
ದೊಡ್ಡಬಳ್ಳಾಪುರ: ಬೆಳಗಾವಿ ಕುರಿತು ಎಂ.ಇ.ಎಸ್.ನ ಕಾರ್ಯಕರ್ತರು ಪದೇ ಪದೇ ಖ್ಯಾತೆ ಮಾಡುತ್ತಿರುವುದು ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಉದ್ಧಟತನದ ಹೇಳಿಕೆ ಖಂಡಿಸಿ ಇಂದು ದೊಡ್ಡಬಳ್ಳಾಪುರ ನಗರದ ರೈಲ್ವೆ ನಿಲ್ದಾಣದಲ್ಲಿ ಕನ್ನಡಪರ ಸಂಘಟನೆಗಳ ಒಕ್ಕೂಟದ ವತಿಯಿಂದ ರೈಲು ತಡೆ ಚಳುವಳಿಯನ್ನು ಆಯೋಜಿಸಲಾಗಿತ್ತು.
ಆದರೆ ರೈಲು ತಡೆಗೆ ಪೊಲೀಸರು ಅವಕಾಶ ನೀಡದೆ ಸಂಘಟನೆಗಳು, ಪೊಲೀಸರ ನಡುವೆ ನಿಲ್ದಾಣದ ಒಳಹೋಗಲು ತಡೆಯೊಡ್ಡಿದ್ದರಿಂದ,ತೀವ್ರ ಚರ್ಚೆ ನಡೆಯಿತು. ಕೊನೆಗೆ ರೈಲು ನಿಲ್ದಾಣದ ಪ್ರವೇಶ ದ್ವಾರದ ಬಳಿಗೆ ಹೋಗಲು ಅನುವು ಮಾಡಿ ಕೊಟ್ಟಿದ್ದರಿಂದ ಅಲ್ಲಿಯೇ ಪ್ರತಿಭಟನೆ ನಡೆಸಿದರು. ರೈಲು ನಿಲ್ದಾಣದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡಪರ ಸಂಘಟನೆಗಳ ಒಕ್ಕೂಟದ ತ.ನ.ಪ್ರಭುದೇವ, ಸಂಜೀವ್ ನಾಯಕ್, ಡಿ.ಪಿ.ಆಂಜಿನಯ್ಯ, ಪು.ಮಹೇಶ್, ಶ್ರೀನಗರ ಬಶೀರ್, ರಮೇಶ್, ಪರಮೇಶ್, ನಾಗರಾಜ್, ಕರ್ನಾಟಕದ ಅವಿಭಾಜ್ಯ ಅಂಗವಾದ ಬೆಳಗಾವಿ ವಿಚಾರದಲ್ಲಿ ಎಂ.ಇ.ಎಸ್.ನ ಕಾರ್ಯಕರ್ತರು ಪದೇಪದೇ ಖ್ಯಾತೆ ಮಾಡುತ್ತಿರುವುದು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಉದ್ಧಟತನದ ಮಾತುಗಳನ್ನು ಆಡುತ್ತಿದ್ದರು ರಾಜ್ಯ ಸರ್ಕಾರ ಯಾವುದೇ ದಿಟ್ಟ ಉತ್ತರ ನೀಡದಿರುವುದು ಬೇಸರದ ಸಂಗತಿ.
ರಾಜ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಂಸದರು ಆಯ್ಕೆಯಾದರು ಕರ್ನಾಟಕದ ಪರವಾದ ಯೋಜನೆಗಳ ಜಾರಿಗೆ ಮುಂದಾಗುತ್ತಿಲ್ಲ. ಇದರ ಬೆನ್ನಲ್ಲೆ, ಇತ್ತೀಚೆಗೆ ರಾಜ್ಯ ಸರ್ಕಾರ ಕನ್ನಡಿಗರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿ ಮರಾಠಿ ಅಭಿವೃದ್ಧಿ ಪ್ರಾಧಿಕಾರ ರಚಿಸಿರುವುದು ಖಂಡನೀಯ ಈ ಕೂಡಲೇ ಮರಾಠ ಅಭಿವೃದ್ಧಿ ಪ್ರಾಧಿಕಾರವನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಸಂಘಟನೆಯ ಮುಖಂಡರು ಮಹಾರಾಷ್ಟ್ರ, ಕೇಂದ್ರ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿದರು.
ಈ ವೇಳೆ ಗುರುರಾಜು, ನವೀನ್ ದೇವ್, ನಂಜಪ್ಪ, ಸೂರಿ, ವೆಂಕಟೇಶ್, ಶಿವು ಮತ್ತಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ. ನಮ್ಮೊಂದಿಗೆ ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.

