇಲಾಖೆ ಕುರಿತು ಮಾಹಿತಿ ನೀಡಿದ ಎಇಇ ಶ್ರೀನಿವಾಸ್, ತೋಟಗಾರಿಕೆ ಇಲಾಖೆಯಿಂದ 926 ಕುಟುಂಬಕ್ಕೆ ಕಿಚನ್ ಗಾರ್ಡನ್ ಯೋಜನೆಯಡಿಯಲ್ಲಿ ಸಸಿಗಳನ್ನು ನೀಡಲಾಗಿದೆ. ನರೇಗಾ ಯೋಜನೆಯಡಿಯಲ್ಲಿ ನಿಗದಿತ ದಿನಗಳಿಗಿಂತ ಹೆಚ್ಚಿನ ದಿನಗಳನ್ನು ಕೈಗೊಳ್ಳಲಾಗಿದೆ. ಕೃಷಿಕರಿಗೆ ತುಂತುರು ನೀರಾವರಿ ಅಳವಡಿಸಿಕೊಳ್ಳಲು ಇಲಾಖೆ ಉತ್ತಮವಾದ ಯೋಜನೆಯನ್ನು ಜಾರಿಗೆ ತಂದಿದ್ದು, ತುಂತುರು ಹನಿ ಯೋಜನೆ ಅಳವಡಿಸಿಕೊಳ್ಳುವ ರೈತ ಸಬ್ಸಿಡಿ ಹಣವನ್ನು ಬಿಟ್ಟು ಬಾಕಿ ಹಣವನ್ನು ಮಾತ್ರ ಕಟ್ಟಿದರೆ. ಆ ಫಲಾನುಭವಿಗಳಿಗೆ ಕಂಪನಿಯೇ ಹನಿ ನೀರಾವರಿ ಅಳವಡಿಸಿ. ಬಾಕಿ ಹಾಣವನ್ನು ಇಲಾಖೆಯಿಂದ ಒಡೆಯುತ್ತಾರೆ. ಇದರಿಂದ ಇಷ್ಟು ದಿನಗಳ ಕಾಲ ಸಬ್ಸಿಡಿಗಾಗಿ ಕಚೇರಿಗೆ ರೈತರು ಸುತ್ತುವುದು ತಪ್ಪಲಿದೆ ಎಂದರು. ಇದೇ ಯೋಜನೆ ರೇಷ್ಮೆ ಇಲಾಖೆಯಲ್ಲಿಯು ಇದೆ ಎಂದು ರೇಷ್ಮೆ ಇಲಾಖೆಯ ಎಡಿಎ ಉದಯ್ ತಿಳಿಸಿದರು.
ಸರ್ಕಾರದ ಸಬ್ಸಿಡಿಗಾಗಿ ರೈತರು ಕಚೇರಿಗಳಿಗೆ ಅಲೆಯಬೇಕಾದ ಅನಿರ್ವಾರ್ಯತೆ ಈ ಯೋಜನೆಯಿಂದ ತಪ್ಪಲ್ಲಿದ್ದು ಹೆಚ್ಚಿನ ಪ್ರಚಾರ ನೀಡಿ. ತಾಲೂಕಿನಲ್ಲಿ ಹೆಚ್ಚಿನ ರೈತರಿಗೆ ಈ ಸೌಲಭ್ಯ ದೊರಕಿಸಬೇಕೆಂದು ಅಧ್ಯಕ್ಷ ನಾರಾಯಣಗೌಡ ಸೂಚನೆ ನೀಡಿದರು.
ಆರೋಗ್ಯ ಇಲಾಖೆಯ ಕುರಿತು ಮಾಹಿತಿ ನೀಡಿದ ತಾಲೂಕು ಆರೋಗ್ಯಾಧಿಕಾರಿ ಡಾ.ಪರಮೇಶ್ವರ, ಕೋವಿಡ್-19 ಹಿನ್ನೆಲೆ ನಿಲ್ಲಿಸಲಾಗಿದ್ದ ಕುಟುಂಬ ಕಲ್ಯಾಣ ಶಸ್ತ್ರ ಚಿಕಿತ್ಸೆ, ಲಸಿಕೆ ಕಾರ್ಯಗಳು ಮರು ಆರಂಭವಾಗಿದ್ದು, ಕೆಲವೇ ದಿನಗಳಲ್ಲಿ ಪಲ್ಸ್ ಪೊಲೀಯೋ ಅಭಿಯಾನ ಆರಂಭವಾಗಲಿದೆ. ತಾಲೂಕಿನಲ್ಲಿ ಕರೊನಾ ಸೋಂಕು ಕಡಿಮೆಯಾಗಿದ್ದರು ಶೂನ್ಯಕ್ಕೆ ಬರುತ್ತಿಲ್ಲ. ಪ್ರತಿನಿತ್ಯ 500,600 ಮಂದಿಗೆ ತಪಾಸಣೆ ನಡೆಸಲಾಗುತ್ತಿದೆ. ಕೋವಿಡ್-19 ಲಸಿಕೆ ವಿತರಣೆಯನ್ನು ಗ್ರಾಮೀಣ ವ್ಯಾಪ್ತಿಗೆ ವಿಸ್ತರಿಸಿದ್ದು, ಮಂಗಳವಾರದಿಂದ. ಗ್ರಾಮೀಣ ವ್ಯಾಪ್ತಿಯ 7 ಕಡೆ ಆಶಾ, ಅಂಗನವಾಡಿ ಮತ್ತು ಆರೋಗ್ಯ ಸಿಬ್ಬಂದಿಗೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕಂದಾಯ, ಪೊಲೀಸ್ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೂ ಲಸಿಕೆ ನೀಡಲು ಕ್ರಿಯಾ ಯೋಜನೆ ಪ್ರಗತಿಯಲ್ಲಿದೆ ಎಂದರು.
