
ಬೆಂ.ಗ್ರಾ.ಜಿಲ್ಲೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬಡತನ ರೇಖೆಗಿಂತ ಕೆಳಗಿರುವ(ಬಿ.ಪಿ.ಎಲ್.) ಕಾರ್ಡ್‌ದಾರರ ಎಲ್ಲಾ ಕುಟುಂಬಗಳಿಗೆ ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಕಾರ್ಡ್‌ಗಳನ್ನು ವಿತರಿಸಿ ನಿಗದಿತ ಅವಧಿಯಲ್ಲಿ ಪ್ರಗತಿ ಸಾಧಿಸಲು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ನಡೆದ ಆಯುಷ್ಮಾನ್ ಭಾರತ್-ಆರೋಗ್ಯ ಕನಾ೯ಟಕ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯ ವ್ಯಾಪ್ತಿಯಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯಲು ಆಧಾರ್ ಕಾರ್ಡ್, ಬಿ.ಪಿ.ಎಲ್. ರೇಷನ್ ಕಾರ್ಡ್ ಅಥವಾ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಕಾರ್ಡ್ ಹಾಗೂ ಹೊರ ರಾಜ್ಯದ ರೋಗಿಗಳಿಗೆ ಪ್ರಧಾನಮಂತ್ರಿ ಜನ ಆರೋಗ್ಯ ಕಾರ್ಡ್(ಪಿ.ಎಂ.ಜೆ) ಹೊಂದಿರುವವರಿಗೂ ಉಚಿತ ಚಿಕಿತ್ಸೆ ನೀಡಬೇಕು ಎಂದು ತಿಳಿಸಿದರು.ತಾಲ್ಲೂಕುವಾರು ಪ್ರಗತಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಅವರು ನೆಲಮಂಗಲ, ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಆಯುಷ್ಮಾನ್ ಭಾರತ್ ಕರ್ನಾಟಕ ಕಾರ್ಡ್ ಯೋಜನೆಯಡಿ ದಾಖಲಾಗಿದ್ದ ರೋಗಿಗಳ ಮಾಹಿತಿಯನ್ನು ಆರೋಗ್ಯ ಮಿತ್ರ ಆ್ಯಪ್ ನಲ್ಲಿ ಕಾಲ-ಕಾಲಕ್ಕೆ ಸರಿಯಾಗಿ ಅಪ್‌ಲೋಡ್ ಮಾಡುವಂತೆ ತಿಳಿಸಿದರಲ್ಲದೆ, ನೆಲಮಂಲ ಮತ್ತು ಹೊಸಕೋಟೆ ತಾಲ್ಲೂಕುಗಳ ಆಸ್ಪತ್ರೆಯಲ್ಲಿ ಆಯುಷ್ಮಾನ್ ಭಾರತ್ ಕರ್ನಾಟಕ ಕಾರ್ಡ್ ಯೋಜನೆಯಡಿ ದಾಖಲಾಗುವ ರೋಗಿಗಳ ದಾಖಲೆಗಳನ್ನು ಸೂಕ್ತವಾಗಿ ಪರಿಶೀಲಿಸಿ, ಸಂಗ್ರಹಿಸುತ್ತಿರುವುದು ಉತ್ತಮ ಕೆಲಸವಾಗಿದೆ ಎಂದರು.
ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆಯಡಿ ಆಸ್ಪತ್ರೆಗಳಿಗೆ ಅನುದಾನ ಸಿಗಲಿದ್ದು, ನಿಗದಿತ ಅವಧಿಯಲ್ಲಿ ಸಮಗ್ರ ಮಾಹಿತಿಯನ್ನು ಸಾಫ್ಟ್‌ವೇರ್‌ನಲ್ಲಿ ದಾಖಲಿಸಬೇಕು. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇ.26ರಷ್ಟು ಪ್ರಗತಿ ಸಾಧಿಸಿದ್ದು, ತಾಲ್ಲೂಕು ಆರೋಗ್ಯಾಧಿಕಾರಿಗಳು ಪ್ರಗತಿ ಪರಿಶೀಲನೆ ನಡೆಸಿ, ಜಿಲ್ಲೆ ಹಾಗೂ ತಾಲ್ಲೂಕು ಆರೋಗ್ಯ ಅಧಿಕಾರಿಗಳು ನಿರಂತರ ಸಂಪರ್ಕ ಸಾಧಿಸಿ, ಸಹಕಾರದಿಂದ ಕಾರ್ಯನಿರ್ವಹಿಸುವ ಮೂಲಕ ಜಿಲ್ಲೆಗೆ ಉತ್ತಮ ರ್ಯಾಂಕ್ ತರುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದರು. ಕುಟುಂಬಗಳವಾರು ಅಂಕಿಅಂಶಗಳ ಮಾಹಿತಿ ಕಲೆಹಾಕಿ ವರದಿ ನೀಡಲು ತಿಳಿಸಿದರಲ್ಲದೆ, ಪ್ರತಿ ವಾರ ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆ ಪ್ರಗತಿ ಕುರಿತು ಚರ್ಚೆ ನಡೆಸಲಾಗುವುದೆಂದು ತಿಳಿಸಿದರು.
ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಶಾಂತಲ ಅವರು ಮಾತನಾಡಿ 2020ರ ಡಿಸೆಂಬರ್ ಮಾಸಾಂತ್ಯಕ್ಕೆ ಸರ್ಕಾರಿ ಆಸ್ಪತ್ರೆಗಳು, ಸೇವಾ ಸಿಂಧೂ ಕೇಂದ್ರಗಳು ಹಾಗೂ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಒಟ್ಟು ಜಿಲ್ಲೆಯಲ್ಲಿ 2,67,337 ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಕಾರ್ಡ್‌ಗಳನ್ನು ವಿತರಿಸಲಾಗಿದೆ ಎಂದು ಸಭಗೆ ಮಾಹಿತಿ ನೀಡಿದರು.
ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕ ಇಲಾಖೆಯ ಕಲ್ಯಾಣಾಧಿಕಾರಿ ಜಗದೀಶ್ ಅವರು ಮಾತನಾಡಿ, ಜಿಲ್ಲೆಯ ದಿವ್ಯಾಂಗರಿಗೆ ವಿಶಿಷ್ಟ ಗುರುತಿನ ಚೀಟಿ ನೀಡಲು ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿ.ಆರ್.ಡಬ್ಲ್ಯೂ. ಮೂಲಕ ಮಾಹಿತಿ ನೀಡಲಾಗುತ್ತಿದ್ದು, ಮೊಬೈಲ್ ಮೂಲಕ ಅಜಿ೯ ಸಲ್ಲಿಸಬಹುದಾಗಿದೆ ಎಂದಾಗ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು, ವೇಳಾಪಟ್ಟಿಯೊಂದನ್ನು ತಯಾರಿಸಿ, ವಿವಿಧ ಅಂಗ ವೈಕಲ್ಯತೆ ಕುರಿತು ನುರಿತ ವಿಶೇಷ ವೈದ್ಯರನ್ನು ಆಸ್ಪತ್ರೆಗಳಿಗೆ ಕರೆಸಿ, ವಿಕಲಚೇತನರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ, ಶೇಕಡಾವಾರು ಎಷ್ಟು ರಷ್ಟು ಅಂಗವೈಕಲ್ಯ ಹೊಂದಿದ್ದಾರೆಂದು ದಾಖಲಿಸಿ, ಗುರುತಿನ ಚೀಟಿ ನೀಡಲು ನಿರ್ದೇಶಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಮಂಜುಳಾದೇವಿ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಧರ್ಮೇಂದ್ರ, ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ರಾಜ್ಯ ಸಂಯೋಜಕರಾದ ಡಾ.ಶಕೀಬ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಂಯೋಜಕರಾದ ಡಾ.ಸುಷ್ಮಾ, ಜಿಲ್ಲಾ ತಂಬಾಕು ನಿಯಂತ್ರಣ ಅಧಿಕಾರಿ ಡಾ.ವಿದ್ಯಾ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ತಾಲ್ಲೂಕು ಆರೋಗ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ. ನಮ್ಮೊಂದಿಗೆ ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.

