
ನಮ್ಮ ಪ್ರಗತಿಪರ, ಜೀವಪರ, ಚಿಂತಕ, ಸಾಕ್ಷಿಪ್ರಜ್ಞೆ, ಸಂವಿಧಾನ ರಕ್ಷಕ, ಇತ್ಯಾದಿತ್ಯಾದಿ ಸ್ವಘೋಷಿತ ಹೋರಾಟಗಾರರೆಂಬ ಟೌನ್ಹಾಲ್ ಗಿರಾಕಿಗಳು ಯಾವುದಾದರೊಂದು ವಿಷಯಕ್ಕೆ ಎದ್ದೂಬಿದ್ದು ಸೋಷಿಯಲ್ ಮೀಡಿಯದಲ್ಲಿ ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದರೆ, ಅದು “ಹೆವಿಲಿ ಫಂಡೆಡ್” ಅಭಿಯಾನಗಳು ಎಂದು ಅರ್ಥ ಮಾಡಿಕೊಳ್ಳಿ. ಉದಾಹರಣೆಗೆ ನಿನ್ನೆ ದೆಹಲಿಯಲ್ಲಿ ಗಣತಂತ್ರ ಸಂಭ್ರಮದ ಜಾಗದಲ್ಲಿ ರೈತರ ಹೆಸರಲ್ಲಿ ನಡೆದ ಹಿಂಸಾತ್ಮಕ ಹೋರಾಟ/ಪ್ರತಿಭಟನೆ. ಬೆಳಗಿನಿಂದ ಈ ಅಭಿಯಾನಕ್ಕೆ ಬಿಟ್ಟೂಬಿಡದೆ ಸೋಷಿಯಲ್ ಮೀಡಿಯಾದಲ್ಲಿ ಬೆಂಬಲಿಸುತ್ತಿರುವ ಒಂದಷ್ಟು ಜನರನ್ನು ಸೂಕ್ಷ್ಮವಾಗಿ ಗಮನಿಸಿ. ಅವರು ಹೆಜ್ಜೆ ಹೆಜ್ಜೆ ಈ ಅಭಿಯಾನದ ವಿವರಗಳನ್ನು ಹಂಚಿಕೊಳ್ಳುತ್ತ ತಮ್ಮ ಅನುಯಾಯಿಗಳಿಗೆ, ಕಾಮ್ರೇಡ್ಗಳಿಗೆ ಸೂಚನೆ ಕೊಡುತ್ತಲೇ ಇದ್ದಾರೆ. ಅವರಷ್ಟೂ ಜನಕ್ಕೂ ಈ ಅಭಿಯಾನ ಯಾವ ದಿಕ್ಕನ್ನು ತೆಗೆದುಕೊಳ್ಳುತ್ತದೆ ಎಂಬುದು ಅತ್ಯಂತ ಸ್ಪಷ್ಟವಾಗಿ ಗೊತ್ತಿತ್ತು. ಒಂದಲ್ಲಾ ಒಂದು ರೀತಿಯಲ್ಲಿ ಪೊಲೀಸ್ ವ್ಯವಸ್ಥೆಯನ್ನೂ ಸರಕಾರವನ್ನೂ ಕೆರಳಿಸಬೇಕು ಎಂಬುದೇ “ಹೋರಾಟಗಾರ”ರ ಹಂಚಿಕೆಯಾಗಿತ್ತು. ಅದಕ್ಕಾಗಿ ಯಾವ ರಸ್ತೆಯಲ್ಲಿ ಪ್ರವೇಶವನ್ನು ಪೊಲೀಸರು ನಿರಾಕರಿಸಿದ್ದರೋ ಅಲ್ಲೇ ನುಗ್ಗಲಾಯಿತು. ರಸ್ತೆಗೆ ಅಡ್ಡಲಾಗಿಟ್ಟಿದ್ದ ಬಸ್ಸುಗಳನ್ನು ಗುದ್ದಿ ಪುಡಿಗುಟ್ಟಲಾಯಿತು. ಪೊಲೀಸರ ಮೇಲೆ ಯರ್ರಾಬಿರ್ರಿಯಾಗಿ ಟ್ರ್ಯಾಕ್ಟರುಗಳನ್ನು ಓಡಿಸಲಾಯಿತು. ಪೊಲೀಸರಿಗೆ ತಮ್ಮ ಲಾಟಿ, ಕೋಲುಗಳಿಂದ ಬಾರಿಸಲಾಯಿತು. ಆಳುದ್ದದ ಖಡ್ಗಗಳನ್ನು ಝಳಪಿಸುತ್ತ ಬ್ಯಾರಿಕೇಡುಗಳನ್ನು ಹಾರಲಾಯಿತು. ಕೊನೆಗೆ ಕೆಂಪುಕೋಟೆಗೆ ಮುತ್ತಿಗೆ ಹಾಕಿ, ಅವರ ಭಯೋತ್ಪಾದಕ ಸಂಘಟನೆಯ ಧ್ವಜವನ್ನೂ ಹಾರಿಸಲಾಯಿತು. ಈ ಪ್ರತಿಯೊಂದು ನಡೆಯೂ “ನೀ ತಾಂಟ್ರೆ ಬಾ ತಾಂಟ್” ಎಂಬ ಪಂಥಾಹ್ವಾನವೇ ಆಗಿತ್ತು ಎಂಬುದು ಈ ಇಷ್ಟೂ ಘಟನೆಗಳನ್ನು ನೋಡಿದ ಯಾರಿಗೇ ಆದರೂ ಅರ್ಥವಾಗುವ ಸಂಗತಿ.
ಸೋಷಿಯಲ್ ಮೀಡಿಯಾದಲ್ಲಿ ಒಂದು ಸುತ್ತು ಹಾಕಿ ಬನ್ನಿ. ಈ ಪರಗತಿಪರ ಜೀವಪರ ಸಾಕ್ಷಿಪ್ರಜ್ಞೆಗಳಲ್ಲಿ ಒಂದೇ ಒಂದು ಪ್ರಜ್ಞೆಯಾದರೂ ಈ ಘಟನಾವಳಿಗಳಲ್ಲಿ ಒಂದನ್ನಾದರೂ ಖಂಡಿಸಿದೆಯಾ? (1) ಸರಕಾರ ಮೇಲಿಂದ ಮೇಲೆ, ಪುನಃ ಪುನಃ, ಮತ್ತೆ ಮತ್ತೆ ಚರ್ಚೆಗೆ ಕರೆದರೂ ಈ “ರೈತರು” ಯಾಕೆ ಹೋಗಲಿಲ್ಲ – ಎಂದು ಒಬ್ಬೇ ಒಬ್ಬ ಬುದ್ಧಿಜೀವಿ ಕೇಳಿದ್ದಾನಾ? (2) ನಿಮ್ಮ ಈ ಹಿಂಸಾತ್ಮಕ ಪ್ರತಿಭಟನೆಯನ್ನು ಗಣತಂತ್ರದಿನವೇ ಯಾಕೆ ಇಟ್ಟುಕೊಳ್ತೀರಿ? ಯಾಕೆ ಸಂವಿಧಾನಕ್ಕೆ ಅವಮಾನ ಮಾಡ್ತೀರಿ? – ಎಂದು ಒಬ್ಬೇ ಒಬ್ಬ ಬುದ್ಧಿಜೀವಿ ಕೇಳಿದನಾ? (3) ಪೊಲೀಸರು ನಿಮಗೆ ರಾಜಧಾನಿ ತಲುಪುವುದಕ್ಕೆ ಒಂದು ಮಾರ್ಗ ಸೂಚಿಸಿದರೂ ನೀವು ಅದನ್ನು ಬಿಟ್ಟು ಬೇರೇ ರಸ್ತೆಗಳಲ್ಲೇ ಯಾಕೆ ನುಗ್ಗಿದಿರಿ – ಎಂದು ಒಬ್ಬೇ ಒಬ್ಬ ಎಮಿನೆಂಟ್ ಇಂಟಲೆಕ್ಚ್ಯುಯಲ್ ಕೇಳಿದನಾ? (4) ನಿಮ್ಮ ಬೇಡಿಕೆ ಕೃಷಿಕಾಯ್ದೆ ವಾಪಸ್ ಹೋಗಬೇಕು ಅನ್ನೋದೋ ಅಥವಾ ಖಾಲಿಸ್ತಾನ ಬೇಕು ಅನ್ನೋದೋ – ಎಂದು ಒಬ್ಬೇ ಒಬ್ಬ ಚಿಂತಕ ಬಾಯಿಬಿಟ್ಟು ಉಸುರಿದನಾ? (5) ನಿಮ್ಮ ಪ್ರತಿಭಟನೆಯಲ್ಲಿ ಖಡ್ಗಗಳನ್ನೇಕೆ ಝಳಪಿಸುತ್ತಿದ್ದೀರಿ? ಟ್ರ್ಯಾಕ್ಟರನ್ನೇಕೆ ಜನಸಂದಣಿಯ ಮೇಲೆ ಯದ್ವಾತದ್ವಾ ಓಡಿಸುತ್ತಿದ್ದೀರಿ? ಜೀವ ತೆಗೆಯುವ ಈ ಮಾರಣಾಂತಿಕ ಹಿಂಸಾತ್ಮಕ ಹೋರಾಟ ಯಾಕೆ – ಎಂದು ಯಾವೊಬ್ಬ ಬುದ್ಧಿಜೀವಿಯಾದರೂ ಬಾಯಿ ತೆರೆದು ಕೇಳಿದನಾ? (6) ರೆಡ್ ಫೋರ್ಟ್ ಯಾವ ಇತಿಹಾಸಪುರುಷನೇ ಕಟ್ಟಿರಲಿ, ಸದ್ಯಕ್ಕೆ ಅದು ನಮ್ಮ ಪ್ರಜಾಪ್ರಭುತ್ವದ ಪ್ರತೀಕ; ನಮ್ಮ ಗಣತಂತ್ರದ ದ್ಯೋತಕ.. ನಿಮ್ಮ ಪ್ರತಿಭಟನೆಯ ನೆಪದಲ್ಲಿ ಅದರ ಘನತೆಯನ್ನು ಮಣ್ಣುಗೂಡಿಸಬೇಡಿ – ಎಂದು ಯಾವ ಮಗನಾದರೂ ಈ ಬಗ್ಗೆ ತುಟಿಬಿಚ್ಚಿದನಾ? ಇಲ್ಲ! ಇಲ್ಲ! ಇಲ್ಲ!
ಅದರ ಬದಲು ಈ ಬುದ್ಧಿಜೀವಿಗಳ ಬಳಗದಿಂದ ಸಾವಿರ ಸಾವಿರ ಸಂಖ್ಯೆಯಲ್ಲಿ ಚಿತ್ರವಿಚಿತ್ರ ತರ್ಕಗಳು, ಸ್ಪಷ್ಟೀಕರಣಗಳು, ಸಮರ್ಥನೆಗಳು ಬರತೊಡಗಿವೆ. ರೈತ ಚಳುವಳಿ ಯಶಸ್ವಿಯಾಗಲಿ, ಸರಕಾರಕ್ಕೆ ಬುದ್ಧಿ ಬರಲಿ… ಒಬ್ಬ ಬುದ್ಧಿಜೀವಿ ಬೊಗಳುತ್ತಾನೆ. ಇಲ್ಲಿ ಯಾವುದನ್ನೂ ಕೆಡವಿಲ್ಲ; ಕೆಡವದೇ ಬಾವುಟ ಹಾರಿಸಿದ್ದೇವೆ – ಇನ್ನೊಬ್ಬ ಪುಡಿ ಚಿಂತಕ ಗಳಹುತ್ತಾನೆ. ಕೆಂಪುಕೋಟೆಯನ್ನು ಅದ್ಯಾರೋ ಕಂಪೆನಿಗೆ ಗುತ್ತಿಗೆ ಕೊಟ್ಟಿದಾರಂತೆ; ಅಲ್ಲಿ ನಾವು ಅತಿಕ್ರಮಣ ಮಾಡಿದರೆ ಏನು ತಪ್ಪು – ಮತ್ತೊಬ್ಬ ವಿಕೃತ ಚಿಂತಕ ತನ್ನ ನಾಲಗೆ ಹರಿಬಿಡುತ್ತಾನೆ. ಇದೇ ಹೋರಾಟವನ್ನು ಈ ಖಾಲಿಸ್ತಾನಿ ಭಯೋತ್ಪಾದಕ ರೈತರ ಬದಲು ಬೇರೆಯವರು ಮಾಡಿದ್ದರೆ ಅಂಬೇಡ್ಕರ್, ಸಂವಿಧಾನ, ಪ್ರಜಾಪ್ರಭುತ್ವ, ದೇಶದ ಮರ್ಯಾದೆ, ಗಣತಂತ್ರ, ಸರಕಾರ, ಶಾಸಕಾಂಗ, ಅಸ್ಮಿತೆ, ಪರಂಪರೆ, ಸಂಸ್ಕೃತಿ ಎಂದೆಲ್ಲ ಪುಂಖಾನುಪುಂಖವಾಗಿ ಪುಂಗುತ್ತಿದ್ದ ಮಹಾನ್ ಮಹಾನ್ ಚಿಂತಕರೆಲ್ಲ ಈಗ ಅವೆಲ್ಲ ಶಬ್ದಗಳು ತಪ್ಪಿಯೂ ಬರದಂತೆ ಬಹಳ ಎಚ್ಚರಿಕೆಯಿಂದ ತಮ್ಮ ತರ್ಕಗಳನ್ನು ವ್ಯವಸ್ಥಿತವಾಗಿ ನೇಯುತ್ತಿದ್ದಾರೆ.