ಶಿಕ್ಷಣ ಇಲಾಖೆ ಕುರಿತು ಮಾಹಿತಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಬೈಯಪ್ಪರೆಡ್ಡಿ, ಕೋವಿಡ್-19 ನಿಯಮದಂತೆ ಸರ್ಕಾರ ಆದೇಶದ ಅನ್ವಯ ವಿದ್ಯಾಗಮವನ್ನು ಸಂಖ್ಯೆಗೆ ಅನುಗುಣವಾಗಿ ಬದಲಿ ವ್ಯವಸ್ಥೆ ಮಾಡಿಕೊಂಡು ತರಗತಿಗಳನ್ನು ನಡೆಸಲಾಗುತ್ತಿದೆ. ಈ ವರ್ಷದ ಎಸ್ ಎಸ್ ಎಲ್ಸಿ ಪರೀಕ್ಷೆ ನಡೆಸಲು ಇಲಾಖೆ ಮುಂದಾಗಿದ್ದು, ಆ ಕುರಿತು ವಿದ್ಯಾರ್ಥಿಗಳ ಸಿದ್ದರನ್ನಾಗಿಸಲಾಗುತ್ತಿದೆ. ಕೋವಿಡ್-19 ಹಿನ್ನೆಲೆಯಲ್ಲಿ ಅಕ್ಷರ ದಾಸೋಹ ನಿಲ್ಲಿಸಿರುವ ಕಾರಣ ಅದರ ಪಡಿತರವನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ ಎಂದರು.
ಕೃಷಿ ಇಲಾಖೆ ಕುರಿತು ಮಾಹಿತಿ ನೀಡಿದ ಎಡಿಎ ಸುಶೀಲಮ್ಮ, ತಾಲೂಕಿನಲ್ಲಿ ಈ ವರ್ಷ ವಾಡಿಕೆ ಮೀರಿದ ಮಳೆಯಾಗಿದ್ದು, ನೀಲಗಿರಿ ಕಟಾವು ಮಾಡಿರುವ ಕಾರಣ ಹೆಚ್ಚಿನ ಬಿತ್ತನೆಯಾಗಿದೆ. ರಾಗಿ ಖರೀದಿ ಫೆ.2 ಅಥವಾ 3ರಂದು ಆರಂಭವಾಗಳಿದ್ದು, ಬೆಂಬಲ ಬೆಲೆಯಲ್ಲಿ ರಾಗಿ ಮಾರಲು ಇಚ್ಚಿಸುವ ರೈತರ ನೊಂದಣಿ ಮಾಡಲು ಉಂಟಾದ ಗೊಂದಲವನ್ನು ದೂರ ಮಾಡಲು ಹೋಬಳಿ ಕೇಂದ್ರಗಳಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ನೊಂದಣಿ ಹೆಚ್ಚಾದಲಿ…ದಾಖಲೆಗಳನ್ನು ಪಡೆದು, ರಾತ್ರಿ ವೇಳೆಯು ನೋಂದಣಿ ಕಾರ್ಯ ಮಾಡಲು ಸಿಬ್ಬಂದಿಗಳನ್ನು ನೇಮಿಸಲಾಗಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆಯ ಕುರಿತು ಸಹಾಯ ನಿರ್ದೇಶಕ ಸೋಮಶೇಖರ್ ಮಾಹಿತಿ ನೀಡಿ, ಸರ್ಕಾರದ ಆದೇಶದ ನಂತರ ಜ.1ರಿಂದ ಆರಂಭವಾದ ಇಲಾಖೆಯ ವಸತಿ ನಿಲಯಗಳಲ್ಲಿ ಈಗಾಗಲೇ 10ನೇ ತರಗತಿಯ 143 ಮಕ್ಕಳು ವಾಸವಿದ್ದು, ಊಟ ಮತ್ತು ವಸತಿ ವ್ಯವಸ್ಥೆಯನ್ನು ಕೋವಿಡ್-19 ನಿಯಮದಡಿಯಲ್ಲಿ ಕೈಗೊಳ್ಳಲಾಗಿದೆ. ಅಲ್ಲದೆ ನ.17 ರಿಂದ 48 ಮಂದಿ ದ್ವಿತಿಯ ಪಿಯುಸಿ ಹಾಗೂ ಅಂತಿಮ ಪದವಿ ವಿದ್ಯಾರ್ಥಿಗಳು ವಸತಿ ನಿಲಯದಲ್ಲಿದ್ದು ಸೌಲಭ್ಯ ಪಡೆಯುತ್ತಿದ್ದಾರೆ. ವಸತಿ ನಿಲಯಗಳಿಗೆ ಸೇರಲು ಹಾಗೂ ವಿದ್ಯಾರ್ಥಿ ವೇತನ ಪಡೆಯಲು ಆನ್ಲೈನ್ ಮೂಲಕ ಅವಕಾಶ ಕಲ್ಪಿಸಲಾಗಿದ್ದು, ಈ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವಂತೆ ಶಿಕ್ಷಕರಿಗೆ ಮನವಿ ಮಾಡಲಾಗಿದೆ. ಕಾನೂನು ಪದವಿ ಪಡೆವ ವಿದ್ಯಾರ್ಥಿಗಳಿಗೆ ಶಿಷ್ಯ ವೇತನಕ್ಕೆ ಜ.19ರಂದು ಅಲ್ಪ ಪ್ರಮಾಣದಲ್ಲಿ ಬಂದಿದ್ದು ಉಳಿದ ಅನುದಾನ ಕೊರತೆಯಿರುವುದರಿಂದ ಇಲಾಖೆಗೆ ಪತ್ರ ಬರೆಯಲಾಗಿದೆ. ಅಲ್ಲದೆ ಅಂತರ್ ಜಾತಿ ವಿವಾಹಕ್ಕೆ ನೀಡುವ ಪ್ರೋತ್ಸಾಹ ಧನಕ್ಕು ಅನುದಾನ ಬಿಡುಗಡೆಯಾಗಿಲ್ಲ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಡಿಪಿಒ ಎಸ್.ಅನಿತಾಲಕ್ಷ್ಮೀ ಮಾಹಿತಿ ನೀಡಿ, ಕೋವಿಡ್-19 ಕಾರಣ ನಿಲ್ಲಿಸಲಾಗಿದ್ದ ಅಂಗನವಾಡಿ ಕೇಂದ್ರಗಳನ್ನು ಸರ್ವೋಚ್ಚ ನ್ಯಾಯಾಲಯದ ಆದೇಶದ ಅನ್ವಯ ಫೆ.1ರಿಂದ ಆರಂಭಿಸುವ ಸಾಧ್ಯತೆಯಿದ್ದು, ಈ ನಿಟ್ಟಿನಲ್ಲಿ ಪೂರ್ವ ಸಿದ್ದತೆ ನಡೆಸಲಾಗುತ್ತಿದೆ. ತಾಲೂಕಿನ ಚೀಲೇನಹಳ್ಳಿ ಮತ್ತು ರಾಂಪುರದ ಅಂಗನವಾಡಿಗಳಲ್ಲಿ ಸಹಾಯಕಿಯ ಹುದ್ದೆ ಖಾಲಿ ಇದ್ದು, ಯಾರು ಅರ್ಜಿ ಸಲ್ಲಿಸದ ಕಾರಣ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದೆಂದರು.
ಉಳಿದಂತೆ ವಿದ್ಯುತ್, ಸಾಮಾಜಿಕ ಅರಣ್ಯ, ಪಶು ಪಾಲನಾ ಇಲಾಖೆ, ಆಯುಶ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇಲಾಖಾವಾರು ವರದಿಯನ್ನು ಮಂಡಿಸಿದರು.
ಸಭೆಯಲ್ಲಿ ತಾಪಂ ಉಪಾಧ್ಯಕ್ಷೆ ಯಶೋಧಮ್ಮಶಿವಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷೆ ಚನ್ನಮ್ಮ ರಾಮಲಿಂಗ ಸೇರಿದಂತೆ ಸದಸ್ಯರು, ವಿವಿಧ ಇಲಾಖೆಗಳ ಮುಖಂಡರು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ.

