
ದೊಡ್ಡಬಳ್ಳಾಪುರ: ಭಾರತದ ಚುನಾವಣೆ ವ್ಯವಸ್ಥೆ ಜಗತ್ತಿನಲ್ಲಿಯೇ ಮಾದರಿಯಾಗಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯಬಲ್ಲ ಆರಂಭಿಕ ಹಂತವೇ ಚುನಾವಣಾ ಪ್ರಕ್ರಿಯೆಯಾಗಿದ್ದು, ಸುಭದ್ರ ಸರ್ಕಾರಕ್ಕಾಗಿ ಮತದಾನ ಮಾಡುವುದು ಪ್ರತಿಯೊಬ್ಬ ಮತದಾರರ ಕರ್ತವ್ಯವಾಗಿದೆ ಎಂದು ಉಪವಿಭಾಗಾಧಿಕಾರಿ ಅರುಳ್ ಕುಮಾರ್ ತಿಳಿಸಿದರು.
ಭಾರತ ಚುನಾವಣಾ ಆಯೋಗ, ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ಆಡಳಿತ, ವಕೀಲರ ಸಂಘ, ಸಹಯೋಗದಲ್ಲಿ ನಗರದ ಡಾ.ರಾಜ್‍ಕುಮಾರ್ ಕಲಾಮಂದಿರದಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇಶದ ಚುನಾವಣೆ ವ್ಯವಸ್ಥೆಯನ್ನು ವಿಶ್ವಸಂಸ್ಥೆಯೇ ಪ್ರಶಂಸೆ ಮಾಡಿದೆ. ಇಂತಹ ವ್ಯವಸ್ಥೆ ಹಾಳಾಗದಂತೆ ಸರಿದಾರಿಯಲ್ಲಿ ನಡೆಸಿಕೊಂಡು ಹೋಗಬೇಕಾಗಿರುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ. ಪ್ರಜಾಪ್ರಭುತ್ವ ಹರಿಯುವ ನೀರಿನಂತೆ. ಉತ್ತಮ ಆಡಳಿತದ ಜವಾಬ್ದಾರಿ ಮತದಾರರ ಮೇಲಿದೆ. ಮತದಾನದ ಮಹತ್ವ ಹಾಗೂ ಭಾರತ ಚುನಾವಣಾ ಆಯೋಗ ಸ್ಥಾಪಿಸಿದ ನೆನಪಿಗಾಗಿ 2011 ರಿಂದ ರಾಷ್ಟ್ರೀಯ ಮತದಾರರ ದಿನಾಚರಣೆ ಮಾಡಲಾಗುತ್ತಿದೆ. 18 ವರ್ಷ ತುಂಬಿದವರು ಮತದಾರರಾಗಿ ನೋಂದಾಯಿಸಿಕೊಳ್ಳುವುದಷ್ಟೇ ಅಲ್ಲದೇ ಮತದಾನ ಪ್ರಾಮುಖ್ಯವನ್ನು ಅರಿಯಬೇಕಿದೆ ಎಂದರು.
ವಕೀಲರಾದ ಸುಜಾತ ಮತ್ತು ರವಿಕುಮಾರ್ ಅವರು ಮತದಾರ ದಿನಾಚರಣೆಯ ಪ್ರಾಮುಖ್ಯತೆ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮತದಾರರ ಜಾಗೃತಿಗಾಗಿ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಉತ್ತಮವಾಗಿ ಕಾರ್ಯ ನಿರ್ವಹಿಸಿದ ಮತಗಟ್ಟೆ ಅಧಿಕಾರಿಗಳಾದ ಎನ್.ಅರುಣ್ ಕುಮಾರ್,ರಾಜಮ್ಮ, ಶಿವಣ್ಣ, ಪ್ರಕಾಶ್, ಟಿ.ಎ.ಜಯರಾಂ ಅವರಿಗೆ ಪ್ರಶಂಸಾ ಪತ್ರ ನೀಡಲಾಯಿತು.
ನೂತನವಾಗಿ ನೋಂದಾಯಿಸಿದ 5 ಮತದಾರರಿಗೆ ಗುರುತಿನ ಚೀಟಿಗಳನ್ನು ವಿತರಿಸಲಾಯಿತು. ಮತದಾನದ ಕುರಿತಾಗಿ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಟಿ.ಎಸ್.ಶಿವರಾಜ್, ಡಿವೈಎಸ್‍ಪಿ ಟಿ.ರಂಗಪ್ಪ, ನಗರಸಭೆ ಪೌರಾಯುಕ್ತ ರಮೇಶ್ ಎಸ್.ಸುಣಗಾರ್, ಕೊಂಗಾಡಿಯಪ್ಪ ಕಾಲೇಜಿನ ಪ್ರಾಂಶುಪಾಲ ಡಿ.ಎನ್.ಬಾಬು, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಚುನಾವಣಾ ಶಿರಸ್ತೇದಾರ್ ಕೆ.ಕಿರಣ್ ಕುಮಾರ್, ಶಿಕ್ಷಕ ಚಂದ್ರಪ್ಪ ಮತ್ತಿತರರು ಭಾಗವಹಿಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ

