
ದೊಡ್ಡಬಳ್ಳಾಪುರ: ದೇವಾಂಗ ಸಮುದಾಯದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ, ಸಮುದಾಯಕ್ಕೆ ನೆರವು ನೀಡಬೇಕೆಂದು ಒತ್ತಾಯಿಸಿ, ದೇವಾಂಗ ಮಂಡಲಿ ನೇತೃತ್ವದಲ್ಲಿ ದೇವಾಂಗ ಸಮುದಾಯದಿಂದ ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ದೇವಾಂಗ ಮಂಡಲಿ ಕಾರ್ಯದರ್ಶಿ ಎ.ಎಸ್.ಕೇಶವ, ರಾಜ್ಯದಲ್ಲಿ ದೇವಾಂಗ ಸಮುದಾಯ 30 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯಿದೆ. ಈ ಹಿಂದೆ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಯೋಜನೆಗಳಲ್ಲಿ ದೇವಾಂಗ ಸಮುದಾಯಕ್ಕೆ ಮೀಸಲಿತ್ತು. ಆದರೆ 5 ವರ್ಷಗಳಿಂದ ಮೀಸಲಾತಿ ರದ್ದುಪಡಿಸಲಾಗಿದೆ.
ದೇವಾಂಗ ಸಮುದಾಯ ನೇಕಾರಿಕೆಯನ್ನು ವೃತ್ತಿಯಾಗಿರಿಸಿಕೊಂಡಿದ್ದು, ನೇಖಾರರು ನೇಯ್ದ ಬಟ್ಟೆಗಳಿಗೆ ಸೂಕ್ತ ಬೆಲೆ ಸಿಕ್ಕದೇ ನೇಯ್ಗೆ ಉದ್ಯಮ ಡೋಲಾಯಮಾನವಾಗಿದೆ. ಸಾಂಪ್ರದಾಯಿಕ ನೇಕಾರಿಕೆ ಆಧುನಿಕತೆಗೆ ತೆರೆದುಕೊಂಡು ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯಿದೆ. ಈ ನಿಟ್ಟಿನಲ್ಲಿ ನೇಕಾರಿಕೆ ಉಳಿವು ಹಾಗೂ ಈ ಸಮುದಾಯದ ಪ್ರಗತಿಯಾಗಬೇಕಾದರೆ ಸರ್ಕಾರದಿಂದ ಸಹಕಾರ ಮತ್ತು ನೆರವಿನ ಅಗತ್ಯವಿದ್ದು, ಸರ್ಕಾರ ಕೂಡಲೇ ದೇವಾಂಗ ಸಮುದಾಯದ ಆರ್ಥಿಕ ಹಾಗೂ ಶೈಕ್ಷಣಿಕ ಬೆಳವಣಿಗೆಗಾಗಿ ದೇವಾಂಗ ಅಭಿವೃದ್ದಿ ನಿಗಮ ಸ್ಥಾಪನೆ ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ದೇವಾಂಗ ಮಂಡಲಿ ಸಹ ಕಾರ್ಯದರ್ಶಿ ಯೋಗ ನಟರಾಜ್, ಮಾಜಿ ಅಧ್ಯಕ್ಷ ಎಂ.ಜಿ.ಶ್ರೀನಿವಾಸ್, ಗಾಯತ್ರಿ ಪೀಠ ಮಿತ್ರಬಳಗದ ಅಧ್ಯಕ್ಷ ಪಿ.ಸಿ.ಲಕ್ಷ್ಮೀನಾರಾಯಣ್, ಮುಖಂಡರಾದ ಎಚ್.ಎಸ್.ಶಿವಶಂಕರ್, ಚಿಕ್ಕಣ್ಣ, ಪಿ.ಸಿ.ವೆಂಕಟೇಶ್, ನಾಗರಾಜ್, ಕೆ.ಎನ್.ಜನಾರ್ದನ್ ಸೇರಿದಂತೆ ದೇವಾಂಗ ಮಂಡಲಿ ಕಾರ್ಯಕಾರಿ ಸಮಿತಿ ಹಾಗೂ ದೇವಾಂಗ ಸಮುದಾಯದವರು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ. ನಮ್ಮೊಂದಿಗೆ ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.