ಇಷ್ಟೆಲ್ಲ ನಡೆಯುವಾಗ ನಾವು ಅರ್ಥಮಾಡಿಕೊಳ್ಳಬೇಕಾದ್ದು ಒಂದೇ – ಈ ಹೋರಾಟಕ್ಕೆ ಬಹಳ ಒಳ್ಳೆಯ ಪೇಮೆಂಟ್ ಆಗಿದೆ. ಕೇಂದ್ರ ಸರಕಾರವನ್ನು ಶತಾಯಗತಾಯ ಬೀಳಿಸಬೇಕೆಂದು ಟೊಂಕ ಕಟ್ಟಿ ನಿಂತಿರುವ ವ್ಯವಸ್ಥೆಗಳಿಂದ ಬಹಳ ದೊಡ್ಡ ಪ್ರಮಾಣದ ಒಳ್ಳೆಯ ಫಂಡಿಂಗ್ ಆಗಿದೆ. ಈ ನಾಟಕ ಇನ್ನೂ ಮುಗಿದಿಲ್ಲ. ಇಂದು ಒಂದಷ್ಟು ಪತ್ರಿಕಾಲಯಗಳಲ್ಲಿ ಶಬ್ದಜಾಲ ತಯಾರಾಗುತ್ತಿದೆ. ನಟ್ಟ ನಡುರಾತ್ರಿಯಲ್ಲೆ ಬಿಸಿ ಬಿಸಿ ಇಂಕಿನ ವಾಸನೆ ಹೊಡೆಸಿಕೊಂಡು ಹೊಸ ಹೊಸ ಸುಳ್ಳುಗಳು, ವರ್ಣರಂಜಿತ ಕಥೆಗಳು, ಪುಗ್ಗೆಯಂಥ ಉರುಟುರುಟು ತರ್ಕಗಳು ಪತ್ರಿಕೆಗಳ ಪುಟಪುಟಗಳಲ್ಲಿ ಬರಲಿವೆ. ಸಂಪಾದಕೀಯಗಳು ಇಂದಿನ ದಾಂಧಲೆಗೆ ಸಮರ್ಥನೆ ಬರೆಯಲಿವೆ. ಪೇಮೆಂಟ್ ಚೆನ್ನಾಗಿ ಆಗಿರುವ ಪತ್ರಿಕೆಗಳಲ್ಲಂತೂ ಇದೊಂದು ಬೃಹತ್ ಜನಹೋರಾಟ ಎಂಬ ರೀತಿಯಲ್ಲಿ, ಇಂದಿನ ಪುಡಿಗಲಾಟೆಯ ಚಿತ್ರಗಳೇ ದೊಡ್ಡದಾಗಿ ಮುಖಪುಟವನ್ನು ಅಲಂಕರಿಸಲಿವೆ.
ವೈದ್ಯ, ಇಂಜಿನಿಯರ್, ಲಾಯರ್ ಇತ್ಯಾದಿ ಆಗುವುದಕ್ಕಿಂತ “ಮೋಟಿವೇಶನಲ್ ಗುರು” ಆಗುವುದು ಅತ್ಯುತ್ತಮ ಕೆರಿಯರ್ ಆಪ್ಷನ್ ಎಂದು ಗುರು ಗೋಪಾಲ್ ದಾಸರು ಹೇಳುತ್ತಿದ್ದರು. “ಇಲ್ಲ ಸ್ವಾಮೀ, ಕಾಮ್ರೇಡ್ ಹೋರಾಟಗಾರ ಆಗುವುದು ಅಂತ ತಿದ್ದಿಕೊಳ್ಳಿ” ಎಂದು ಅವರಿಗೆ ಹೇಳಬೇಕು…(ಕೃಪೆ: ರೋಹಿತ್ ಚಕ್ರತೀರ್ಥ FB)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ

