
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಹಾಗೂ ದೇವನಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ನಮೂನೆ-50 ಹಾಗೂ 53ರ ಅರ್ಜಿ ಸಲ್ಲಿಸಿರುವ ಬಗರ್ ಹುಕ್ಕುಂ ಸಾಗುವಳಿದಾರರಿಗೆ ಸರ್ಕಾರವು ಕೂಡಲೇ ಸಾಗುವಳಿ ಚೀಟಿ ನೀಡುವಂತೆ ಕರ್ನಾಟಕ ಭೂ ಹಕ್ಕುದಾರರ ವೇದಿಕೆ ರಾಜ್ಯಧ್ಯಕ್ಷ ಎಸ್.ವಿ.ನರಸಪ್ಪ ಆಗ್ರಹಿಸಿದ್ದಾರೆ.
ಈ ಕುರಿತು ನಗರದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಅಸೂಚನೆಯಂತೆ ದೇವನಹಳ್ಳಿ ಮತ್ತು ದೊಡ್ಡಬಳ್ಳಾಪುರದ ವಿಧಾನ ಸಭಾ ಕ್ಷೇತ್ರಗಳಲ್ಲಿ 2020ರ ಮೇ 16 ಹಾಗೂ ಅಕ್ಟೋಬರ್ 15ರಲ್ಲಿ ರಚನೆಯಾಗಿರುವ ಸಾಗುವಳಿ ಸಕ್ರಮೀಕರಣ ಸಮಿತಿಗಳ ಸಭೆಯನ್ನು ವಾರಕೊಮ್ಮೆ ನಡೆಸಿ ನಮೂನೆ 53ರಲ್ಲಿ ಅರ್ಜಿ ಸಲ್ಲಿಸಿರುವ ಅರ್ಹ ಪಲಾನುಭವಿಗಳಿಗೆ ಸಾಗುವಳಿ ಚೀಟಿ ನೀಡಬೇಕಿದೆ.
2012 ರಿಂದ 2019ರವರೆಗೆ ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿ ಸಾಗುವಳಿ ಸಕ್ರಮೀಕರಣ ಸಮಿತಿಯಲ್ಲಿ ಮಂಜೂರು ಆಗಿರುವ ಮತ್ತು ಟೆನೆಂಟ್ ತೆರಿಗೆ ಕಟ್ಟಿರುವ ಸಾಗುವಳಿದಾರರಿಗೆ ಕೂಡಲೇ ಸಾಗುವಳಿ ಚೀಟಿ ನೀಡಬೇಕಿದ್ದು,ಪ್ರತಿ ಎರಡು ತಿಂಗಳಿಗೊಮ್ಮೆ ತಹಸೀಲ್ದಾರರೇ ಸಾಗುವಳಿ ಚೀಟಿಳನ್ನು ವಿತರಿಸಬೇಕಿದೆ.
ಕಂದಾಯ ಮತ್ತು ಅರಣ್ಯ ಭೂಮಿಯ ಗೊಂದಲಗಳಿಗೆ ಪರಿಹಾರ ನೀಡಲು ಜಂಟಿ ಸರ್ವೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ. 2019ರಲ್ಲಿ ಲೋಕಸಭಾ ಚುನಾವಣೆಯ ಕಾರಣದಿಂದ ನಮೂನೆ 57ರಲ್ಲಿ ಅರ್ಜಿಗಳನ್ನು ಸಲ್ಲಿಸುವ ಪ್ರಕ್ರಿಯೆಯನ್ನು ಮೊಟಕುಗೊಳಿಸುವುದರಿಂದ ಕೂಡಲೇ ಬಗರ್ ಹುಕುಂ ಸಾಗುವಳಿದಾರರಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ವೇದಿಕೆಯ ಜಿಲ್ಲಾ ಸಂಚಾಲಕರಾದ ಎ.ನಾಗರತ್ನ ಮಾತನಾಡಿ, ಬಗರ್ ಹುಕ್ಕುಂ ಸಾಗುವಳಿದಾರರಿಗೆ ಸರ್ಕಾರವು ಕೂಡಲೇ ಸಾಗುವಳಿ ಚೀಟಿ ನೀಡುವಂತೆ, ತಹಸೀಲ್ದಾರ್, ಉಪವಿಭಾಗಾಕಾರಿಗಳು, ಜಿಲ್ಲಾಕಾರಿಗಳು ಹಾಗೂ ಶಾಸಕರಿಗೂ ಮನವಿ ಮಾಡಲಾಗಿದೆ. ಆದರೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಅರ್ಹರು ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ಉಂಟಾಗಿದೆ. ಕೂಡಲೇ ಈ ಬಗ್ಗೆ ಗಮನ ಹರಿಸಬೇಕು ಎಂದರು.
ಸಭೆಯಲ್ಲಿ ರೈತ ಸಂಘದ ಮುಖಂಡರಾದ ವಾಸುದೇವ, ಶಿರವಾರ ರವಿ, ಸುಬ್ರಹ್ಮಣ್ಯ, ಮಯೂರ ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ.

